Malenadu Mitra
ರಾಜ್ಯ ಶಿವಮೊಗ್ಗ ಹೊಸನಗರ

ಕಾಮ್ರೇಡ್ ವಿಜಯ್ ಆಲಿಯಾಸ್ ಬಿಜಿಕೆ ಬಂಧನ ಕರ್ನಾಟಕದಲ್ಲಿ ನಕ್ಸಲ್ ಸಂಘಟನೆಗೆ ಭಾರೀ ಹಿನ್ನಡೆ

ಶಿವಮೊಗ್ಗ, ನ.೧೦: ನಕ್ಸಲ್ ಸಂಘಟನೆ ಕೇಂದ್ರ ಸಮಿತಿ ಸದಸ್ಯ ಹಾಗೂ ಕರ್ನಾಟಕದಲ್ಲಿ ಸಂಘಟನೆಯ ನೇತೃತ್ವ ವಹಿಸಿದ್ದ ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ಕಾಮ್ರೇಡ್ ವಿಜಯ್ ಆಲಿಯಾಸ್ ಬಿ.ಜಿ.ಕೃಷ್ಣಮೂರ್ತಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಕೇರಳ ವೈನಾಡು ಪೊಲೀಸರು ಅಲ್ಲಿನ ಸುಲ್ತಾನಬತ್ತೇರಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ಬಂಧಿಸಿದ್ದಾರೆ. ೪೮ ವರ್ಷದ ಕೃಷ್ಣಮೂರ್ತಿ ಜತೆ ಸಂಘಟನೆಯ ಸಾವಿತ್ರಿ(೩೬) ಅವರನ್ನು ಸೆರೆಹಿಡಿಯಲಾಗಿದೆ. ಕೃಷ್ಣಮೂರ್ತಿ ಮೇಲೆ ವಿವಿಧ ರಾಜ್ಯಗಳಲ್ಲಿ ಒಟ್ಟು ೫೩ ಪ್ರಕರಣಗಳಿದ್ದರೆ, ಚಿಕ್ಕಮಗಳೂರು ಜಿಲ್ಲೆ ಕಳಸ ಸಮೀಪದ ಜರಿಮನೆಯ ಸಾವಿತ್ರಿ ಮೇಲೆ ೨೨ ಕೇಸುಗಳಿವೆ. ಬಿಜಿಕೆ ಬಂಧನದಿಂದ ಕರ್ನಾಟಕದಲ್ಲಿನ ನಕ್ಸಲ್ ಸಂಘಟನೆಗೆ ತೀವ್ರ ಹಿನ್ನಡೆಯಾಗಿದೆ.

ಬಿ.ಜಿ.ಕೃಷ್ಣಮೂರ್ತಿ ಹಿನ್ನೆಲೆ:

ಬಿ.ಜಿ.ಕೃಷ್ಣಮೂರ್ತಿಯು ಶೃಂಗೇರಿ ತಾಲೂಕು ಬುಕಡಿಬೈಲ್ ಸಮೀಪದ ಭುವನಹಡ್ಲು ಗ್ರಾಮದವರು. ಶೃಂಗೇರಿಯ ಜೆಸಿಬಿಎಂ ಕಾಲೇಜಿನಲ್ಲಿ ಪದವಿ ಮುಗಿಸಿದ ನಂತರ ಎಲ್‌ಎಲ್‌ಬಿ ಶಿಕ್ಷಣವನ್ನು ಶಿವಮೊಗ್ಗದ ನ್ಯಾಷನಲ್ ಕಾನೂನು ಕಾಲೇಜಿನಲ್ಲಿ ಪಡೆದಿದ್ದರು. ವಿದ್ಯಾರ್ಥಿ ಜೀವನದಲ್ಲಿಯೇ ಮಾವೋ ವಿಚಾರಧಾರೆಯಿಂದ ಪ್ರಭಾವಿತರಾಗಿದ್ದರು. ೧೯೯೮ ರಿಂದಲೇ ಕುದುರೆಮುಖ ರಾಷ್ಟ್ರೀಯ ಉದ್ಯಾನ ವಿರೋಧಿ ಹೋರಾಟದಲ್ಲಿ ಸಕ್ರಿಯನಾಗಿದ್ದ ಬಿಜಿಕೆ ಕೊನೆಗೆ ಸಾಕೇತ್ ರಾಜನ್ ನೇತೃತ್ವದಲ್ಲಿ ಮಲೆನಾಡಿನಲ್ಲಿ ಕಾಮ್ರೇಡ್ ವಿಜಯ್ ಹೆಸರಿನಲ್ಲಿ ನಕ್ಸಲ್ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ.
ಸಾಕೇತ್‌ರಾಜನ್ ಹತ್ಯೆ ಬಳಿಕ ಒಂದಷ್ಟು ಕಾಲ ರಾಜ್ಯದಲ್ಲಿ ನಕ್ಸಲ್ ಸಂಘಟನೆಯನ್ನು ಮುನ್ನಡೆಸಿದ್ದ ಕೃಷ್ಣಮೂರ್ತಿ ಪಶ್ಚಿಮಘಟ್ಟದಲ್ಲಿ ಜನರ ಸಹಕಾರ ಕಡಿಮೆಯಾಗುತ್ತಿದ್ದಂತೆ ತಮ್ಮ ಕಾರ್ಯಕ್ಷೇತ್ರವನ್ನು ಪಕ್ಕದ ರಾಜ್ಯಗಳಿಗೆ ಸ್ಥಳಾಂತರಿಸಿದ್ದ ಎನ್ನಲಾಗಿದೆ.
ಒಬ್ಬ ಒಳ್ಳೆಯ ಕವಿಯೂ ಆಗಿರುವ ಕೃಷ್ಣ ಮೂರ್ತಿ ತಮ್ಮ ಬರಹದ ಮೂಲಕವೇ ಸಂಘಟನೆಯಲ್ಲಿ ಹೆಸರಾಗಿದ್ದರು. ೨೦೦೩ ರಿಂದ ಭೂಗತನಾಗಿದ್ದ ಬಿ.ಜಿ. ಕೃಷ್ಣಮೂರ್ತಿ ೨೦೧೮ರಲ್ಲಿ ಅವರ ತಂದೆ ಗೋಪಾಲ ರಾವ್ (೮೧) ನಿಧನರಾದಾಗಲೂ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿರಲಿಲ್ಲ. ಕಾಡಿನಲ್ಲಿರುವಾಗ ಅನಾರೋಗ್ಯಕ್ಕೂ ತುತ್ತಾಗಿದ್ದ ಬಿಜಿಕೆಯನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನಗಳೂ ನಡೆದಿದ್ದವು. ಮಲೆನಾಡಿನಲ್ಲಿ ಈ ಬಗ್ಗೆ ಅಭಿಯಾನವನ್ನೇ ಮಾಡಿದ್ದ ಪೇಜಾವರ ವಿಶ್ವಶ್ವರತೀರ್ಥ ಸ್ವಾಮೀಜಿ ಬಿಜಿಕೆ ಮನೆಗೆ ಹೋಗಿ ಅವರ ಪೋಷಕರನ್ನೂ ಭೇಟಿ ಮಾಡಿ ಮಗನನ್ನು ಮನವೊಲಿಸುವಂತೆ ಸಲಹೆ ನೀಡಿದ್ದರು. ಕಟ್ಟರ್ ಸಿದ್ಧಾಂತಿಯಾಗಿರುವ ಕೃಷ್ಣಮೂರ್ತಿ ಯಾರ ಮಾತಿಗೂ ಮಣಿಯದೆ ನಕ್ಸಲ್ ಚಳವಳಿಯಲ್ಲಿ ಮುಂದುವರಿದಿದ್ದರು.

