ಶಿವಮೊಗ್ಗ ಗ್ರಾಮೀಣ ಭಾಗದಲ್ಲಿ ಜೆಡಿಎಸ್ ಮಹಿಳಾ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಮುಂದಿನ ಮೂರು ತಿಂಗಳ ಅವಧಿಗೆ ರೂಪಿಸಲಾಗಿದೆ ಎಂದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಸತೀಶ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳು ಜನರ ಸಮಸ್ಯೆಗಳಿಗೆ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಹಾಗಾಗಿ ಪ್ರಾದೇಶಿಕ ಪಕ್ಷವೊಂದರ ಅಗತ್ಯವಿದೆ. ಈ ನೆಲದ ಧ್ವನಿಯಾಗಿ ಕೆಲಸ ಮಾಡುತ್ತಿರುವ ಜೆಡಿಎಸ್ ಪಕ್ಷವನ್ನು ಚೇತನಗೊಳಿಸಲು ಮಹಿಳಾ ಘಟಕ ಹಲವು ಕಾರ್ಯಕ್ರಮ ಆಯೋಜಿಸಲಿದೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಈಗ ಪಕ್ಷ ಮತ್ತಷ್ಟು ಬಲಗೊಳ್ಳಲಿದೆ. ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಜೆಡಿಎಸ್ ತನ್ನ ಪ್ರಾಬಲ್ಯವನ್ನು ತೋರಿಸುತ್ತದೆ ಎಂದು ಗೀತಾ ಅಭಿಪ್ರಾಯಪಟ್ಟರು.
ಗ್ರಾಮಾಂತರ ಪ್ರದೇಶದಲ್ಲಿ ಮಾಜಿ ಶಾಸಕಿ ಶಾರದಾ ಪೂರ್ಯಾನಾಯ್ಕ್ ಅವರ ನೇತೃತ್ವದಲ್ಲಿ ಮಹಿಳಾ ಸಂಘಟನೆಯನ್ನು ಬಲಪಡಿಸಲಾಗುವುದು. ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ಪ್ರಚಾರಕ್ಕೆ ಹಾಗೂ ಸಂಘಟನೆಗೆ ಒತ್ತು ನೀಡಲಾಗುವುದು. ಪಂಚರತ್ನ ಯೋಜನೆ ಮೂಲಕ ಮಹಿಳೆಯರನ್ನು ಸಂಘಟಿಸಲಾಗುವುದು ಎಂದರು.
ಶಿಕ್ಷಣ, ಆರೋಗ್ಯ, ವಸತಿ, ರೈತರಿಗೆ ನೆರವು, ಯುವಕರಿಗೆ ಮಾರ್ಗದರ್ಶನ, ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಲಾಗುವುದು. ಶಾಲೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಹಿಳಾ ಘಟಕಗಳನ್ನು ಸ್ಥಾಪಿಸಲಾಗುವುದು. ಅದರಲ್ಲಿ ಜಾತಿವಾರು ಘಟಕ ಸ್ಥಾಪಿಸಲಾಗುವುದು. ಜಿಪಂ, ತಾಪಂ, ಗ್ರಾಪಂ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಜೆಡಿಎಸ್ ಸದಸ್ಯರು, ಮಾಜಿ ಸದಸ್ಯರೊಂದಿಗೆ ಸಭೆ ನಡೆಸಲಾಗುವುದು. ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿಕೊಂಡು ರ‍್ಯತಂತ್ರ ರೂಪಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕರ‍್ಲಹಳ್ಳಿ ಗ್ರಾಮಪಂಚಾಯಿತಿ ಸದಸ್ಯೆ ರೇಣುಕಾ ರವಿಕುಮಾರ್, ಹೇಮಾ, ಕೊಲ್ಲೂರಮ್ಮ, ಹೇಮಾ ಪರಮೇಶ್, ಮಹಾಲಕ್ಷ್ಮಿ ಶಿವಲಿಂಗಪ್ಪ ಮತ್ತಿತರರಿದ್ದರು.