ಕಿರಿದೀಪಾವಳಿ ಹಬ್ಬಕ್ಕೆಂದು ಅಜ್ಜಿ ಮನೆಗೆ ಹೋಗುತ್ತಿದ್ದ ಆ ಕುಟುಂಬದ ಬಾಳಿನ ಬೆಳಕೇ ಆರಿಹೋದ ದುರಂತ ಕತೆಯಿದು. ಸೊರಬ ತಾಲೂಕಿನ ಗುಂಜನೂರು ಗ್ರಾಮದ ಕೂಲಿ ಕಾರ್ಮಿಕ ಕುಟುಂಬ ಶಿಕಾರಿಪುರ ತಾಲೂಕಿನ ಚಿಕ್ಕಜಂಬೂರು ಗ್ರಾಮಕ್ಕೆ ಬೈಕ್‌ನಲ್ಲಿ ತೆರಳುತಿತ್ತು. ಮಿನಿಲಾರಿ ರೂಪದಲ್ಲಿ ಬಂದ ಜವರಾಯ ಇಬ್ಬರು ಮುದ್ದು ಮಕ್ಕಳು ಮತ್ತು ತಂದೆಯನ್ನು ಕರುಣೆಯಿಲ್ಲದೆ ಕರೆದೊಯ್ದ. ಶಿರಾಳಕೊಪ್ಪ ಸಮೀಪ ಮಂಗಳವಾರ ನಡೆದ ಈ ಭೀಕರ ಅಪಘಾತದಲ್ಲಿ ಬೈಕ್‌ನಲ್ಲಿ ಹೋಗುತಿದ್ದ ರಾಮಚಂದ್ರಪ್ಪ (50), ಮಕ್ಕಳಾದ ಶಶಾಂಕ (11) ಹಾಗೂ ಆದರ್ಶ (8) ಸ್ಥಳದಲ್ಲಿಯೇ ಸಾವಿಗೀಡಾದರು.
ತಾಯಿ ಶೈಲಾ ಅವರು ಎರಡೂ ಕಾಲು ಮತ್ತು ಕೈ ಕಳೆದುಕೊಂಡು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಶಾಂಕ್ 5ನೇ ತರಗತಿ, ಆದರ್ಶ 3ನೇ ತರಗತಿ ಓದುತ್ತಿದ್ದ ಮಕ್ಕಳಾಗಿದ್ದು, ಮಂಗಳವಾರ ತಂದೆ ಜೊತೆಗೆ ತಾಯಿಯ ತವರು ಮನೆಗೆ ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಊರಿನ ಬಂಧುಗಳಿಗಾದ ಆಘಾತಕ್ಕೆ ಇಡೀ ಗ್ರಾಮವೆ ಶೋಕದಲ್ಲಿ ಮುಳುಗಿದೆ. ಮೃತ ಕುಟುಂಬದ ಮನೆ ಎದುರು ಸಂಬಂಧಿಕರು ಹಾಗೂ ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಬದುಕುಳಿದ ಬಾಲಕಿ:
ಕುಟುಂಬದ 5 ವರ್ಷದ ಹೆಣ್ಣು ಮಗುವನ್ನು ಮತ್ತೊಂದು ಬೈಕ್‌ನಲ್ಲಿ ಕಳುಹಿಸಿಕೊಟ್ಟಿದ್ದರಿಂದ ಅದೃಷ್ಟವಶಾತ್ ಆಕೆ ಬದುಕುಳಿದಿದ್ದಾಳೆ. ಅಪ್ಪ, ಸೋದರರನ್ನು ಕಳೆದುಕೊಂಡು ಅಮ್ಮನ ದುಸ್ಥಿತಿಯನ್ನು ಎದುರಿಸಬೇಕಾದ ಹೆಣ್ಣು ಮಗುವಿನ ಬಗ್ಗೆ ನೆರೆದಿದ್ದ ಜನ ಮಮ್ಮಲ ಮರುಗಿದರು. ಬುಧವಾರ ಮೂವರ ಶವಸಂಸ್ಕಾರ ನಡೆದಿದ್ದು, ಕುಟುಂಬದ ಸಂಕಟ ನೋಡಿ ಗ್ರಾಮಸ್ಥರು ರೋದನ ಮುಗಿಲು ಮುಟ್ಟಿತು. ಹಬ್ಬಕ್ಕೆಂದು ಹೋಗುತ್ತಿದ್ದ ಕುಟುಂಬ ಬಾರದ ಲೋಕಕ್ಕೇ ಹೋಗಿದ್ದು, ಇಡೀ ಊರಿನಲ್ಲಿ ಸೂತಕದ ಛಾಯೆ ಮೂಡಿಸಿದೆ.