ಸೇವೆಯಲ್ಲಿರುವಾಗ ಸಮಾಜಕ್ಕಾಗಿ ಪ್ರಾಣ ಕಳೆದುಕೊಂಡು ಹುತಾತ್ಮರಾದ ಪೊಲೀಸರಿಗೆ ಗೌರವ ಸಲ್ಲಿಸುವುದು ಮತ್ತು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಶಿವಮೊಗ್ಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮುಸ್ತಫಾ ಹುಸೇನ್ ಹೇಳಿದ್ದಾರೆ.
ಜಿಲ್ಲಾ ಸಶಸ್ತ್ರ ಪೊಲೀಸ್ ಕವಾಯತು ಮೈದಾನದಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಏರ್ಪಡಿಸಿದ್ದ ಪೊಲೀಸ್ ಹುತಾತ್ಮ ದಿನಾಚರಣೆ – ೨೦೨೧ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
೧೯೬೦ ಅಕ್ಟೋಬರ್ ೨೧ರಂದು ನಮ್ಮ ದೇಶದ ೧೦ ಸೈನಿಕರು ಹುತಾತ್ಮರಾದರು. ಆ ಸಂದರ್ಭದಲ್ಲಿ ನಮ್ಮಲ್ಲಿ ಶಸ್ತ್ರಾಸ್ತ್ರಗಳ ಹಾಗೂ ಸಿಬ್ಬಂದಿಗಳ ಕೊರತೆ ಇತ್ತು. ಅಂದಿನ ಸೇನಾಧಿಕಾರಿಗಳು ಹುತಾತ್ಮರ ನೆನಪಿಗಾಗಿ ಈ ದಿನವನ್ನು ರಾಷ್ಟ್ರದಲ್ಲಿ ಸೇವೆಯಲ್ಲಿರುವಾಗ ವೀರಮರಣವನ್ನಪ್ಪಿದವರ ಸ್ಮರಿಸುವ ಮತ್ತು ಗೌರವಿಸುವ ಸಲುವಾಗಿ ಪೊಲೀಸ್ ಹುತಾತ್ಮ ದಿನಾಚರಣೆಯನ್ನಾಗಿ ಆಚರಿಸಿಕೊಂಡು ಬಂದಿದ್ದೇವೆ ಎಂದರು.
ಪೊಲೀಸ್ ಕೆಲಸ ಅತ್ಯಂತ ಒತ್ತಡ ಮತ್ತು ಸವಾಲಿನ ಕೆಲಸ. ತಮ್ಮ ನಿತ್ಯದ ಕೆಲಸದ ಜೊತೆಗೆ ಅವರು ಅನೇಕ ಕಠಿಣ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ. ದೇಶದಲ್ಲಿ ಅನೇಕ ಪೊಲೀಸರು ಕರ್ತವ್ಯದಲ್ಲಿರುವಾಗ ಬಲಿದಾನ ಮಾಡಿದ್ದಾರೆ. ಕರೋನಾ ಸಂದರ್ಭದಲ್ಲಿ ೨ ವರ್ಷಗಳ ಕಾಲ ದಿನದ ೨೪ ಗಂಟೆಯೂ ಕೆಲಸ ಮಾಡಿ ಜನರನ್ನು ರಕ್ಷಿಸಿದ್ದಾರೆ. ಮೈಸೂರಿನಲ್ಲಿ ಕರ್ತವ್ಯದಲ್ಲಿದ್ದಾಗ ಪೊಲೀಸ್ ಅಧಿಕಾರಿಗಳಾದ ಎಸ್ಪಿ ಹರಿಕೃಷ್ಣ ಮತ್ತು ಶಕೀಲ್ ಅಹ್ಮದ್ ಅವರನ್ನು ಕಾಡುಗಳ್ಳ ವೀರಪ್ಪನ್ ಹತ್ಯೆ ಮಾಡಿದ. ಆ ಸಂದರ್ಭದಲ್ಲಿ ಇಡೀ ಮೈಸೂರು ನಗರ ದುಃಖ ವ್ಯಕ್ತಪಡಿಸಿ, ಸ್ವಯಂ ಪ್ರೇರಿತ ಬಂದ್ ಆಚರಿಸಿ ಅವರಿಗೆ ಗೌರವ ಸಲ್ಲಿಸಿದ್ದರು. ಇದು ನನ್ನ ಜೀವನದ ಮರೆಯಲಾಗದ ಘಟನೆ. ಸಮಾಜ ನಿಮ್ಮ ಜೊತೆಗಿದೆ. ಹುತಾತ್ಮ ಪೊಲೀಸರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಶಾಸಕ ಆಯನೂರು ಮಂಜುನಾಥ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಗಡಿ ಮಾತ್ರವಲ್ಲ ಎಲ್ಲ ಕಡೆಯೂ ಸಮಾಜ ವಿದ್ರೋಹಿಗಳ ರೂಪದಲ್ಲಿ ಕ್ರಿಮಿನಲ್ಗುಳು ತಾಂಡವವಾಡುತ್ತಿದ್ದಾರೆ. ಅವರನ್ನು ನಿಗ್ರಹಿಸುವ ಸಂದರ್ಭದಲ್ಲಿ ನಮ್ಮ ಅನೇಕ ಪೊಲೀಸ್ ಸಹೋದರರು ಬಲಿಯಾಗುತ್ತಾರೆ. ಈ ಸಮಾಜ ರಾತ್ರಿ ಸುಖದಿಂದ ನಿದ್ರೆ ಮಾಡಬೇಕಾದರೆ ಪೊಲೀಸರು ನಿದ್ದೆಗೆಟ್ಟು ಸೇವೆ ಮಾಡುತ್ತಾರೆ. ಅವರನ್ನು ನೆನಪು ಮಾಡುವುದು ಅತಿ ಅವಶ್ಯ. ಇನ್ನೊಬ್ಬರಿಗಾಗಿ ಗಂಧದ ಕೊರಡಿನಂತೆ ಸೇವೆ ಸಲ್ಲಿಸುವ ಇಲಾಖೆ ಇದ್ದರೆ ಅದು ಪೊಲೀಸ್ ಇಲಾಖೆ ಮಾತ್ರ ಎಂದರು.
ಸಂಸತ್ ಭವನದ ಮೇಲೆ ದಾಳಿಯಾದಾಗ ಹಲವು ಪೊಲೀಸರು ಪ್ರಾಣ ತ್ಯಾಗ ಮಾಡಿ, ಭಯೋತ್ಪಾದಕರು ಒಳಗೆ ಪ್ರವೇಶಿಸದಂತೆ ತಡೆದು ದೇಶದ ಮಾನವನ್ನು ರಕ್ಷಿಸಿದ್ದಾರೆ. ಬದುಕಲು ಬಡಿದಾಡುವ ಮನುಷ್ಯಜೀವಿ ಸಮಾಜಕ್ಕಾಗಿ ಪ್ರಾಣತ್ಯಾಗ ಮಾಡಿದ ಪೊಲೀಸರಿಗೆ ಋಣಿಯಾಗಿರಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್, ೨೦೨೦-೨೧ನೇ ಸಾಲಿನಲ್ಲಿ ಹುತಾತ್ಮರಾದ ಪೊಲೀಸರ ಹೆಸರನ್ನು ಓದಿದರು.
ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಡಾ. ಶೇಖರ್ ಉಪಸ್ಥಿತರಿದ್ದರು.