ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಡಿ.10 ರಂದು ನಡೆಯಲಿರುವ ಚುನಾವಣೆ ಕಾವು ಪಡೆದುಕೊಂಡಿದ್ದು, ಶಿವಮೊಗ್ಗ ಜಿಲ್ಲೆಯಿಂದ ಒಂದು ಸ್ಥಾನಕ್ಕೆ ನಡೆಯುವ ಚುನಾವಣೆಗೆ ಕಾಂಗ್ರೆಸ್‌ನಿಂದ ಹಾಲಿ ಸದಸ್ಯ ಆರ್.ಪ್ರಸನ್ನಕುಮಾರ್ ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ
ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕುಗಳನ್ನೊಳಗೊಂಡಿರುವ ಈ ಕ್ಷೇತ್ರದ ಚುನಾವಣೆಯಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದ್ದು, ಒಟ್ಟು 9 ವಿಧಾನಸಭೆ ಕ್ಷೇತ್ರಗಳು ಹಾಗೂ ಎರಡು ಲೋಕಸಭೆ ಕ್ಷೇತ್ರವ್ಯಾಪ್ತಿ ಹೊಂದಿರುವ ಕ್ಷೇತ್ರದಲ್ಲಿ ಬಿಜೆಪಿಯ 8 ಮಂದಿ ಶಾಸಕರು ಹಾಗೂ ಇಬ್ಬರು ಸಂಸದರಿದ್ದರೆ ಏಕೈಕ ಕಾಂಗ್ರೆಸ್ ಶಾಸಕರಿದ್ದಾರೆ. ಶಿವಮೊಗ್ಗ ಜಿಲ್ಲೆ ಹಾಗೂ ಹೊನ್ನಾಳಿ ಮತ್ತು ಚನ್ನಗಿರಿಯಲ್ಲಿ ಬಿಜೆಪಿಯು ಪ್ರಬಲವಾಗಿದೆ. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಭದ್ರಾವತಿ, ತೀರ್ಥಹಳ್ಳಿ ಹೊರತು ಪಡಿಸಿ ಉಳಿದೆಲ್ಲ ಕಡೆ ಬಿಜೆಪಿಯೇ ಅಧಿಕಾರದಲ್ಲಿದೆ. ಬಿಜೆಪಿಯಿಂದ ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಅವರ ಪುತ್ರ ಡಿ.ಎಸ್.ಅರುಣ್ ಹೆಸರು ಅಂತಿಮವಾಗಿದ್ದು, ಘೋಷಣೆಯೊಂದೇ ಬಾಕಿಯಿದೆ ಎನ್ನಲಾಗಿದೆ. ಆಡಳಿತ ಪಕ್ಷ ಬಿಜೆಪಿಯಲ್ಲಿ ಎಂ.ಬಿ.ಭಾನುಪ್ರಕಾಶ್, ಗಿರೀಶ್ ಪಟೇಲ್, ಆರ್.ಕೆ.ಸಿದ್ದರಾಮಣ್ಣ ಸೇರಿದಂತೆ ಅನೇಕ ಆಕಾಂಕ್ಷಿಗಳಿದ್ದರೂ, ಪದವೀಧರ ಕ್ಷೇತ್ರದಿಂದ ಆರು ಬಾರಿ ಮೇಲ್ಮನೆ ಪ್ರತಿನಿಧಿಸಿದ್ದ ಡಿ.ಹೆಚ್.ಶಂಕರಮೂರ್ತಿ ಅವರು ತಮಗಿರುವ ಪ್ರಭಾವ ಬಳಸಿ ಬೆಂಗಳೂರಿಂದ ಕೇಂದ್ರ ಚುನಾವಣಾ ಸಮಿತಿಗೆ ಅರುಣ್ ಅವರ ಒಂದೇ ಹೆಸರು ಶಿಫಾರಸಾಗುವಂತೆ ನೋಡಿಕೊಂಡಿದ್ದಾರೆ.
ರಾಜ್ಯದಲ್ಲಿ ಜನಸಂಘದಿಂದ ಆರಂಭಗೊಂಡು ಬಿಜೆಪಿ ಕಟ್ಟುವವಲ್ಲಿ ತಮ್ಮ ಪಾತ್ರವೂ ಇದೆ. ಪದವೀಧರ ಕ್ಷೇತ್ರಕ್ಕೆ ತಮ್ಮ ಪುತ್ರನಿಗೆ ಟಿಕೆಟ್ ಕೊಡಬಹುದಿತ್ತು. ಆದರೆ ಅಂದು ಸ್ಪರ್ಧೆವಂಚಿತವಾಗಿದ್ದ ಪುತ್ರನಿಗೆ ಈ ಬಾರಿ ಅವಕಾಶ ನೀಡಬೇಕೆಂದು ಪರಿವಾರದ ಮುಖಂಡರಲ್ಲಿ ಪಟ್ಟು ಹಿಡಿದ ಕಾರಣ ಬಹುತೇಕ ಅರುಣ್ ಹೆಸರು ಅಂತಿಮವಾಗಲಿದೆ.
