Malenadu Mitra
ರಾಜ್ಯ ಶಿಕಾರಿಪುರ ಶಿವಮೊಗ್ಗ ಸಾಗರ

ಓಡಿ ಹೋಗುವ ಸಂಸ್ಕೃತಿ ಬಿಜೆಪಿಲಿಲ್ಲ, ತಪ್ಪು ಪುನರಾವರ್ತನೆ ಆಗುವುದು ಬೇಡ : ಜನಸ್ವರಾಜ್ ಸಮಾವೇಶದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ

ಬಿಜೆಪಿಯಲ್ಲಿ ಆ ಕಡೆ, ಈ ಕಡೆ ಓಡಿಹೋಗುವ ಕಾರ್ಯಕರ್ತರಿಲ್ಲ. ಅಂತಹ ಸಂಸ್ಕಾರ ನಮಗೆ ಪಕ್ಷ ನೀಡಿದೆ. ಅದನ್ನು ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲ್ಲಿಸುವ ಮೂಲಕ ತೋರಿಸಬೇಕಿದೆ. ಕಳೆದ ಸಲ ಆದ ತಪ್ಪು ಪನರಾವರ್ತನೆ ಆಗಬಾರದು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಶಿವಮೊಗ್ಗ ನಗರದ ಫ್ರೀಡಂ ಪಾರ್ಕ್ ಆವರಣದಲ್ಲಿ ಗುರುವಾರ ಬಿಜೆಪಿ ಆಯೋಜಿಸಿದ್ದ ಜನಸ್ವರಾಜ್ ಸಮಾವೇಶದಲ್ಲಿ ಅವರು ಮಾತನಾಡಿದರು.
ಅಂದುಕೊಂಡ ಕಾಯಿದೆಗಳನ್ನು ಜಾರಿಗೆ ತಂದು ಕಾನೂನು ಸ್ವರೂಪ ನೀಡಬೇಕಾದರೆ ಅದಕ್ಕೆ ವಿಧಾನಸಭೆ, ಲೋಕಸಭೆಯಲ್ಲಿ ಮಾತ್ರ ಬಹುಮತ ಸಿಕ್ಕರೆ ಸಾಲದು. ರಾಜ್ಯದಲ್ಲಿ ವಿಧಾನ ಪರಿಷತ್ತು ಮತ್ತು ಕೇಂದ್ರದಲ್ಲಿ ರಾಜ್ಯಸಭೆಯಲ್ಲೂ ಬಹುಮತ ಬೇಕು. ಅದಕ್ಕಾಗಿಯೇ ಬಿಜೆಪಿ ಜನಸ್ವರಾಜ್ ಸಮಾವೇಶ ಮಾಡುತ್ತಿದೆ ಎಂದರು
ಮೋದಿ ಅವರು ಅಧಿಕಾರಕ್ಕೆ ಬಂದ ೭ ವರ್ಷಗಳಲ್ಲಿ ಸಾಕಷ್ಟು ಯೋಜನೆಗಳನ್ನು ನೀಡಿ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಇದನ್ನು ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಅರಿತುಕೊಳ್ಳಬೇಕು ಎಂದು ಹೇಳಿದರು.

