ಜಿಲ್ಲೆಯಲ್ಲಿ ಶೂನ್ಯ ಸ್ಥಿತಿಯಲ್ಲಿರುವ ಕಾಂಗ್ರೆಸ್‌ಗೆ ಜೆಡಿಎಸ್‌ನ ಒಂದು ತುಣುಕು ಸೇರ್ಪಡೆಗೊಂಡಿದೆ ಶಾಸಕ ಕುಮಾರ್ ಬಂಗಾರಪ್ಪ ಹೇಳಿದರು. ಸೊರಬ ಪಟ್ಟಣದ ಆಲೇಕಲ್ ಸಭಾ ಭವನದಲ್ಲಿ ಬಿಜೆಪಿಯಿಂದ ಸೋಮವಾರ ಹಮ್ಮಿಕೊಂಡ ತಾಲ್ಲೂಕು ಬಿಜೆಪಿ ಮಂಡಲದ ನೂತನ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾಜಿ ಶಾಸಕ ಮಧು ಬಂಗಾರಪ್ಪ ಅವರ ಕಾಂಗ್ರೆಸ್ ಸೇರ್ಪಡೆ ಬಗ್ಗೆ ವ್ಯಂಗ್ಯವಾಡಿದ ಕುಮಾರ್ ಬಂಗಾರಪ್ಪ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಧು ಬಂಗಾರಪ್ಪ ತಮ್ಮ ಅವಧಿಯಲ್ಲಿ ಬಗರ್ ಹುಕುಂನಲ್ಲಿ ಮಾಡಿರುವ ಭ್ರಷ್ಟಾಚಾರದ ಅಂಕಿ, ಅಂಶಗಳನ್ನು ಜನರ ಮುಂದಿಟ್ಟು ಮತ ಪಡೆದು ನಾನು ಶಾಸಕನಾಗಿ ಗೆದ್ದಿದ್ದೇನೆ. ಮತ್ತೆ ಮಧು ಬಂಗಾರಪ್ಪ ಶಾಸಕರಾಗುವ ಭ್ರಮೆಯಲ್ಲಿದ್ದಾರೆ ಎಂದು ಲೇವಡಿ ಮಾಡಿದರು.
ಜನ ಪ್ರತಿನಿಧಿಗಳು ಕಾರ್ಯಕರ್ತರು ಮತ್ತು ಪಕ್ಷದ ನಡುವೆ ಸೇತುವೆಯಾಗಿರಬೇಕು
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ ಕಾರ್ಯಕರ್ತರ ಪರಿಶ್ರಮದಿಂದ ಜನಪ್ರತಿನಿಧಿಗಳಾಗಿ ಆಯ್ಕೆಯಾಗಿರುವ ನಾವು ಕಾರ್ಯಕರ್ತರು ಹಾಗೂ ಪಕ್ಷಕ್ಕೆ ಸೇತುವೆಯಾಗಿ ಕೆಲಸ ಮಾಡಿದಾಗ ಮಾತ್ರ ಪಕ್ಷದ ಸಂಘಟನೆಗೆ ಮತ್ತಷ್ಟು ಶಕ್ತಿ ಬರಲಿದೆ ಎಂದರು.
ಪ್ರಧಾನಿ ನರೇಂದ್ರ ನೇತೃತ್ವದ ಕೇಂದ್ರ ಸರ್ಕಾರ ಬಹುಸಂಖ್ಯಾತರ ಭಾವನೆಗಳನ್ನು ಅರ್ಥಮಾಡಿಕೊಂಡು ರಾಮ ಮಂದಿರ ಶಿಲಾನ್ಯಾಸ ನೆರವೇರಿಸಲಾಗಿದೆ. ಅಲ್ಲದೇ ಕೃಷಿಗೆ ಆದ್ಯತೆ ನೀಡಲಾಗಿದೆ. ಬಡವರಿಗೆ ರಿಯಾಯಿತಿ ದರದಲ್ಲಿ ಆರೋಗ್ಯ ಸೇವೆ, ರೈತರ ಬದುಕಿಗೆ ಆಸರೆಯಾದ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ತ್ರೈಮಾಸಿಕ ಕಂತಿನಲ್ಲಿ ರೈತರ ಖಾತೆಗೆ ಪ್ರೋತ್ಸಾಹ ಧನ ಜಮೆ ಮಾಡುವ ಮೂಲಕ ಆರ್ಥಿಕತೆ ಬಲಪಡಿಸಲಾಗಿದೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲೂಕು ಘಟಕದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು ನೂತನವಾಗಿ ನೇಮಕಗೊಂಡಿರುವ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಜೊತೆ ಪಕ್ಷ ಸಂಘಟನೆಗೆ ಒತ್ತು ನೀಡಬೇಕು ಎಂದರು. ಮಾಜಿ ತಾಲೂಕು ಅಧ್ಯಕ್ಷ ಗುರುಪ್ರಸನ್ನಗೌಡ ಅವರನ್ನು ಜಿಲ್ಲಾ ಕಾರ್ಯದರ್ಶಿಯಾಗಿ, ಹಿಂದುಳಿದ ವರ್ಗದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನಿರಂಜನ್ ಕುಪ್ಪಗಡ್ಡೆ ಅವರನ್ನು ನೇಮಕ ಮಾಡಲಾಗಿದೆ ಎಂದು ಅವರು, ನೂತನ ಪದಾಧಿಕಾರಿಗಳ ಪಟ್ಟಿ ಘೋಷಿಸಿದರು.
ವಿಧಾನ ಪರಿಷತ್ ಸದಸ್ಯೆ ಭಾರತಿಶೆಟ್ಟಿ ಮಾತನಾಡಿದರು. ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಗುರುಪ್ರಸನ್ನಗೌಡ ಅವರ ಅನುಪಸ್ಥಿತಿಯಲ್ಲಿ ನೂತನ ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ ಅವರಿಗೆ ಜಿಲ್ಲಾಧ್ಯಕ್ಷ ಮೇಘರಾಜ್ ಅವರು ಅಧಿಕಾರ ಹಸ್ತಾಂತರ ಮಾಡಿದರು. ಜಿಲ್ಲಾ ಕಾರ್ಯದರ್ಶಿ ಬಿ.ಕೆ. ಶ್ರೀನಾಥ್, ಎಪಿಎಂಸಿ ಅಧ್ಯಕ್ಷ ದಯಾನಂದಗೌಡ, ಗಜಾನನರಾವ್ ಉಳವಿ, ಪ್ರಭಾಕರ್ ರಾಯ್ಕರ್, ಪಾಣಿ ರಾಜಪ್ಪ, ಯೋಗೇಶ್, ಶಿವಕುಮಾರ್ ಕಡಸೂರು, ಮಲ್ಲಿಕಾರ್ಜುನ, ದೇವೇಂದ್ರಪ್ಪ, ಸುರೇಶ್ ಉದ್ರಿ, ಎಂ.ಡಿ.ಉಮೇಶ್, ಸ್ವಪ್ನಾ, ಶಾರದಮ್ಮ, ವಸುಂಧರಾಭಟ್ ಇತರರಿದ್ದರು.
ತಾಲೂಕು ಘಟಕದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು ನೂತನವಾಗಿ ನೇಮಕಗೊಂಡಿರುವ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಜೊತೆ ಪಕ್ಷ ಸಂಘಟನೆಗೆ ಒತ್ತು ನೀಡಬೇಕು
– ಟಿ.ಡಿ.ಮೇಘರಾಜ್ , ಬಿಜೆಪಿ ಜಿಲ್ಲಾಧ್ಯಕ್ಷ