ಪ.ಜಾತಿ, ಪಂಗಡ ಯೋಜನೆ ಪ್ರಗತಿ ಪರಿಶೀಲನೆ
ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಸೂಚನೆ ನೀಡಿದರು.
ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ.ಜಾತಿ ಮತ್ತು ಪಂಗಡ ಯೋಜನೆಗಳ ಅನುಷ್ಟಾನ ಸಭೆಯಲ್ಲಿ ಪ್ರಗತಿ ಪರಿಶೀಲನೆ ನಡೆಸಿದರು.
ಅನುದಾನ ಬಿಡುಗಡೆಯಾಗುವ ತನಕ ಕಾಯದೆ, ಫಲಾನುಭವಿಗಳ ಆಯ್ಕೆ ಯೋಜನೆ ಅನುಷ್ಟಾನಕ್ಕೆ ಎಲ್ಲಾ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಬೇಕು. ಅನುದಾನ ಬಿಡುಗಡೆಯಾಗಿದ್ದರೆ ಟೆಂಡರ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ನಿಗದಿತ ಅವಧಿಯ ಒಳಗಾಗಿ ಕಾರ್ಯಕ್ರಮ ಅನುಷ್ಟಾನಗೊಳಿಸಬೇಕು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯಕ್ರಮ ಅನುಷ್ಟಾನವನ್ನು ತ್ವರಿತಗೊಳಿಸಬೇಕು. ನಿಗದಿತ ಪ್ರಗತಿಯನ್ನು ಕೈಗೊಳ್ಳಲು ವಿಫಲರಾಗುವ ಅಧಿಕಾರಿಗಳಿಗೆ ನೊಟೀಸ್ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿ ಅವರು ತಿಳಿಸಿದರು.
ಶಿಕಾರಿಪುರ ತಾಲೂಕಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಸ್ಮಶಾನ ಭೂಮಿ ಸಮಸ್ಯೆಯಿದ್ದು, ಇದನ್ನು ಆದಷ್ಟು ಬೇಗನೆ ಪರಿಹರಿಸುವಂತೆ ವಿಧಾನ ಪರಿಷತ್ ಸದಸ್ಯ ಪ್ರಸನ್ನ ಕುಮಾರ್ ಅವರು ತಿಳಿಸಿದರು. ಅರಣ್ಯ ಜಮಿನಿನಲ್ಲಿರುವ ಸ್ಮಶಾನ ಭೂಮಿಗೆ ಹಕ್ಕುಪತ್ರ ನೀಡಲು ಸಮಸ್ಯೆಯಿದ್ದು, ಇತರ ಸೂಕ್ತ ಸ್ಥಳವನ್ನು ಗುರುತಿಸುವಂತೆ ತಹಶೀಲ್ದಾರ್ ಅವರಿಗೆ ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು.
ಎಲ್ಲಾ ಇಲಾಖೆಗಳ ಮುಖ್ಯಸ್ಥರು ಪ್ರತಿ ತಿಂಗಳ 5ರ ಒಳಗಾಗಿ ಪರಿಶಿಷ್ಟ ಜಾತಿ ಪಂಗಡಗಳಿಗೆ ಮೀಸಲಾಗಿರಿಸಿರುವ ಅನುದಾನದ ವೆಚ್ಚದ ಪ್ರಗತಿಯನ್ನು ಸಲ್ಲಿಸಬೇಕು. ನಿಗದಿತ ಅವಧಿಯ ಒಳಗಾಗಿ ಅನುದಾನ ವೆಚ್ಚ ಮಾಡಲು ವಿಫಲರಾದರೆ ಸಂಬಂಧಪಟ್ಟ ಅಧಿಕಾರಿಗಳೆ ನೇರ ಹೊಣೆಗಾರರು ಎಂದು ಅವರು ಎಚ್ಚರಿಕೆ ನೀಡಿದರು.
ಮ್ಯಾನುವಲ್ ಸ್ಕ್ಯಾವೆಂಜಿಂಗ್: ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮ್ಯಾನುವಲ್ ಸ್ಕ್ಯಾವೆಂಜಿಂಗ್ ಅವಕಾಶ ನೀಡಬಾರದು. ಇದೇ ರೀತಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ತೆರೆದ ಚರಂಡಿಗಳಲ್ಲಿ ಮಲ ವಿಸರ್ಜನೆಗೆ ಅವಕಾ ಕಲ್ಪಿಸಬಾರದು. ಸಮುದಾಯ ಶೌಚಾಲಯಗಳ ಸ್ವಚ್ಛತಾ ಕಾರ್ಯ ಕೈಗೊಳ್ಳುವವರಿಗೆ ಕನಿಷ್ಟ ವೇತನ ಪಾವತಿಗೆ ಕ್ರಮ ಕೈಗೊಳ್ಳಬೇಕು. ಪೌರಕಾರ್ಮಿಕರು ತಮಗೆ ನೀಡಲಾಗಿರುವ ಬೂಟ್, ಕೈಗವಸು ಸೇರಿದಂತೆ ಸುರಕ್ಷತಾ ಪರಿಕರಗಳನ್ನು ಕಡ್ಡಾಯವಾಗಿ ಧರಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಹೊನ್ನಳ್ಳಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ನಾಗರಾಜ್, ಯೋಜನಾ ನಿರ್ದೇಶಕ ಮೂಕಪ್ಪ ಕರಿಭೀಮಣ್ಣನವರ್, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.