ವಿದ್ಯಾರ್ಥಿಯಾಗಿರುವಾಗಲೇ ರಾಜ್‌ಕುಮಾರ್ ಅಭಿಮಾನಿಗಳ ಸಂಘಗಳಲ್ಲಿ ಕೆಲಸ ಮಾಡಿದ ಅನುಭವಿದ್ದು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಕನ್ನಡ ಸಾಹಿತ್ಯ ಕಟ್ಟುವ ವಿನೂತನ ಕಾರ್ಯಕ್ರಮಗಳನ್ನು ಆರಂಭಿಸಿ ಯಶಸ್ವಿಯಾದ ತೃಪ್ತಿ ನನಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣಾ ಅಭ್ಯರ್ಥಿ ಡಿ.ಮಂಜುನಾಥ್ ಹೇಳಿದರು.
ಸೊರಬ ಪಟ್ಟಣದ ಶಿಕ್ಷಕ ಸತೀಶ್ ಬೈಂದೂರು ಅವರ ಗುರುಕುಲ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡ ಕನ್ನಡಪರ ಸಂಘಟಕರು ಹಾಗೂ ಸಾಹಿತ್ಯಾಸಕ್ತರ ಸಭೆಯಲ್ಲಿ ಅವರು ಮಾತನಾಡಿದರು.
ಅಧಿಕಾರದ ಆಚೆಗೆ ಬದ್ಧತೆ ಇದ್ದಲ್ಲಿ ಮಾತ್ರ ಸಾಂಸ್ಕೃತಿಕತೆಯನ್ನು ಕಟ್ಟಬಹುದಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು ನನಗೆ ಹೆಚ್ಚಿನ ಮತಗಳನ್ನು ನೀಡಿ ಗೆಲ್ಲಿಸಿದ್ದಲ್ಲಿ ಆ ಮತಗಳಗೆ ಮೌಲ್ಯ ತಂಡುಕೊಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಕನ್ನಡ ಭಾಷೆಯನ್ನು ಚಿಕ್ಕಂದಿನಲ್ಲಿಯೇ ಮಕ್ಕಳಲ್ಲಿ ಬಿತ್ತಲು ಮಕ್ಕಳ ಸಾಹಿತ್ಯ ಸಮ್ಮೇಳನಗಳನ್ನು ಹಮ್ಮಿಕೊಂಡಿದ್ದೆವು. ಜಿಲ್ಲಾ ಹಾಗೂ ತಾಲೂಕು ಘಟಕಗಳ ಅಭಿವೃದ್ಧಿಗೆ ಒತ್ತು ನೀಡಿದ್ದನ್ನು ಸದಸ್ಯರು ಮರೆತಿಲ್ಲ. ಅಧಿಕಾರ ಇಲ್ಲದಿರುವ ಸಂದರ್ಭದಲ್ಲಿ ಜಿಲ್ಲೆಯಲ್ಲಿ ನೂರಾರು ವಿನೂತನ ಕಾರ್ಯಕ್ರಮ ನಡೆಸಲಾಗಿದೆ. ಅನೇಕ ಕಲಾವಿಧರನ್ನು ಬೇರೆ ಬೇರೆ ತಾಲೂಕಿನ ಕಾರ್ಯಕ್ರಮಗಳಿಗೆ ಆಹ್ವಾನ ನೀಡಿ ಸಾಂಸ್ಕೃತಿಕ ವಿನಿಯಕ್ಕೆ ಮುನ್ನುಡಿ ಬರೆಯಲಾಗಿದೆ. ೧೯೨ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಈ ಯಶಸ್ಸನ್ನು ಸಹಿಸಿಕೊಳ್ಳಲಿಕ್ಕಾಗದ ವಿರೋಧಿಗಳು ನನ್ನ ಮೇಲೆ ಮಾಡುವ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ತನ್ನದೇ ಆದ ಗೌರವ, ಪ್ರಾಶಸ್ತ್ಯಹೊಂದಿದ್ದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತನ್ನು ರಾಜಕೀಯ ಪಕ್ಷಕ್ಕೆ ಒತ್ತೆ ಇಡಲು ಮುಂದಾಗುವುದು ಸರಿಯಲ್ಲ. ಅಲ್ಲದೆ ದತ್ತಿ ಕಾರ್ಯಕ್ರಮಗಳನ್ನು ನಡೆಸದೆ ಹಣ ಬಿಡುಗಡೆಮಾಡಿಕೊಳ್ಳುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.
ತಾಲೂಕು ಕನ್ನಡ ಸಾಹಿತ್ಯ, ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಎನ್.ಷಣ್ಮುಖಾಚಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾಜ ಚಿಂತಕ ರಾಜಪ್ಪ ಮಸ್ತರ್, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ, ಮಹಿಳಾ ಘಟಕದ ಅಧ್ಯಕ್ಷೆ ಸುಜಾತ ಜೋತಾಡಿ, ಕಸಾಪ ಮಾಜಿ ಅಧ್ಯಕ್ಷರಾದ ಶಿವಾನಂದ ಪಾಣಿ, ಹಾಲೇಶ್ ನವುಲೆ, ಚಿಂತಕ ಭಾರ್ಗವ್ ನಾಡಿಗ್, ನಿವೃತ್ತ ಉಪನ್ಯಾಸಕ ಬಂಗಾರಪ್ಪ, ಗೌರಮ್ಮ ಭಂಡಾರಿ, ಸಾಹಿತಿ ರೇವಣಪ್ಪ ಬಿದರಗೇರಿ, ಮೋಹನ್ ಸುರಭಿ, ಉಮೇಶ್ ಚೀಲನೂರು, ಸವಿತಾ ಭಟ್, ಸರಸ್ವತಿ ನಾವುಡ, ಮಾಲತೇಶ್, ಎನ್.ಗುರುಮೂರ್ತಿ ಇತರರಿದ್ದರು.
ಇದೇ ಸಂದರ್ಭದಲ್ಲಿ ಪುನಿತ್ ರಾಜ್‌ಕುಮಾರ್ ಫೋಟೋಗೆ ಪುಷ್ಪನಮನ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಕೋರಲಾಯಿತು.