ಭ್ರಷ್ಟಾಚಾರ ಮತ್ತು ಜಾತಿಯ ವಿಷವರ್ತುಲದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತನ್ನು ಜನಪರಗೊಳಿಸುವ ಮತ್ತು ಕನ್ನಡ ಕಟ್ಟುವ ಉದ್ದೇಶದಿಂದ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು, ಹೆಚ್ಚಿನ ಅಂತರದಿಂದ ಗೆಲ್ಲಿಸಬೇಕೆಂದು ಸ್ಪರ್ಧಾಳು ಶಿ.ಜು.ಪಾಶ ಮನವಿ ಮಾಡಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ಮುಖದ ಅನ್ವೇಷಣೆಯಲ್ಲಿರುವ ಕ.ಸಾ.ಪ ಸದಸ್ಯರು ಈ ಬಾರಿ ಹಣ, ಹೆಂಡ, ಜಾತಿಯ ಲಾಭಿಯನ್ನು ದೂರವಿಟ್ಟು ಅಚ್ಚರಿಯ ಫಲಿತಾಂಶ ನೀಡಲಿದ್ದಾರೆ ಎಂಬ ವಿಶ್ವಾಸವಿದೆ. ಕನ್ನಡ ಸಾಹಿತ್ಯ ಪರಿಷತ್ ನಂತಹ ಸಾಂಸ್ಕೃತಿಕ ಕ್ಷೇತ್ರವು ಕೂಡಾ ಹಣ, ಹೆಂಡ, ಜಾತಿ ಅಲ್ಲದೆ, ರಾಜಕೀಯಕ್ಕೂ ಪ್ರವೇಶ ಮಾಡಿರುವುದು ಅತ್ಯಂತ ದುರಂತವಾಗಿದೆ. ಈ ಬಾರಿ ಸದಸ್ಯರು ಇಂತಹ ವಾತಾವರಣಕ್ಕೆ ಬಲಿಯಾಗದೆ ಜಾತಿಯ ಭೂತಗಳಿಗೆ ಚಳಿ ಬಿಡಿಸಲಿದ್ದು, ಕ.ಸಾ.ಪ ಕ್ಕೆ ತಗಲಿರುವ ನೀಚ ರಾಜಕಾರಣವನ್ನು ದೂರ ಇಡಲಿದ್ದಾರೆ. ಆದ್ದರಿಂದಲೇ ಹೊಸ ಮುಖದ ಅನ್ವೇಷಣೆಯಲ್ಲಿರುವ ಅವರು ಅಚ್ಚರಿಯ ಫಲಿತಾಂಶ ನೀಡಲಿದ್ದು, ತಾವು ಗೆಲ್ಲುವುದು ಖಚಿತ ಎಂದರು.
ಈಗಾಗಲೇ ಶೇಕೆ ೮೦ ರಷ್ಟು ಮತದಾರರನ್ನು ಭೇಟಿಯಾಗಿದ್ದೇನೆ. ಬಹುತೇಕ ಎಲ್ಲರ ಮನಸ್ಸಿನಲ್ಲಿಯೂ ಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಇಬ್ಬರು ಮಾಜಿ ಅಧ್ಯಕ್ಷರ ಬಗ್ಗೆ ಅಸಹನೆಯಿದೆ. ಈ ಹಿಂದೆ ಈ ಇಬ್ಬರು ಮಾಡಿದ ಕೆಲಸಗಳ ಬಗ್ಗೆ ಟೀಕಿಸುತ್ತಿದ್ದಾರೆ. ಅವರು ಗೆಲ್ಲಲು ವಾಮಮಾರ್ಗ ಅನುಸರಿಸುತ್ತಿರುವುದನ್ನು ಕಂಡು ಬೇಸರಗೊಂಡಿದ್ದಾರೆ. ಇಂತವರು ಗೆದ್ದರೆ ಕ.ಸಾ.ಪ. ಹೇಗೆ ಉಳಿದೀತು ಎಂಬ ಆತಂಕದಲ್ಲಿದ್ದಾರೆ.
ಹೊಸತನಕ್ಕಾಗಿ ಮತ್ತು ಸರ್ವಜಾತಿ, ಸರ್ವಜನರ ಬಳಿಗೆ ಸಾಹಿತ್ಯ ಪರಿಷತ್ ಕೊಂಡೊಯ್ಯಲು ಸಹೃದಯಿ ಕನ್ನಡಿಗರು ನನ್ನನ್ನು ಬೆಂಬಲಿಸಬೇಕೆಂದು ಕೋರಿದರು. ಪತ್ರಿಕಾಗೊಷ್ಠಿಯಲ್ಲಿ ಹಿರಿಯ ಪತ್ರಕರ್ತ ಜಿ.ಪದ್ಮನಾಭ, ಜಿ.ಚಂದ್ರಶೇಖರ್, ಎಸ್.ಕೆ ಗಜೇಂದ್ರ ಸ್ವಾಮಿ, ಮತ್ತು ಕೆ.ನಾಗರಾಜ್, ದುರ್ಗಾ ಪ್ರಿಂಟರ್ಸ್ ಶ್ರೀನಿವಾಸ್ ಇದ್ದರು.