ಹಿಂದಿನ ಅವಧಿಯಲ್ಲಿ ಎರಡನೇ ಸ್ಥಾನ ಪಡೆದಿದ್ದ ಜೆಡಿಎಸ್ ಈ ಬಾರಿ ಅಭ್ಯರ್ಥಿ ಹಾಕುವುದೇ ಅನುಮಾನವಾಗಿದ್ದು, ಆ ಪಕ್ಷದಲ್ಲಿ ಈ ಬಗ್ಗೆ ಯಾವುದೇ ಚರ್ಚೆ ಕೂಡಾ ನಡೆದಿಲ್ಲ ಎನ್ನಲಾಗಿದೆ.
ಯಾರು ಮತದಾರರು ?
ಲೋಕಸಭೆ, ವಿಧಾನಸಭೆ, ವಿಧಾನ ಪರಿಷತ್, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರು ಮತದಾನದ ಹಕ್ಕು ಹೊಂದಿರುತ್ತಾರೆ. ಶಿವಮೊಗ್ಗ ಜಿಲ್ಲೆಯ 7 ತಾಲೂಕು ಹಾಗೂ ದಾವಣಗೆರೆ ಜಿಲ್ಲೆಯ 3 ತಾಲೂಕುಗಳು ಪ್ರಸ್ತುತ ಚುನಾವಣೆಯ ವ್ಯಾಪ್ತಿಯಲ್ಲಿದ್ದು, ಒಟ್ಟು 4129 ಮತದಾರರು ಇದ್ದಾರೆ.
ದಾವಣಗೆರೆ ಜಿಲ್ಲೆ ಮತದಾರರು
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ 23 ಪುರಸಭೆ ಸದಸ್ಯರು ಹಾಗೂ 739 ಗ್ರಾಮ ಪಂಚಾಯತ್ ಸದಸ್ಯರು, ಹೊನ್ನಾಳಿ ತಾಲೂಕಿನ 18 ಪುರಸಭೆ ಹಾಗೂ 323 ಗ್ರಾ.ಪಂ ಸದಸ್ಯರು, ನ್ಯಾಮತಿ ತಾಲೂಕಿನ 190 ಗ್ರಾ.ಪಂ ಸದಸ್ಯರು ಮತದಾನದ ಹಕ್ಕು ಹೊಂದಿದ್ದಾರೆ. ಈ ಮೂರು ತಾಲೂಕುಗಳಲ್ಲಿ ಒಟ್ಟು 41 ಪುರಸಭೆ ಸದಸ್ಯರು ಹಾಗೂ 124೫ ಗ್ರಾ.ಪಂ ಸದಸ್ಯರು ಸೇರಿದಂತೆ 1286 ಮತದಾರರು ಇದ್ದಾರೆ.
ಶಿವಮೊಗ್ಗ ಜಿಲ್ಲೆ ಮತದಾರರು
ಶಿವಮೊಗ್ಗ ತಾಲೂಕಿನಲ್ಲಿ ಮಹಾನಗರ ಪಾಲಿಕೆಯ 35 ಸದಸ್ಯರು ಹಾಗೂ 456 ಗ್ರಾ.ಪಂ ಸದಸ್ಯರು, ಭದ್ರಾವತಿ ತಾಲೂಕಿನ ನಗರಸಭೆಯ 35 ಸದಸ್ಯರು, 441 ಗ್ರಾ.ಪಂ ಸದಸ್ಯರು, ಸಾಗರ ತಾಲೂಕಿನ 31 ನಗರ ಸಭೆ ಸದಸ್ಯರು, 11 ಪಟ್ಟಣ ಪಂಚಾಯತ್ ಸದಸ್ಯರು, 368 ಗ್ರಾ.ಪಂ ಸದಸ್ಯರು, ಶಿಕಾರಿಪುರ ತಾಲೂಕಿನ 23 ಪುರಸಭೆ ಸದಸ್ಯರು, 17 ಪಟ್ಟಣ ಪಂಚಾಯತ್ ಸದಸ್ಯರು ಹಾಗೂ 453 ಗ್ರಾ.ಪಂ ಸದಸ್ಯರು, ತೀರ್ಥಹಳ್ಳಿ ತಾಲೂಕಿನ 15 ಪಟ್ಟಣ ಪಂಚಾಯತ್ ಸದಸ್ಯರು ಮತ್ತು 336 ಗ್ರಾಮ ಪಂಚಾಯತ್ ಸದಸ್ಯರು, ಸೊರಬ ತಾಲೂಕಿನ 12 ಪ.ಪಂ ಸದಸ್ಯರು ಮತ್ತು 304 ಗ್ರಾ.ಪಂ ಸದಸ್ಯರು ಹಾಗೂ ಹೊಸನಗರ ತಾಲೂಕಿನ 11 ಪ.ಪಂ ಸದಸ್ಯರು ಹಾಗೂ 295 ಗ್ರಾ.ಪಂ ಸದಸ್ಯರು ಮತದಾನದ ಹಕ್ಕು ಹೊಂದಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ 2653 ಗ್ರಾಮ ಪಂಚಾಯತ್ ಸದಸ್ಯರು ಸೇರಿದಂತೆ 2843 ಮತದಾರರು ಇದ್ದಾರೆ.
