ಕುವೆಂಪು ವಿವಿಯಲ್ಲಿ ಮಾತಾಡ್ ಮಾತಾಡ್ ಕನ್ನಡ ಅಭಿಯಾನದ ಕಾರ್ಯಕ್ರಮ
ಶಂಕರಘಟ್ಟ, ಅ. ೨೮: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ‘ಮಾತಾಡ್ ಮಾತಾಡ್ ಕನ್ನಡ’ ಕನ್ನಡಕ್ಕಾಗಿ ನಾವು ಕರ್ನಾಟಕ ರಾಜ್ಯೋತ್ಸವ ಅಭಿಯಾನದ ಅಂಗವಾಗಿ ವಿಶ್ವದಾದ್ಯಂತ ಗುರುವಾರ ಬೆಳಿಗ್ಗೆ ನಡೆದ ಲಕ್ಷ ಕಂಠಗಳ ಕನ್ನಡ ಗೀತಗಾಯನ ಕಾರ್ಯಕ್ರಮದಲ್ಲಿ ಕುವೆಂಪು ವಿಶ್ವವಿದ್ಯಾಲಯ ಕೂಡ ಕೈಜೋಡಿಸಿದ್ದು, ಜ್ಞಾನ ಸಹ್ಯಾದ್ರಿಯ ಎಸ್. ಪಿ. ಹಿರೇಮಠ್ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು.
ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಅಧ್ಯಾಪಕರು, ಮತ್ತು ಅಧ್ಯಾಪಕೇತರ ಸಿಬ್ಬಂದಿ ಸಾಮೂಹಿಕ ಗೀತಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕುವೆಂಪು ವಿರಚಿತ ‘ಬಾರಿಸು ಕನ್ನಡ ಡಿಂಡಿಮ,’ ಕೆ. ಎಸ್. ನಿಸಾರ್ ಅಹಮದ್ ರಚನೆಯ ‘ನಿತ್ಯೋತ್ಸವ,’ ಮತ್ತು ಹಂಸಲೇಖ ಅವರ ರಚನೆಯ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡುಗಳಿಗೆ ಧ್ವನಿಗೂಡಿಸಿದರು.
ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಈ ಸಂದರ್ಭದಲ್ಲಿ ಮಾತನಾಡಿ, ಕರ್ನಾಟಕದ ಜನತೆಯಲ್ಲಿ ಕನ್ನಡ ನಾಡು-ನುಡಿ ಬಗ್ಗೆ ಪ್ರೀತಿ ಅಭಿಮಾನ ಮೂಡಿಸಲು ಈ ರೀತಿಯ ಕಾರ್ಯಕ್ರಮಗಳು ಅತ್ಯವಶ್ಯಕ. ವಿಶ್ವದಾದ್ಯಂತ 50 ಲಕ್ಷ ಜನರು ಸರ್ಕಾರ ಸೂಚಿಸಿರುವ ಮೂರು ಗೀತೆಗಳನ್ನು ಹಾಡುತ್ತಿದ್ದಾರೆ. ಕನ್ನಡದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿನೂತನವಾದ ಪರಿಕಲ್ಪನೆ ಇದಾಗಿದ್ದು, ಕನ್ನಡಿಗರ ಆತ್ಮ ಗೌರವ ಹೆಚ್ಚಿಸುಕೊಳ್ಳುವುದರ ಜೊತೆಗೆ ಇತರೆ ಭಾಷಿಗರಿಗೂ ಕನ್ನಡ ಕಲಿಸಲು ಈ ಕಾರ್ಯಕ್ರಮ ಸ್ಫೂರ್ತಿಯಾಗಲಿ ಎಂದರು.
ರಾಜ್ಯದ ಎಲ್ಲಾ ಸರ್ಕಾರಿ ಇಲಾಖೆಗಳು, ಸರ್ಕಾರಿ ಶಾಲಾ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಸಾಮೂಹಿಕ ಗೀತಗಾಯನ ಕಾರ್ಯಕ್ರಮ ಆಯೋಜಿಸುವ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಯೋಗಕ್ಕೆ ವಿಶ್ವವಿದ್ಯಾಲಯದಲ್ಲಿ ಹುರುಪಿನ ಪ್ರತಿಕ್ರಿಯೆ ಲಭಿಸಿದ್ದು, ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ, ಕುಲಸಚಿವೆ ಜಿ. ಅನುರಾಧ, ಪರೀಕ್ಷಾಂಗ ಕುಲಸಚಿವ ಪ್ರೊ. ಸಿ. ಎಂ. ತ್ಯಾಗರಾಜ, ಕನ್ನಡ ಭಾರತಿ ನಿರ್ದೇಶಕ ಡಾ. ಜಿ. ಪ್ರಶಾಂತ ನಾಯಕ್, ಕಲಾ ನಿಕಾಯದ ಡೀನರಾದ ಪ್ರೊ. ಜಯರಾಂ ಭಟ್ ಮತ್ತಿತರರು ಭಾಗವಹಿಸಿ ಗೀತೆಗಳಿಗೆ ಧ್ವನಿಗೂಡಿಸಿದರು. ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಎಂ. ಆರ್. ಸತ್ಯಪ್ರಕಾಶ್ ಕನ್ನಡದ ಪ್ರತಿಜ್ಞಾ ವಿಧಿಯನ್ನು ಭೋಧಿಸಿದರು.