Malenadu Mitra
ರಾಜ್ಯ ಶಿವಮೊಗ್ಗ

ರುದ್ರೇಶಪ್ಪ ಎಂಬ ಬಂಗಾರದ ಮನುಷ್ಯ!. ಹತ್ತು ಕೆಜಿ ಚಿನ್ನ, ಅಪಾರ ನಗದು ಪತ್ತೆ, ಎಸಿಬಿ ದಾಳಿಯಲ್ಲಿ ಬಯಲಾದ ಕೃಷಿ ಅಧಿಕಾರಿಯ ಚಿನ್ನದ ಕೃಷಿ

ರಾಜ್ಯದ 15 ಅಧಿಕಾರಿಗಳ ಅಕ್ರಮ ಆಸ್ತಿ ಬೇಟೆ ಮಾಡಿದ ಎಸಿಬಿ ಅಧಿಕಾರಿಗಳಿಗೆ ಭರ್ಜರಿ ಶಿಕಾರಿ ಆಗಿರುವುದು ಶಿವಮೊಗ್ಗದಲ್ಲಿ ಅನ್ನುವುದು ಮಲೆನಾಡಿನ ಜನಕ್ಕೆ ಅಚ್ಚರಿ ಮೂಡಿಸಿದೆ. ಬರ -ನೆರೆಯಿಂದ ಬಳಲಿ ಬೆಂಡಾಗಿರುವ ರೈತರನ್ನು ಪ್ರತಿನಿಧಿಸುವ ಕೃಷಿ ಇಲಾಖೆ ಜಂಟಿ ನಿರ್ದೇಶಕರಾಗಿರುವ ರುದ್ರೇಶಪ್ಪರ ಚಿನ್ನದ ಕೃಷಿ ಕಂಡು ದಾಳಿ ಮಾಡಿರುವ ಅಧಿಕಾರಿಗಳೇ ದಂಗಾಗಿ ಹೋಗಿದ್ದಾರೆ.

ಅಗೆದಷ್ಟು ಆಳ ಈ ಚಿನ್ನದ ಗಣಿ

ಚನ್ನಗಿರಿ ಮೂಲದ ರುದ್ರೇಶಪ್ಪ ಅವರು ಹಾಲಿ ಗದಗ ಜಿಲ್ಲೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕರಾಗಿದ್ದಾರೆ. ಮಧ್ಯಾಹ್ನದ ತನಕ ಶಿವಮೊಗ್ಗ ನಗರದ ಪ್ರತಿಷ್ಠಿತ ಗೋಪಾಲಗೌಡ ಬಡಾವಣೆ ಹಾಗೂ ಚಾಲುಕ್ಯ ನಗರದಲ್ಲಿ 30 ಕ್ಕೂ ಹೆಚ್ಚು ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಮೊದಲು ಮನೆಯೆಂದು ತಪಾಸಣೆಗಿಳಿಸಿ ಎಸಿಬಿ ಆಫೀಸರ್‍ಗಳಿಗೆ ಕೊನೆಗೆ ಅದು ಸ್ವರ್ಣಕುಟೀರ ಎಂದು ಗೊತ್ತಾಗಿದೆ.
ಚಾಲುಕ್ಯ ನಗರದ ಮನೆಯಲ್ಲಿ ಬರೋಬ್ಬರಿ 10 ಕೆ.ಜಿ.ಬಂಗಾರ ಅದೂ 100 ಗ್ರಾಂನ 60 ಚಿನ್ನದ ಬಿಸ್ಕೆಟ್, 50 ಗ್ರಾಂನ 8 ಚಿನ್ನದ ಬಿಸ್ಕೆಟ್, ಇತರೆ ಚಿನ್ನಾಭರಣ ಒಂದೂವರೆ ಕೆಜಿಯಷ್ಟು ಸಿಕ್ಕಿದೆ. ಜೊತೆಗೆ, ವಜ್ರದ ಹಾರಗಳು, 3 ಕೆಜಿ ಬೆಳ್ಳಿ, 15 ಲಕ್ಷ ರೂಪಾಯಿ ನಗದು ಸಿಕ್ಕಿದೆ. ಪ್ರಸ್ತುತ ಚಾಲುಕ್ಯನಗರದ ಮನೆಯೊಂದರಲ್ಲೇ ಇಷ್ಟೊಂದು ದೊಡ್ಡ ಪ್ರಮಾಣದ ಸಂಪತ್ತು ಸಿಕ್ಕಿದೆ.