ಪಕ್ಷದ ನಾಯಕರ ಸೂಚನೆಯಂತೆ ನಾಮಪತ್ರ ಸಲ್ಲಿಸಿದ್ದೇನೆ. ಈ ಸಂದರ್ಭದಲ್ಲಿ ಹಿರಿಯರಾದ ಕಾಗೋಡು ತಿಮ್ಮಪ್ಪ ಹಾಗೂ ಕಿಮ್ಮನೆ ರತ್ನಾಕರ್ ಜತೆಗಿದ್ದು ಬೆಂಬಲ ನೀಡಿದ್ದಾರೆ. ಕಳೆದ ಬಾರಿಯಂತೆ ಈ ಚುನಾವಣೆಯಲ್ಲೂ ಗೆಲ್ಲುವ ವಿಶ್ವಾಸವಿದೆ. ಪಕ್ಷ ನನ್ನ ಬೆನ್ನ ಹಿಂದೆ ಇರುವುದರಿಂದ ಯಾವುದೇ ಆತಂಕವಿಲ್ಲ. ನಮ್ಮ ಸರ್ಕಾರ ಮಾಡಿರುವ ಉತ್ತಮ ಕೆಲಸಗಳು ಹಾಗೂ ಬಿಜೆಪಿ ಸರ್ಕಾರದ ಜನವಿರೋಧಿ ಆಡಳಿತ ನನ್ನ ಗೆಲುವಿಗೆ ಸಹಕಾರಿಯಾಗಲಿದೆ. ಪಕ್ಷದ ಎಲ್ಲ ಮುಖಂಡರು ನನ್ನ ಗೆಲುವಿಗೆ ಶ್ರಮಿಸಲಿದ್ದಾರೆ ಎಂಬ ವಿಶ್ವಾಸವಿದೆ
ಆರ್.ಪ್ರಸನ್ನ ಕುಮಾರ್
ರಾಜ್ಯ ಸರ್ಕಾರಕ್ಕೆ ಜನವಿರೋಧ ಅಲೆಯಿದೆ. ಹೀಗಾಗಿ ಮತ್ತೆ ಪ್ರಸನ್ನಕುಮಾರ್ ಗೆಲ್ಲುತ್ತಾರೆ. ಮುಂದಿನ ಎಲ್ಲ ಚುನಾವಣೆಯಲ್ಲಿ ಬಿಜೆಪಿ ಸೋಲುತ್ತದೆ. ಜನರಿಗೆ ಮನೆ ಕೊಟ್ಟಿಲ್ಲ. ಉದ್ಯೋಗ ಖಾತ್ರಿ ವೇತನ ನೀಡಲು ಸರ್ಕಾರದಿಂದ ಸಾಧ್ಯವಾಗಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಈ ಎಲ್ಲ ಕಾರಣದಿಂದ ಮತದಾರರು ಕಾಂಗ್ರೆಸ್ ಬೆಂಬಲಿಸಲಿದ್ದಾರೆ ಅಡುಗೆ ಅನಿಲ ದರ ಕಡಿಮೆ ಮಾಡಿ ಎಂದರೆ ಬಿಜೆಪಿಯವರು ಪಾಕಿಸ್ತಾನದ ವಿಷಯ ಹೇಳುತ್ತಾರೆ. ಪೆಟ್ರೋಲ್ ಬೆಲೆ ಇಳಿಸಿ ಎಂದರೆ ಚೀನಾ ವಿರುದ್ಧ ಹೇಳಿಕೆ ನೀಡುತ್ತಾರೆ. ಧರ್ಮದ ಆಧಾರದಲ್ಲಿ ಜನರ ಭಾವನೆ ಕೆರಳಿಸುತ್ತಿದ್ದಾರೆ. ಸಂಪೂರ್ಣವಾಗಿ ಪಕ್ಷ ಪ್ರಸನ್ನಕುಮಾರ್ ಬೆನ್ನಿಗಿದೆ. ಅವರನ್ನು ಮತ್ತೊಮ್ಮೆ ಗೆಲ್ಲಿಸಿಕೊಂಡು ಬರುತ್ತೇವೆ
ಕಿಮ್ಮನೆ ರತ್ನಾಕರ್ , ಮಾಜಿ ಸಚಿವ
ಕಳೆದ ಆರು ವರ್ಷ ಆರ್.ಪ್ರಸನ್ನಕುಮಾರ್ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಅದರ ಆಧಾರದಲ್ಲಿ ಈ ಬಾರಿಯ ಚುನಾವಣೆಯಲ್ಲೂ ಅವರು ಮತ್ತೆ ಗೆಲ್ಲಲಿದ್ದಾರೆ. ಅವರೇ ನಮ್ಮ ಪಕ್ಷದ ಅಧಿಕೃತ ಅಭ್ಯರ್ಥಿ
ಕಾಗೋಡು ತಿಮ್ಮಪ್ಪ , ಮಾಜಿ ಸಚಿವ