ಮಲೆನಾಡಿನಾದ್ಯಂತ ಭಾನುವಾರ ಸಂಜೆಯಿಂದ ರಾತ್ರಿವರೆಗೆ ಸುರಿದ ಮಹಾಮಳೆಗೆ ಜನರು ತತ್ತರಿಸಿ ಹೋದರು. ಸಂಜೆ ನಾಲ್ಕೂವರೆಗೆ ಗುಡುಗು ಮಿಂಚಿನೊಂದಿಗೆ ಆರಂಭವಾದ ಭಾರೀ ಮಳೆ ಸುರಿಯಲಾರಂಭಿಸಿದ್ದು, ರಾತ್ರಿ ತನಕ ಮತ್ತೆ ಮತ್ತೆ ಸುರಿಯಿತು.
ಮಲೆನಾಡಿನಾದ್ಯಂತ ಕೊಯ್ಲಿಗೆ ಬಂದಿರುವ ಭತ್ತ, ಮೆಕ್ಕೆಜೋಳ, ಮೆಣಸು ರಾಗಿ ಬೆಳೆಗಳಿಗೆ ಈ ಅಕಾಲಿಕ ಮಳೆ ಸಾಕಷ್ಟು ನಷ್ಟ ಉಂಟು ಮಾಡಿತ್ತು. ಶಿವಮೊಗ್ಗ ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಹೊಲ ಗದ್ದೆಗಳಿಗೆ ನೀರು ನುಗ್ಗಿದೆ. ರಸ್ತೆಗಳು ಜಲಾವೃತಗೊಂಡಿದ್ದು, ಕೆರೆ ಕಟ್ಟೆಗಳಿಗೆ ನೀರು ತುಂಬಿದೆ.
ಭಾನುವಾರವಾಗಿದ್ದರಿಂದ ಹೊರ ಊರುಗಳಿಂದ ಶಿವಮೊಗ್ಗ ಜಿಲ್ಲೆಗೆ ಪ್ರವಾಸ ಬಂದಿದ್ದ ಪ್ರವಾಸ ವಾಪಸ್ ಹೋಗಲು ಪರದಾಡುವಂತಾಯಿತು. ವ್ಯಾಪಕ ಮಳೆ ಹಾಗೂ ಗುಡುಗು ಇದ್ದ ಕಾರಣ ಶಿವಮೊಗ್ಗ -ಸಾಗರ ರಸ್ತೆಯಲ್ಲಿ ಎಲ್ಲೆಂದರಲ್ಲಿ ಕಾರುಗಳು ರಸ್ತೆ ಬದಿಯಲ್ಲಿ ನಿಂತಿರುವ ದೃಶ್ಯ ಕಂಡು ಬಂತು.
ಶಿವಮೊಗ್ಗ ನಗರದಲ್ಲಿ ಗುಂಡಿಗೆ ಬಿದ್ದ ವಾಹನಗಳು
ಶಿವಮೊಗ್ಗ ನಗರದಲ್ಲಿ ಸಂಜೆಯಿಂದಲೂ ರಣಮಳೆ ಸುರಿದಿದ್ದು, ಸ್ಮಾ ರ್ಟ್ ಸಿಟಿ ಕಾಮಗಾರಿಗೆ ಮತ್ತಷ್ಟು ತೊಂದರೆಯಾಯಿತು. ಕಾಮಗಾರಿ ಚಾಳ್ತಿಯಲ್ಲಿರುವ ಕಡೆ ಗುಂಡಿಗಳಲ್ಲಿ ನೀರು ತುಂಬಿದ್ದರಿಂದ ವಾಹನ ಸವಾರರಿಗೆ ಗೊತ್ತಾಗದೆ ಹಲವು ಕಡೆ ಕಾರುಗಳು ಗುಂಡಿಯಲ್ಲಿ ಸಿಕ್ಕಿ ಹಾಕಿಕೊಂಡಿರುವ ದೃಶ್ಯ ಕಂಡು ಬಂದಿತು. ಶಿವಮೊಗ್ಗ ನಗರದ ಬಸವನಗುಡಿ, ಜಯನಗರ, ವೆಂಕಟೇಶ್‌ನಗರಗಳಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿತ್ತು. ಹೊಸಮನೆ ಶಿವಮೊಗ್ಗ ಗ್ಯಾಸ್ ಹಿಂಭಾಗದಲ್ಲಿ ಹಲವು ಮನೆಗಳಿಗೆ ಚರಂಡಿ ನೀರು ನುಗ್ಗಿತ್ತು.
previous post