ಬಹುವರ್ಷಗಳಿಂದ ಬೀಗ ಹಾಕಿರುವ ತುಂಗಾಭದ್ರಾ ಸಕ್ಕರೆ ಕಾರ್ಖಾನೆ ಕಾರ್ಮಿಕರಿಗೆ ಬಾಕಿ ಇರುವ ವೇತನ ಪರಿಹಾರವನ್ನು ಅಕ್ಟೋಬರ್ 31 ರಂದು ಮತ್ತು ನವೆಂಬರ್ 1 ರಂದು ಶಿವಮೊಗ್ಗ ನಗರದ ಸಂತ ಥಾಮಸ್ ಭವನದಲ್ಲಿ ವಿತರಣೆ ಮಾಡಲಾಗುವುದು ಎಂದು ಕಾರ್ಮಿಕ ನಾಯಕ ಹಾಗೂ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನೇಕ ವರ್ಷಗಳ ನಂತರ ಹೋರಾಟದ ಫಲವಾಗಿ ತ್ರಿಪಕ್ಷೀಯ ಜಂಟಿ ಸಭೆಯ ಒಪ್ಪಂದದಂತೆ ,ಕಾರ್ಮಿಕರಿಗೆ 26 ತಿಂಗಳ ಸಂಬಳ, 6 ತಿಂಗಳ ಗ್ರಾಚುಟಿ ಮತ್ತು 3 ತಿಂಗಳ ಬೋನಸ್ ಹಾಗೂ ಈ ಬರಬೇಕಾದ ಹಣಕ್ಕೆ ಬ್ಯಾಂಜಕಿನ ಸರಳ ಬಡ್ಡಿಯೂ ಸೇರಿಸಿ ಎಲ್ಲಾ ಕಾರ್ಮಿಕರಿಗೆ ಪರಿಹಾರ ನೀಡಲು ಕರಾರು ಮಾಡಿಕೊಳ್ಳಲಾಗಿದೆ ಎಂದರು.
ಈಗಾಗಲೇ ಸಾಂಕೇತಿಕವಾಗಿ 12 ಜನ ಕಾರ್ಮಿಕರಿಗೆ ಚೆಕ್ ವಿತರಿಸಲಾಗಿದೆ. ಉಳಿದ ಎಲ್ಲಾ ಕಾರ್ಮಿಕರಿಗೆ ಕಾರ್ಮಿಕ ಇಲಾಖೆ ಅಧಿಕಾರಿಗಳು, ಕಾರ್ಮಿಕ ಸಂಘಟನೆ ಮುಖಂಡರ ಸಮ್ಮುಖದಲ್ಲಿ ಪರಿಹಾರದ ಚೆಕ್ ನೀಡಲಾಗುವುದು. ಕಾರ್ಮಿಕರು ತಪ್ಪದೇ ಬಂದು ಪರಿಹಾರ ಹಣವನ್ನು ತೆಗೆದುಕೊಳ್ಳಬೇಕು. ಮತ್ತು ಕಾರ್ಮಿಕರು ಮೃತಪಟ್ಟಿದ್ದಲ್ಲಿ ಅಗತ್ಯ ದಾಖಲೆಗಳೊಂದಿಗೆ ಅವರ ಕುಟುಂಬದವರು ಖುದ್ದು ಹಾಜರಾಗಿ ಪರಿಹಾರ ಪಡೆಯಬಹುದು ಎಂದು ತಿಳಿಸಿದರು.
