ಪುನೀತ್ ರಾಜ್‌ಕುಮಾರ್ ಅವರ ಹನ್ನೊಂದನೇ ದಿನದ ಪುಣ್ಯತಿಥಿ ಅಂಗವಾಗಿ ಅವರ ಕುಟುಂಬ ಸದಾಶಿವನಗರದ ಮನೆಯಲ್ಲಿ ಪೂಜೆ ನೆರವೇರಿಸಿತು. ಬಳಿಕ ಕಂಠೀರವ ಸ್ಟುಡಿಯೊದ ಸಮಾದಿ ಸ್ಥಳಕ್ಕೆ ಹೋಗಿ ಪೂಜೆ ಸಲ್ಲಿಸಿದೆ. ಪುನೀತ್ ರಾಜ್‌ಕುಮಾರ್ ಅವರಿಗೆ ಇಷ್ಟವಾಗಿದ್ದ ತಿಂಡಿ ತಿನಿಸು ಮತ್ತು ಬಗೆಬಗೆಯ ಖಾದ್ಯಗಳನ್ನು ತಯಾರಿಸಿ ಎಡೆಹಾಕಲಾಯಿತು.
ರಾಜ್ಯದ ಮೂಲೆ ಮೂಲೆಗಳಿಂದ ಬಂದಿದ್ದ ಪುನೀತ್ ಅಭಿಮಾನಿಗಳು ಕೂಡಾ ಅಪ್ಪು ಇಷ್ಟಪಡುತ್ತಿದ್ದು ಆಹಾರವನ್ನು ತಯಾರು ಮಾಡಿಕೊಂಡು ಬಂದಿದ್ದರು. ಚಲನ ಚಿತ್ರನಟನೊಬ್ಬ ತಮ್ಮ ಸದ್ಗುಣಗಳಿಂದ ಜನಮಾನಸದಲ್ಲಿ ನೆಲೆಯೂರುವ ಮೂಲಕ ಜನಪ್ರೀತಿಯ ಪ್ರತೀಕವಾಗಿರುವ ಪುನೀತ್ ಅವರ ಹನ್ನೊಂದನೆ ದಿನದ ಪುಣ್ಯತಿಥಿಯನ್ನು ಅವರ ಅಭಿಮಾನಿಗಳು ರಾಜ್ಯಾದ್ಯಂತ ಆಚರಿಸಿದ್ದಾರೆ. ರಾಜ್ಯದ ಅನೇಕ ಭಾಗಗಳಲ್ಲಿ ಪುನೀತ್ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಿರುವ ಅಭಿಮಾನಿ ಬಳಗ ಸಾರ್ವಜನಿಕ ಅನ್ನ ಸಂತರ್ಪಣೆ ಮಾಡಿದೆ. ಶಿವಮೊಗ್ಗದ ಜೈಲ್ ಸರ್ಕಲ್‌ನಲ್ಲಿ ಅಭಿಮಾನಿಗಳು ಬಿರ್ಯಾನಿ ವಿತರಿಸಿದರು.
ತಮ್ಮಡಿಹಳ್ಳಿಯಲ್ಲಿ ಪುಣ್ಯತಿಥಿ:
ಭದ್ರಾವತಿ ತಾಲೂಕು ತಮ್ಮಡಹಳ್ಳಿಯಲ್ಲಿ ಭಾನುವಾರ ಅಭಿಮಾನಿಗಳು ೨೦ ಕುರಿ , ೨ ಕ್ವಿಂಟಾಲ್ ಚಿಕನ್‌ನಲ್ಲಿ ವಿವಿಧ ಖಾದ್ಯ ತಯಾರಿಸಿ ಎಡೆಹಾಕಿದ ಬಳಿಕ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಮಾಡಿದ್ದಾರೆನ್ನಲಾಗಿದೆ. ರಾಜ್ಯಾದ್ಯಂತ ಒಂದು ಕಡೆ ನುಡಿನಮನ, ಗೀತನಮನ ಚಿತ್ರ ಪ್ರದರ್ಶನಗಳು ನಡೆಯುತ್ತಿದ್ದರೆ, ಮತ್ತೊಂದೆಡೆ ಅಭಿಮಾನಿಗಳು ಪುಣ್ಯ ತಿಥಿ ಆಚರಿಸುವ ಮೂಲಕ ನೆಚ್ಚಿನ ನಟನನ್ನು ಸ್ಮರಣೆ ಮಾಡುತ್ತಿದ್ದಾರೆ.