Malenadu Mitra
ರಾಜ್ಯ ಶಿವಮೊಗ್ಗ

ರಾಜರತ್ನನಿಗೆ ಶಿವಮೊಗ್ಗ ಜನರ ಭಾವುಕ ನಮನ, ಸದ್ಭಾವನ ಟ್ರಸ್ಟ್ ನಿಂದ ಯಶಸ್ವೀ ಅಪ್ಪು-ಅಮರ ಕಾರ್ಯಕ್ರಮ

ಅದೊಂದು ಭಾವಪೂರ್ಣ ಕಾರ್ಯಕ್ರಮ, ಕಿಕ್ಕಿರಿದು ತುಂಬಿದ ಕುವೆಂಪು ರಂಗಮಂದಿರದಲ್ಲಿ ನೆರೆದವರ ಎಲ್ಲರ ಕಣ್ಣಾಲಿಗಳು ತೇವವಾಗಿದ್ದವು. ಮೊನ್ನೆ ಮೊನ್ನೆ ನಮ್ಮೊಂದಿಗಿದ್ದ ಒಡನಾಡಿಯನ್ನು ಕಳೆದು ಕೊಂಡ ನೋವು ಎಲ್ಲರನ್ನೂ ಕಾಣುತಿತ್ತು. ಹಲವರು ಉಮ್ಮಳಿಸಿ ಅತ್ತು ತಮ್ಮ ಭಾವನೆ ಹೊರಹಾಕಿದರು. ಇದು ಜೀವ ಚೈತನ್ಯದ ಪ್ರತಿರೂಪವಾಗಿದ್ದ ಕರುನಾಡಿನ ರಾಜರತ್ನ ಪುನೀತ್‌ರಾಜ್‌ಕುಮಾರ್ ಅವರಿಗೆ ನುಡಿ ಹಾಗೂ ಗೀತ ನಮನ ಸಲ್ಲಿಸುವ “ಅಪ್ಪು-ಅಮರ ’ಕಾರ್ಯಕ್ರಮದ ಸನ್ನಿವೇಶ.
ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಸದ್ಭಾವನಾ ಟ್ರಸ್ಟ್ ಆಯೋಜಿಸಿದ್ದ ಪುನೀತ್‌ರಾಜ್‌ಕುಮಾರ್‌ಗೆ ಸಲ್ಲಿಸಿದ ನುಡಿನ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದು ಬಂದಿತ್ತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಗೋಣಿಬೀಡು ಶೀಲಸಂಪಾದನಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ನುಡಿನಮನ ಸಲ್ಲಿಸಿ, ಯಾವುದೇ ವ್ಯಕ್ತಿ ಬೌತಿಕವಾಗಿ ಇಲ್ಲವಾದರೆ ಅದು ಅವನ ಸಾವಲ್ಲ. ಜನ ಮಾನಸದಿಂದ ದೂರ ಆದ ದಿನ ಆತನ ಅಂತ್ಯವಾಗುತ್ತದೆ. ಆದರೆ ಪುನೀತ್ ರಾಜ್‌ಕುಮಾರ್ ಯಾವತ್ತೂ ಜನಮಾನಸದಲ್ಲಿ ಇರುತ್ತಾರೆ. ಅವರಿಗೆ ಯಾವತ್ತೂ ಸಾವಿಲ್ಲ. ಚಿಕ್ಕ ವಯಸ್ಸಿನಲ್ಲಿಯೇ ಕೋಟ್ಯಂತರ ಯುವಕರಿಗೆ ಮಕ್ಕಳಿಗೆ ರೋಲ್ ಮಾಡೆಲ್ ಆಗಿ ಅಪ್ಪು ಬದುಕಿ ತೋರಿಸಿದ್ದಾರೆ ಎಂದು ಹೇಳಿದರು.
ಪುನೀತ್ ಜೀವನದಲ್ಲಿ ಮತ್ತು ಸಿನೆಮಾ ರಂಗದಲ್ಲಿ ಅಳವಡಿಸಿಕೊಂಡಿದ್ದ ಸಿದ್ದಾಂತ, ನಯ ವಿನಯ ಹಾಗೂ ಸಾಮಾಜಿಕ ಕಾರ್ಯಗಳನ್ನು ಎಲ್ಲರೂ ಮಾಡುವಂತಾಗಬೇಕು ಎಂದು ಶ್ರೀಗಳು ಹೇಳಿದರು.