ಮಲೆನಾಡಿನಲ್ಲಿ ಅಭಿಯಾನವನ್ನೇ ಮಾಡಿದ್ದ ಪೇಜಾವರ ವಿಶ್ವಶ್ವರತೀರ್ಥ ಸ್ವಾಮೀಜಿ

ಮಲೆನಾಡು ಹಾಗೂ ಕರಾವಳಿ ಭಾಗದ ಪಶ್ಚಿಮಘಟ್ಟ ಪ್ರದೇಶದಲ್ಲಿ ನಕ್ಸಲ್ ಸಂಘಟನೆಗೆ ಬೆಂಬಲ ಕ್ಷೀಣಿಸುತ್ತಿದ್ದಂತೆ ಮತ್ತು ಬಹುತೇಕ ಒಡನಾಡಿಗಳು ಎನ್‌ಕೌಂಟರ್‌ನಲ್ಲಿ ಸಾವಿಗೀಡಾದ ಬಳಿಕ ಕೃಷ್ಣ ಮೂರ್ತಿ ರಾಜ್ಯವನ್ನೇ ತೊರೆದಿದ್ದರು. ಸಂಘಟನೆಯ ಕೆಲವು ದೊಡ್ಡ ತಲೆಗಳು ಶರಣಾಗತಿಯಾದ ಬಳಿಕ ಬಿಜಿಕೆ ಕರ್ನಾಟಕದ ಸಂಪರ್ಕ ತೊರೆದಿದ್ದರು ಎನ್ನಲಾಗಿದೆ. ಕಾಡಿನಲ್ಲಿ ಸಂಚರಿಸಲು ಅವರಿಗಿರುವ ಅಲರ್ಜಿಯೂ ಅಡ್ಡಿಯಾಗಿತ್ತು ಎನ್ನಲಾಗಿದೆ. ಭೂಗತನಾಗಿಯೇ ಕೇರಳದಲ್ಲಿ ಆಶ್ರಯ ಪಡೆದು ಎಲ್ಲರಂತೆ ಇದ್ದ ಬಿಜಿಕೆಯನ್ನು ಸೆರೆ ಹಿಡಿಯುವಲ್ಲಿ ಕೇರಳ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೃಷ್ಣಮೂರ್ತಿ ನಕ್ಸಲ್ ಸಂಘಟನೆಯಲ್ಲಿದ್ದ ಹೊಸಗದ್ದೆ ಪ್ರಭಾರನ್ನು ವಿವಾಹವಾಗಿದ್ದರು. ಹೊಸಗದ್ದೆ ಪ್ರಭಾ ಜೀವಂತವಿಲ್ಲ ಎಂದು ಪೊಲೀಸ್ ಮೂಲಗಳು ಹೇಳುತ್ತವೆ ಆದರೆ ಇದಕ್ಕೆ ನಿಖರ ಪುರಾವೆಗಳು ಮಾತ್ರ ಇಲ್ಲ. ಒಟ್ಟಿನಲ್ಲಿ ಬಿಜಿಕೆ ಬಂಧನದಿಂದ ಕರ್ನಾಟಕ ಪೊಲೀಸರಿಗೂ ದೊಡ್ಡ ತಲೆನೋವು ತಪ್ಪಿದಂತಾಗಿದೆ.

ಐದು ಲಕ್ಷ ಬಹುಮಾನ
ಬಿ.ಜಿ.ಕೃಷ್ಣಮೂರ್ತಿ ಬಗ್ಗೆ ಸುಳಿವು ನೀಡಿದವರಿಗೆ ಪೊಲೀಸ್ ಇಲಾಖೆ ೫ ಲಕ್ಷ ಬಹುಮಾನವನ್ನು ಘೋಷಿಸಿದ್ದರೆ, ಸಾವಿತ್ರಿಗೆ ೧ ಲಕ್ಷ ಬಹುಮಾನವನ್ನು ಘೋಷಣೆ ಮಾಡಿತ್ತು. ಸಾವಿತ್ರಿ ನಕ್ಸಲ್ ವಿಕ್ರಮಗೌಡನ ಪತ್ನಿಯಾಗಿದ್ದು, ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ದೂರವಾಗಿದ್ದರು ಎನ್ನಲಾಗಿದೆ. ಕೃಷ್ಣಮೂರ್ತಿಯನ್ನು ಶರಣಾಗತಿ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿರುವಾಗಲೇ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿದ್ದರಿಂದ ಆ ಪ್ರಕ್ರಿಯೆಗೆ ಹಿನ್ನಡೆಯೂ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು.

Ad Widget

Related posts

ನಿವೃತ್ತ ಅಧಿಕಾರಿಗಳಿಗೆ ಅವಕಾಶ:ಯುವ ವಿದ್ಯಾವಂತರಿಗೆ ಅನ್ಯಾಯ

Malenadu Mirror Desk

ಹರ್ಷ ಕೊಲೆ: ಮತ್ತಿಬ್ಬರ ಬಂಧನ, ನಾಪತ್ತೆಯಾದ ಹರ್ಷನ ಮೊಬೈಲ್‌ನಲ್ಲಿದೆಯೇ ಕೊಲೆ ರಹಸ್ಯ ?

Malenadu Mirror Desk

ರಾಜ್ಯಸರಕಾರದ ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿ ಪ್ರತಿಭಟನೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.