16 ಕ್ಷೇತ್ರಗಳಲ್ಲಿ ನಮ್ಮದೇ ಗೆಲುವು

ಸಂಸದ ಡಿ.ವಿ.ಸದಾನಂದಗೌಡ ಮಾತನಾಡಿ, ರಾಜ್ಯದ ಸ್ಥಳೀಯ ಸಂಸ್ಥೆಗಳ ಒಟ್ಟು ೨೫ ವಿಧಾನ ಪರಿಷತ್ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಅದರಲ್ಲಿ ೧೬ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಿವಮೊಗ್ಗದ ಸ್ಥಳೀಯ ಸಂಸ್ಥೆಗಳಲ್ಲಿ ೨,೪೪೫ ಬಿಜೆಪಿಯವರೇ ಇದ್ದಾರೆ. ಹೀಗಾಗಿ, ಗೆಲ್ಲುವುದರ ಬಗ್ಗೆ ಯಾವುದೇ ಅನುಮಾನವಿಲ್ಲ. ಕಾಂಗ್ರೆಸ್‌ನವರಿಗೆ ಬುರುಡೆ ಬಿಡುವುದು ಬಿಟ್ಟರೆ ಮತ್ತೇನೂ ಗೊತ್ತಿಲ್ಲ. ಪಂಚಾಯಿತಿ ಮಟ್ಟದ ಚುನಾವಣೆಯಲ್ಲಿ ಪಕ್ಷದ ಚಿಹ್ನೆ ಇಲ್ಲದೇ ಇರುವುದರಿಂದ ಕಾಂಗ್ರೆಸ್‌ನವರು ಗೆದ್ದವರೆಲ್ಲ ತಮ್ಮ ಪಕ್ಷದವರೇ ಅಂದುಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.
ಕೋವಿಡ್ ಸಂದಿಗ್ಧ ಸ್ಥಿತಿಯಲ್ಲೂ ಕೇಂದ್ರ ಮತ್ತು ರಾಜ್ಯ ಸರಕಾರ ಗುಣಮಟ್ಟದ ಆರೋಗ್ಯ ಸೇವೆ ನೀಡಿದೆ. ಜೊತೆಗೆ, ಶುದ್ಧದ ಕುಡಿಯುವ ನೀರು, ನೂತನ ಶಿಕ್ಷಣ ನೀತಿ, ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಖಾತರಿ ಯೋಜನೆ ಅಡಿ ಮಾನವ ದಿನಗಳ ಸೃಷ್ಟಿ ಈ ಎಲ್ಲ ಕೆಲಸಗಳನ್ನು ಬಿಜೆಪಿ ಮಾಡಿದೆ. ಅದರಲ್ಲೂ ಶಿವಮೊಗ್ಗ ಬಿಜೆಪಿ ಭದ್ರ ನೆಲೆಯಾಗಿರುವುದರಿಂದ ಗೆಲುವಿನ ಬಗ್ಗೆ ಎಳ್ಳಷ್ಟು ಸಂಶಯವಿಲ್ಲ ಎಂದರು.

4 ಡಿಸಿಸಿ ಬ್ಯಾಂಕ್‌ಗಳಲ್ಲಿ ಅವ್ಯವಹಾರ


ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಬಿ.ಎಸ್.ಯಡಿಯೂರಪ್ಪ ಅವರು ಅವಕಾಶ ನೀಡಿದ್ದಕ್ಕೆ ಮಂತ್ರಿಯಾಗಿದ್ದೇನೆ. ಅವರು ರೈತರ ಪರ ಹೊಂದಿದ್ದ ಆಶೋತ್ತರಗಳಿಗೆ ಅನುಗುಣವಾಗಿ ಕೆಲಸ ಮಾಡಿದ್ದೇನೆ ಎಂದರು.
ರಾಜ್ಯದ ೨೧ ಡಿಸಿಸಿ ಬ್ಯಾಂಕ್‌ಗಳ ಪೈಕಿ ಶಿವಮೊಗ್ಗ, ಕಲಬುರಗಿ, ಕೋಲಾರ ಮತ್ತು ತುಮಕೂರು ಬ್ಯಾಂಕ್‌ಗಳಲ್ಲಿ ಅವ್ಯವಹಾರ ನಡೆದಿತ್ತು. ಅದನ್ನು ಬಯಲಿಗೆಳೆದು, ಬ್ಯಾಂಕ್ ಉನ್ನತ ಸ್ಥಿತಿಗೆ ತರಲಾಗಿದೆ. ಇದಕ್ಕೆ ಯಡಿಯೂರಪ್ಪ ಸೇರಿದಂತೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಸಹಕಾರ ನೀಡಿದ್ದಾರೆ. ಪ್ರಸ್ತುತ ತುಮಕೂರು ಮತ್ತು ಕೋಲಾರ ಬ್ಯಾಂಕ್‌ಗಳ ಅವ್ಯವಹಾರ ಪ್ರಕರಣ ವಿರುದ್ಧ ಕ್ರಮಕೈಗೊಳ್ಳಬೇಕಿದೆ. ಅದು ಶೀಘ್ರವೇ ಆಗಲಿದೆ ಎಂದು ತಿಳಿಸಿದರು.

ನಾನೂ, ನೀವು ಎಂಪಿಗಳೆ!

ನಾನು ಮೆಂಬರ್ ಆಫ್ ಪಾರ್ಲಿಮೆಂಟ್, ನೀವು ಮೆಂಬರ್ ಆಫ್ ಪಂಚಾಯತ್’ ಹೀಗಾಗಿ, ನಾವಿಬ್ಬರು ಒಂದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಮೋದಿ ಅವರು ಸ್ಮಾರ್ಟ್ ಸಿಟಿ ಮತ್ತು ಸ್ಮಾರ್ಟ್ ವಿಲೇಜ್ ಪರಿಕಲ್ಪನೆಯ ಮೂಲಕ ಹಲವು ಸೌಲಭ್ಯಗಳನ್ನು ದೇಶಾದ್ಯಂತ ನೀಡಿದ್ದಾರೆ. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿ ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ರಸ್ತೆಗಳನ್ನು ಕಲ್ಪಿಸಲಾಗಿದೆ. ನೂರಾರು ಕೋಟಿ ರೂ. ವೆಚ್ಚದಲ್ಲಿ ೬೨೩ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದರು.

