ಶಿವಮೊಗ್ಗ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ಭಾರೀ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತವಾಗುವಂತೆ ಮಾಡಿತು. ಕಳೆದ ಮೂರು ದಿನಗಳಿಂದ ಸಂಜೆ ಹೊತ್ತು ಬರುತ್ತಿದ್ದ ಮಳೆ ಬುಧವಾರ ಹಗಲೇ ಅಬ್ಬರಿಸಿತು. ಸುಮಾರು ಒಂದೂವರೆ ಗಂಟೆಗೂ ಅಧಿಕ ಸಮಯ ಎಡಬಿಡದೆ ಸುರಿದ ವರ್ಷಧಾರೆಯಿಂದ ಗದ್ದೆ ತೋಟ ಜಲಾವೃತಗೊಂಡ ವರದಿಗಳು ಜಿಲ್ಲೆಯಾದ್ಯಂತ ಬಂದಿದೆ. ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿರುವುದರಿಂದ ನಿರ್ಮಾಣ ಹಂತದಲ್ಲಿರುವ ಕಾಮಗಾರಿಗೆ ಮಳೆಯಿಂದ ತೊಂದರೆಯಾಗಿದೆ. ನಗರದ ಬಹುತೇಕ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತ್ತು. ರಾಜಾಕಾಲುವೆ ಹೋಗುವ ಏರಿಯಾಗಳಲ್ಲಿ ನಡುರಸ್ತೆಯಲ್ಲಿಯೇ ನೀರು ಹರಿಯುತ್ತಿರುವ ದೃಶ್ಯ ಕಂಡು ಬಂದಿತು.
ಶಿವಮೊಗ್ಗ ನಗರದ ಕೆ.ಆರ್.ಪುರಂ, ಅಂಗಳಯ್ಯನ ಕೆರೆ, ವೆಂಕಟೇಶ್ ನಗರ, ಜಯನಗರ, ಹೊಸಮನೆ, ಗೋಪಾಲಗೌಡ ಬಡಾವಣೆ ಹಳೆ ಶಿವಮೊಗ್ಗ ಭಾಗದ ತಗ್ಗು ಪ್ರದೇಶಗಳಲ್ಲಿ ಕೆರೆ ಸದೃಶವಾದ ದೃಶ್ಯ ಸಾಮಾನ್ಯವಾಗಿತ್ತು. ಕೆ.ಆರ್.ಪುರಂ ತಮಿಳು ಶಾಲೆ ಸಮೀಪದ ಮನೆಗಳಿಗೆ ಡ್ರೈನೇಜ್ ನೀರು ನುಗ್ಗಿತ್ತು. ಬೈ ಪಾಸ್ ರಸ್ತೆಯಲ್ಲಿನ ಬೈಕ್ ಶೋರೂಂ ವೊಂದಕ್ಕೆ ನೀರು ನುಗ್ಗಿತ್ತು. ಹೊಸಮನೆ ಬಡಾವಣೆಯ ಶಿವಮೊಗ್ಗ ಗ್ಯಾಸ್ ಏಜೆನ್ಸಿ ಹಿಂಭಾಗದಲ್ಲಿ ೭೦ ಮನೆಗಳು ಜಲಾವೃತಗೊಂಡಿದ್ದವು.
ಕೊಚ್ಚಿ ಹೋದ ಕಾಮಗಾರಿ:
ಶಿವಮೊಗ್ಗ ಸ್ಮಾರ್ಟ್ ಸಿಟಿ ಕಾಮಗಾರಿಗೆ ಹಗಲು ಹೊತ್ತೇ ಸುರಿದ ಮಳೆಯಿಂದ ಅಡಚಣೆಯಾಯಿತು. ರಸ್ತೆ ಹಾಗೂ ಚರಂಡಿ ಕಾಮಗಾರಿ ನಡೆಯುವ ಸ್ಥಳದಲ್ಲಿ ಕೆಲವೆಡೆ ನೀರು ನುಗ್ಗಿದ್ದರಿಂದ ಮಾಡಿದ್ದ ಕೆಲಸ ಕೊಚ್ಚಿಹೋಗಿದೆ.
ಕೃಷಿ ಭೂಮಿಗೆ ನೀರು:
ಜಿಲ್ಲೆಯಾದ್ಯಂತ ಏಕಕಾಲಕ್ಕೆ ಸುರಿದ ಮಳೆಯಿಂದ ಗ್ರಾಮೀಣ ಪ್ರದೇಶಗಳಲ್ಲಿಯೂ ಆಸ್ತಿ ಪಾಸ್ತಿಗೆ ಹಾನಿಯಾದ ವರದಿಯಾಗಿದೆ. ಬೆಳೆದು ನಿಂತ ಫಸಲಿನ ಮೇಲೆ ನೀರು ನುಗ್ಗಿದೆ, ಕೆಲವು ಭಾಗಗಳಲ್ಲಿ ತೋಟಕ್ಕೆ ನೀರು ನುಗ್ಗಿದ ವಿಡಿಯೊ ಹಾಗೂ ಫೋಟೋಗಳನ್ನು ಜನರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.