ಶಿವಮೊಗ್ಗ ಬಸವಕೇಂದ್ರದ ಡಾ.ಮರುಳಸಿದ್ದ ಸ್ವಾಮೀಜಿ ತಮ್ಮ ನುಡಿನದಲ್ಲಿ, ಇಂದು ನಾಡಿನುದ್ದಲಗಲಕ್ಕೂ ಪುನೀತ್‌ಗೆ ಸಿಗುತ್ತಿರುವ ಪ್ರೀತಿ, ಗೌರವ ಅವರು ನಟ ಎಂದಾಗಲಿ, ಡಾ.ರಾಜ್‌ಕುಮಾರ್ ಪುತ್ರ ಎಂದಾಗಲಿ ಅಲ್ಲ. ತಮ್ಮ ಸದ್ಗುಣಗಳಿಂದ ಪುನೀತ್ ರೂಪಿಸಿಕೊಂಡಿದ್ದ ವ್ಯಕ್ತಿತ್ವ ಅವರನ್ನು ಅಬಾಲ ವೃದ್ಧರಾದಿಯಾಗಿ ಎಲ್ಲರೂ ಪ್ರೀತಿಸುತ್ತಿದ್ದಾರೆ. ಬದುಕಿದರೆ ಹೀಗೆ ಬದುಕಬೇಕೆಂಬ ಭಾವ ಜನರಲ್ಲಿ ಬರುವಂತೆ ಬಾಳಿದ ಪುನೀತ್ ಎಂದೂ ಅಜರಾಮರ ಎಂದು ಹೇಳಿದರು.
ಖ್ಯಾತ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಪುನೀತ್ ನಟನೆಯ ಸಿನೆಮಾಗಳ ಹಾಡುಗಳನ್ನು ಹಾಡುವ ಮೂಲಕ ಗೀತ ನಮನ ಸಲ್ಲಿಸಿದರಲ್ಲದೆ ಪುನೀತ್ ಅವರೊಂದಿಗಿನ ಒಡನಾಟವನ್ನು ಸ್ಮರಿಸಿ ಕಣ್ಣೀರಾದರು. ಟ್ರಸ್ಟ್ ಅಧ್ಯಕ್ಷ ಎಂ.ಶ್ರೀಕಾಂತ್ ಮಾತನಾಡಿ, ರಾಜಕೀಯೇತರ ಕೆಲಸ ಮಾಡುತ್ತಿರುವ ಟ್ರಸ್ಟ್ ಹೃದಯವಂತ ಪುನೀತ್‌ಗೆ ನಮನ ಸಲ್ಲಿಸುವುದು ಕರ್ತವ್ಯ ಎಂದು ಭಾವಿಸಿದೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಮುಂದುವರಿಯುತ್ತೇವೆ ಎಂದು ಹೇಳಿದರು.


ಖ್ಯಾತ ಗಾಯಕಿ ವಿದುಷಿ ಸುರೇಖಾ ಹೆಗಡೆ ಅವರು, ಗೀತ ನಮನಸಲ್ಲಿಸಿದರು. ವಿಕಾಸ್ , ಚಾರ್ವಿ ಮುರಳೀಧರ್ ಸಹ ಗೀತ ನಮನ ಸಲ್ಲಿಸಿದರು. ವೇದಿಕೆಯಲ್ಲಿ ಟ್ರಸ್ಟ್ ಕಾರ್ಯದರ್ಶಿ ಎನ್.ರಮೇಶ್, ನಿರ್ಮಲಾಕಾಶಿ ಇದ್ದರು. ಈ ಸಂದರ್ಭದಲ್ಲಿ ತಾಯಿ ಮನೆ ಅನಾಥಾಶ್ರಮದ ಸುದರ್ಶನ್ ಅವರನ್ನು ಸನ್ಮಾನಿಸಲಾಯಿತು. ಜನಾರ್ದನ್ ಪೈ ನಿರೂಪಿಸಿದರೆ, ಕಿರಣ್ ದೇಸಾಯಿ ಸ್ವಾಗತಿಸಿದರು. ಕುವೆಂಪು ರಂಗಮಂದಿರಲ್ಲಿ ಒಳ ಮತ್ತು ಹೊರಾವರಣದಲ್ಲಿ ಹೆಚ್ಚುವರಿ ಕುರ್ಚಿಗಳನ್ನು ಹಾಕಿದ್ದರೂ, ಕೂರಲೂ ಜಾಗವಿಲ್ಲದೆ ಅಭಿಮಾನಿಗಳು ನಿಂತುಕೊಂಡೇ ಕಾರ್ಯಕ್ರಮ ನೋಡಿದರು. ಭಾವಪರವಶರಾಗಿ ಹಾಡಿದ ಕಲಾವಿದರ ಪ್ರತೀ ಹಾಡುಗಳೂ ಕೇಳುಗರ ಕಣ್ಣುಗಳನ್ನು ಒದ್ದೆಯಾಗಿಸಿದ್ದವು.

Ad Widget

Related posts

ಗುರಿಯಿದ್ದರೆ ಮಾತ್ರ ಯಶಸ್ಸು ಸಾಧ್ಯ :ಎಸ್.ಎನ್.ನಾಗರಾಜ್‌ , ಬಿ.ಆರ್‌.ಪಿ.ರಾಷ್ಟ್ರೀಯ ಪದವಿಪೂರ್ವ ಕಾಲೇಜು ವಾರ್ಷಿಕೋತ್ಸವ

Malenadu Mirror Desk

ಸಾಂಸ್ಕೃತಿಕ ವೈಭವದಲ್ಲಿ ಮೇಳೈಸಿದ ದೀವರ ಕಲಾ ಸೌರಭ

Malenadu Mirror Desk

ಆಸ್ತಿತೆರಿಗೆ ಹೆಚ್ಚಳ ಬೇಡ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.