ಶಾಸಕರಾದ ಹರತಾಳು ಹಾಲಪ್ಪ, ಆಯನೂರು ಮಂಜುನಾಥ್, ಭಾರತಿಶೆಟ್ಟಿ, ಅಶೋಕ್ ನಾಯ್ಕ್, ಮಾಡ್ಯಾಳ ವಿರೂಪಾಕ್ಷಪ್ಪ, ಪಕ್ಷದ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಪ್ರಮುಖರಾದ ಕೆ.ಎಸ್.ಗುರುಮೂರ್ತಿ, ಡಿ.ಎಸ್. ಅರುಣ್, ಎಂ.ಬಿ.ಭಾನುಪ್ರಕಾಶ್, ಎ.ಎನ್.ನಟರಾಜ್, ಪವಿತ್ರಾ ರಾಮಯ್ಯ, ಸುನೀತಾ ಅಣ್ಣಪ್ಪ, ಅಶ್ವತ್ಥ್ ನಾರಾಯಣ್, ವಿನಯ್ ಬಿದರೆ ಸೇರಿದಂತೆ ಕಾರ್ಯಕರ್ತರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಇದ್ದರು.

ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು 2,445 ಬಿಜೆಪಿಯ ಜನಪ್ರತಿನಿಧಿಗಳೇ ಇದ್ದಾರೆ. ಹೀಗಾಗಿ, ಶಿವಮೊಗ್ಗದಲ್ಲಿ ಗೆಲುವು ನಿರಾಯಾಸವಾಗಿದೆ. ಆದರೆ, ಪ್ರತಿಪಕ್ಷದವರಿಗೆ ನಮ್ಮ ಬುಟ್ಟಿಗೆ ಕೈಹಾಕಲು ಬಿಡಬಾರದು. ಸಾಧ್ಯವಾದರೆ ಅವರ ಬುಟ್ಟಿಗೆ ಕೈಹಾಕಬಹುದು. ವಿಜಯೋತ್ಸವದಲ್ಲಿ ಭೇಟಿಯಾಗೋಣ.

ರಗ ಜ್ಞಾನೇಂದ್ರ, ಗೃಹ ಸಚಿವ

ಕಾಂಗ್ರೆಸ್‌ನವರು ಮೊದಲಿನಿಂದಲೂ ಹೊಡೆದಾಳುವ ನೀತಿ ಅನುಸರಿಸಿಕೊಂಡು ಬಂದಿದ್ದಾರೆ. ಲಿಂಗಾಯತರ ವಿಷಯಕ್ಕೆ ಕೈಹಾಕಿದರು ಸರಕಾರವನ್ನೇ ಕಳೆದುಕೊಂಡರು. ಬಿಟ್‌ಕಾಯಿನ್ ಎಂದು ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಈಗ ಮುಸಲ್ಮಾನರ ಗಲಾಟೆ. ಎರಡು ಬಣಗಳಾಗಿ ಅವರೇ ಹೊಡೆದಾಡುಕೊಳ್ಳುತ್ತಿದ್ದಾರೆ. ನಾವು ಭಾರತಾಂಬೆಯ ಮಕ್ಕಳು. ಜಾತಿ, ಆಮಿಷಗಳಿಗೆ ಒಳಗಾಗಬೇಡಿ. ಕಳೆದ ಬಾರಿ ಆಕಸ್ಮಿಕವಾಗಿ ಸೋತಿದ್ದೇವೆ. ಈ ಬಾರಿ ಸೋಲಲ್ಲ. ಅಭಿವೃದ್ಧಿ ಹಾಗೂ ದೇಶದ ವಿಚಾರ ಇಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ

ಕೆ.ಎಸ್.ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಸಚಿವ

Ad Widget

Related posts

ಶಿವಮೊಗ್ಗದ 15 ಗ್ರಾಮ ಪಂಚಾಯತ್ ಗಳ ಚುನಾವಣೆಗೆ ಮುಹೂರ್ತ ಫಿಕ್ಸ್.

Malenadu Mirror Desk

ಸಾಕು ನಾಯಿ ಮೇಲೆ ಗುಂಡು ಹಾರಿಸಿದ ವ್ಯಕ್ತಿ: ಠಾಣೆಗೆ ದೂರು

Malenadu Mirror Desk

ಸಿಗಂದೂರು ಕ್ಷೇತ್ರದಿಂದ ಜನಮುಖಿ ಕೆಲಸ, ನವರಾತ್ರಿ ಕಾರ್ಯಕ್ರಮದಲ್ಲಿ ಅರುಣಾನಂದ ಸ್ವಾಮೀಜಿ ಪ್ರಶಂಸೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.