ಅಪಾರ ಆಸ್ತಿ ಪತ್ತೆ

ಶಿವಮೊಗ್ಗದಲ್ಲಿ ಚಾಲುಕ್ಯ ನಗರ ಮತ್ತು ಗೋಪಾಳದ ಬಿ ಬ್ಲಾಕ್ 4 ನೇ ಹಂತದಲ್ಲಿರುವ ಮನೆ ಹೊರತು ಪಡಿಸಿ ಶಿವಮೊಗ್ಗದಲ್ಲಿಯೇ 4 ಸೈಟು, ತಣ್ಣಿಗೆರೆಯಲ್ಲಿ 1 ಮನೆ 8 ಎಕರೆ ಜಮೀನು ಹೊಂದಿರುವ ಬಗ್ಗೆ ಮಾಹಿತಿಯಿದೆ. 20 ಲಕ್ಷ ಮೌಲ್ಯದ ಇನ್ನೋವಾ, 10 ಲಕ್ಷ ರೂ. ನೆಕ್ಸಾನ್ ಕಾರು, 1,50,000 ರೂ ಮೌಲ್ಯದ 3 ಸ್ಕೂಟಿ, ಹಾಗೂ 20 ಲಕ್ಷ ರೂ. ಮೌಲ್ಯದ ಜೆಸಿಬಿ ವಾಹನ ಹೊಂದಿರುವುದಾಗಿ ತಿಳಿದು ಬಂದಿದೆ.
ಅಧಿಕಾರಿಗಳು ತಪಾಸಣೆ ಮುಂದುವರಿಸಿದ್ದು, ರುದ್ರೇಶಪ್ಪ ಸಮ್ಮುಖದಲ್ಲಿ ಪಂಚನಾಮೆ ಮಾಡಲಾಗುತ್ತಿದೆ. ಇಷ್ಟು ಮಾತ್ರವಲ್ಲದೆ ಅವರ ಬ್ಯಾಂಕ್ ಖಾತೆ ಮತ್ತು ಲಾಕರ್‍ಗಳ ಪರಿಶೀಲನೆ ಇನ್ನೂ ಬಾಕಿಯಿದೆ. ಅಲ್ಲಿ ಇನ್ನು ಯಾವ ಮಾಯಾಲೋಕ ಅಡಗಿದೆಯೊ ಎಂಬುದು ಗುರುವಾರ ಬಹಿರಂಗವಾಗುವ ಸಾಧ್ಯತೆಯಿದೆ.
ಶಿವಮೊಗ್ಗದಲ್ಲಿ ನಡೆದ ದಾಳಿಯಲ್ಲಿ ಎಸಿಬಿಯ ಪೂರ್ವ ವಲಯದ ಎಸ್ಪಿ ಜಯಪ್ರಕಾಶ್ ನೇತೃತ್ವದಲ್ಲಿ ಶಿವಮೊಗ್ಗದ ಡಿವೈಎಸ್ಪಿ ಲೋಕೇಶ್, ಪಿಐ ವಸಂತ ಕುಮಾರ್, ಇಮ್ರಾನ್ ಬೇಗ್ ಹಾಗೂ ಮೂವತ್ತಕ್ಕೂ ಅಧಿಕ ಸಿಬ್ಬಂದಿಯ ತಂಡ ಭಾಗವಹಿಸಿತ್ತು.

Ad Widget

Related posts

ಶಿವಮೊಗ್ಗ ವಿಮಾನ ನಿಲ್ದಾಣ ಕಾರ್ಯಾಚರಣೆ ಕುರಿತು ಪೂರ್ವಭಾವಿ ಸಭೆ

Malenadu Mirror Desk

ಶಿವಮೊಗ್ಗದಲ್ಲಿ ಕೊರೊನಕ್ಕೆ 1 ಬಲಿ, 46 ಸೋಂಕು

Malenadu Mirror Desk

ಕಲಾ ವಿದ್ಯಾರ್ಥಿಗಳಿಗೆ ತಾಂತ್ರಿಕ ಕಲಿಕೆಯ ನೈಪುಣ್ಯತೆ ಅಗತ್ಯ: ಎಸ್.ಎಂ.ನೀಲೇಶ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.