ಬಿಜೆಪಿಯಲ್ಲಿ ನನ್ನನ್ನು ಯಾರು ಸೈಡ್‌ಲೈನ್ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿಯಲ್ಲಿ ತಮ್ಮನ್ನು ಸೈಡ್‌ಲೈನ್ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಶಿವಮೊಗ್ಗದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು,ಪಕ್ಷದಲ್ಲಿ ತಮ್ಮನ್ನು ಸೈಡ್‌ಲೈನ್ ಮಾಡಲಾಗಿದೆ ಎಂಬುದು ಶುದ್ದ ಸುಳ್ಳು.ಮುಖ್ಯಮಂತ್ರಿ ಸ್ಥಾನಕ್ಕೆ ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡಿದ್ದೇನೆ ಹೊರತು ಯಾರ ಒತ್ತಡಕ್ಕೂ ಮಣಿದಿಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ನಾಲಿಗೆ ಹದ್ದುಬಸ್ತಿನಲ್ಲಿಟ್ಟುಕೊಳ್ಳಲಿ
ಆರ್.ಎಸ್.ಎಸ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ದ ಹೇಳಿಕೆ ನೀಡುತ್ತಿರುವ ಸಿದ್ದರಾಮಯ್ಯ ವಿರುದ್ದ ಯಡಿಯೂರಪ್ಪ ಗರಂ ಆಗಿದ್ದಾರೆ.ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕರಾಗಿದ್ದಾರೆ.ಅವರ ಸ್ಥಾನಕ್ಕೆ ಈ ಹೇಳಿಕೆಗಳು ಶೋಭೆ ತರುವುದಿಲ್ಲ.ಇನ್ನಾದರೂ ನಾಲಿಗೆ ಹದ್ದುಬಸ್ತಿನಲ್ಲಿಟ್ಟುಕೊಂಡು ಗೌರವದಿಂದ ಮಾತನಾಡಲಿ,ಇಲ್ಲವಾದರೆ ಜನರೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಅಲ್ಪಸಂಖ್ಯಾತರಿಗೆ ಮೋದಿ ವಂಚಿಸಿಲ್ಲ
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹಾಗೂ ನನ್ನ ಸರ್ಕಾರ ಹಾಗೂ ಈಗಿನ ಸರ್ಕಾರ ಯಾರಿಗೂ ಅನ್ಯಾಯ ಮಾಡಿಲ್ಲ.ಅಲ್ಪಸಂಖ್ಯಾತರಿಗೆ ವಂಚನೆ ಮಾಡಿದ ಉದಾಹರಣೆ ಇದ್ದರೆ ನನಗೆ ಕೊಡಿ.ಅವರಿಗೊಂದು,ಇವರಿಗೊಂದು ಯಾವತ್ತು ಮಾಡಿಲ್ಲ.ಭೇದ ಮಾಡದೆ ಎಲ್ಲರನ್ನು ಸಮಾನವಾಗಿ ನೋಡಿದೆ.ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರಾಮಾಣಿಕವಾಗಿ ಕೆಲಸ ಮಾಡಿದೆ.ಹಾಗಾಗಿ ಯಾವುದೇ ಅಲ್ಪಸಂಖ್ಯಾತರು ಬೇಸರ ಮಾಡಿಕೊಳ್ಳುವ ವಿಚಾರವೇ ಬರಲ್ಲ ಎಂದರು.
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಲೆ ಏರಿಕೆಯ ವಿಚಾರವನ್ನು ದೊಡ್ಡದಾಗಿ ಮಾಡಿ ಮತ ಸೆಳೆಯಲು ಮುಂದಾಗಿದೆ. ಆದರೆ ಇದು ಫಲಿಸದು.ಬೆಲೆ ಏರಿಕೆ ಎಲ್ಲಾ ಕಾಲದಲ್ಲೂ ಆಗುತ್ತದೆ. ಬೆಲೆ ಏರಿಕೆ ಯಾವ ಕಾರಣಕ್ಕೆ ಆಗುತ್ತದೆ ಎಂದು ಎಲ್ಲರಿಗೂ ತಿಳಿದಿದೆ. ಇದು ಉಪ ಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದರು.
ಚುನಾವಣಾ ಕಣದಲ್ಲಿ ಪ್ರಚಾರ
ಸಿಂದಗಿ ಮತ್ತು ಹಾನಗಲ್ ಉಪ ಚುನಾವಣಾ ಕಣದಲ್ಲಿ ಪ್ರಚಾರ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅ.೨೦ ಮತ್ತು ೨೧ರಂದು ಸಿಂದಗಿ, ಅ.೨೨ ಮತ್ತು ೨೩ ರಂದು ಹಾನಗಲ್’ನಲ್ಲಿ ಪ್ರಚಾರ ಕಾರ್ಯ ನಡೆಸಲಾಗುತ್ತದೆ. ಅಗತ್ಯ ಬಿದ್ದರೆ ಹಾನಗಲ್’ನಲ್ಲಿ ಹೆಚ್ಚುವರಿಯಾಗಿ ಇನ್ನೊಂದು ದಿನ ಪ್ರಚಾರ ಮಾಡುತ್ತೇನೆ. ಮುಖ್ಯಮಂತ್ರಿ ಬೊಮ್ಮಾಯಿ ಅವರು ಒಂದು ಕಡೆ, ನಾನು ಒಂದು ಕಡೆಯಿಂದ ಪ್ರಚಾರ ನಡೆಸುತ್ತೇನೆ ಎಂದು ಯಡಿಯೂರಪ್ಪ ತಿಳಿಸಿದರು.