ನಮ್ಮ ಈ ತೀರ್ಮಾನವನ್ನು ಕೆಲವು ಕಾರ್ಮಿಕರು ಒಪ್ಪದೇ, ನ್ಯಾಯಾಲಯದ ಹೋರಾಟವನ್ನು ಮುಂದುವರೆಸುತ್ತೇವೆ ಎಂದು ಹೇಳಿದ್ದಾರೆ. ಇದೇ ಕಾರ್ಮಿಕರು ಈ ಹಿಂದೆ ಆಡಳಿತ ಮಂಡಳಿಯೊಂದಿಗೆ ಮಾತನಾಡಿ 7.50 ಕೋಟಿ ರೂ. ಪರಿಹಾರ ಪಡೆದಿದ್ದರು. ಮತ್ತು ಈಗಿನ ಒಪ್ಪಂದಕ್ಕೂ ಸಹಿ ಹಾಕಿದ್ದಾರೆ. ಈಗ ಮತ್ತೆ ನ್ಯಾಯಾಲಯದ ಮೆಟ್ಟಿಲು ಏರುತ್ತಿರುವುದು ಏಕೆಂದು ನನಗೆ ಅರ್ಥವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ಹಿಂದೆ 7.50 ಕೋಟಿ ರೂ. ಪರಿಹಾರ ಪಡೆದಿದ್ದರೂ ಅದನ್ನು ನಾವು ಮಾಲೀಕರಿಗೆ ಮನ್ನಾ ಮಾಡುವಂತೆ ಹೇಳಿಯೇ ಮಾತುಕತೆಗೆ ಕುಳಿತಿದ್ದೆವು ಎಂದು ತಿಳಿಸಿದರು.
ಇಷ್ಟೆಲ್ಲಾ ಕಷ್ಟಪಟ್ಟು ಕಾರ್ಮಿಕರ ಪರವಾಗಿ ಹೋರಾಡಿದ್ದರೂ ಕೆಲವು ಮಾತುಗಳು ಬರಬಹುದು. ಆದರೆ, ಅದಕ್ಕೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಮುಖ್ಯವಾಗಿ ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಪರಿಹಾರ ಸಿಕ್ಕಿದೆ. ಕೇವಲ ಕಾರ್ಮಿಕರಲ್ಲದೇ, ಸೀಜನಲ್ ಕಾರ್ಮಿಕರು, ಗುತ್ತಿಗೆ ಕಾರ್ಮಿಕರಿಗೆ, ಬದಲಿ ಕಾರ್ಮಿಕರಿಗೆ ಕೂಡ ಪರಿಹಾರದ ಹಣ ಸಿಕ್ಕಿದೆ. ಕೆಲವು ತಿಂಗಳು ಕೆಲಸ ಮಾಡಿದ ಹೊರಗಿನ ಕಾರ್ಮಿಕರಿಗೂ ಕೂಡ 25 ಸಾವಿರ ರೂ, ಪರಿಹಾರ ನೀಡಲಾಗಿದೆ. ಇಂತಹವರ ಸಂಖ್ಯೆಯೇ ನೂರಾರಿದೆ. ಕಾರ್ಖಾನೆಯ ಮಾಲೀಕರಾದ ಮಣಿವೇಲನ್ ಅವರು ನಮ್ಮೆಲ್ಲ ಸಮಸ್ಯೆಗಳನ್ನ ಆಲಿಸಿ ಈ ಪರಿಹಾರ ನೀಡಿದ್ದಾರೆ. ಅವರಿಗೆ ಮತ್ತು ತೀರ್ಮಾನ ಕೈಗೊಳ್ಳಲು ಸಹಕಾರ ನೀಡಿದ ಸಹಾಯಕ ಆಯುಕ್ತ ಕೆ.ಬಿ. ನಾಗರಾಜ್, ಶಿವಕುಮಾರ್, ಜಿಲ್ಲಾ ಕಾರ್ಮಿಕ ಅಧಿಕಾರಿಗಳು, ಕಾರ್ಮಿಕ ಮುಖಂಡರು, ಕಾರ್ಮಿಕ ವರ್ಗದವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಮಿಕ ಮುಖಂಡರಾದ ನಾರಾಯಣಗೌಡ, ಜಾಧವ್, ಬಿ.ಎಸ್. ನಾಗರಾಜ್, ಕೆಂಪೇಗೌಡ, ರವಿ, ಪ್ರಕಾಶ್, ಕೃಷ್ಣ ಮತ್ತಿತರರಿದ್ದರು
previous post