ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯ ಸಾಮಾನ್ಯ ಕೃಷಿ ಕುಟುಂಬದ ಎಚ್.ಎಲ್.ಅಕ್ಷತಾ ಅಪ್ಪಅಮ್ಮನ ಕನಸಿನಂತೆ ಕೃಷಿ ಪದವಿಯಲ್ಲಿ ಪ್ರಥಮ ರ್ಯಾಂಕ್‍ಗಳಿಸುವ ಮೂಲಕ 4 ಚಿನ್ನದ ಪದಕಗಳನ್ನು ಕೊರಳಿಗೇರಿಸಿಕೊಂಡು ಸಂಭ್ರಮಿಸಿದರು. ಅದೇ ರೀತಿ ಹಿರಿಯೂರಿನ ತೋಟಗಾರಿಕೆ ವಿವಿಯಲ್ಲಿ ಪ್ರಥಮ ರ್ಯಾಂಕ್‍ನೊಂದಿಗೆ ನಾಲ್ಕು ಚಿನ್ನದ ಪದಕ ಗಳಿಸಿದ ನೆಲಮಂಗಲದ ಶಿಕ್ಷಕ ದಂಪತಿ ನಂಜುಂಡಪ್ಪ ಮತ್ತು ಮಂಜುಳಾ ಅವರ ಪುತ್ರಿ ಎನ್.ಸ್ಪೂರ್ತಿ ಅವರೂ ಪ್ರಥಮ ರ್ಯಾಂಕ್‍ನೊಂದಿಗೆ ನಾಲ್ಕು ಚಿನ್ನದ ಪದಕ ಪಡೆದು ಬೀಗಿದರು. ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ 6ನೇ ಘಟಿಕೋತ್ಸವ ಸಮಾರಂಭದಲ್ಲಿ ಈ ಸಾಧಕ ಯುವತಿಯರು ಎಲ್ಲರ ಆಕರ್ಷಣೆಯಾಗಿದ್ದರು. ಮಕ್ಕಳು ಸಾಧನೆ ಕಣ್ತುಂಬಿಕೊಂಡ ಪೋಷಕರ ಸಂತೋಷಕ್ಕೆ ಪಾರವೇ ಇರಲಿಲ್ಲ. ಕೃಷಿ ಕೀಟಶಾಸ್ತ್ರದಲ್ಲಿ ಪಿಎಚ್‍ಡಿ ಮಾಡಿದ ಎಸ್.ಅಂಬರೀಶ್, ಕೃಷಿ ಕೀಟಶಾಸ್ತ್ರದಲ್ಲಿ ಸ್ನಾತಕೋತ್ತರ ಪ್ರಥಮ ರ್ಯಾಂಕ್ ಗಳಿಸಿದ ಜೆ.ದಿವ್ಯಾ ಮತ್ತು ಅರಣ್ಯಶಾಸ್ತ್ರ ಪದವಿಯಲ್ಲಿ ಪ್ರಥಮ ರ್ಯಾಂಕ್ ಗಳಿಸಿದ ಕ್ಷಮಾ ಕೋಪರ್ಡೆ ಅವರು ತಲಾ ಎರಡು ಚಿನ್ನದ ಪದಕ ಗಳಿಸಿ ವಿದ್ಯಾರ್ಥಿಗಳಿಗೆ ಸ್ಫೂರ್ತಿಯ ಸೆಲೆಯಾಗಿ ವಿವಿ ಆವರಣದಲ್ಲಿ ಸಂಭ್ರಮಿಸಿದರು.
ಹಸಿವುಮುಕ್ತ ರಾಷ್ಟ ನಿರ್ಮಾಣಕ್ಕೆ ಮುಂದಾಗಿ :
ಡಾ. ಅಗರವಾಲ್ ಕರೆ
ಪೌಷ್ಠಿಕಾಂಶಯುಕ್ತ ಹಾಗೂ ಹಸಿವುಮುಕ್ತ ರಾಷ್ಟ್ರ ನಿರ್ಮಾಣ ಇಂದಿನ ತುರ್ತು ಅಗತ್ಯ. ಈ ನಿಟ್ಟಿನಲ್ಲಿ ಕೃಷಿ ಪದವಿ ಪಡೆದ ವಿದ್ಯಾರ್ಥಿಗಳು ಕೆಲಸ ಮಾಡÀಬೇಕಿದೆ ಎಂದು ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಉಪ ಮಹಾ ನಿರ್ದೇಶಕ ಡಾ ರಾಕೇಶ್ ಚಂದ್ರ ಅಗರವಾಲ್ ಹೇಳಿದರು.
ಅವರು ಗುರುವಾರ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ನವಿಲೆಯ ವಿವಿ ಆವರಣದಲ್ಲಿ ಏರ್ಪಡಿಸಲಾಗಿದ್ದ 6ನೇ ಘಟಿಕೋತ್ಸವ ಸುಗ್ಗಿಸಂಭ್ರಮದಲ್ಲಿ ಭಾಗವಹಿಸಿ ಘಟಿಕೋತ್ಸವ ಭಾಷಣ ಮಾಡಿದರು.
ದೇಶದಲ್ಲಿ ಪ್ರತಿಯೊಬ್ಬರಿಗೂ ಗುಣಮಟ್ಟದ ಪೌಷ್ಠಿಕಾಂಶಯುಕ್ತ ಆಹಾರ ಲಭಿಸಬೇಕು. ದೇಶದಲ್ಲಿನ ಪೌಷ್ಠಿಕಾಂಶದ ಕೊರತೆಯನ್ನು ನೀಗಿಸುವಲ್ಲಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ಮೂಲಕ ಜಾಗತಿಕವಾಗಿ ದೇಶ ಗುರುತಿಸಿಕೊಳ್ಳುವ ಸ್ಥಾನಕ್ಕೆ ಕೊಂಡೊಯ್ಯುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ. ಈ ವಿಷಯವನ್ನು ಎಲ್ಲರೂ ಸವಾಲಾಗಿ ಸ್ವೀಕರಿಸಬೇಕೆಂದು ಕರೆ ನೀಡಿದರು.
ದೇಶದಲ್ಲಿ ಲಭಿಸುತ್ತಿರುವ ನೀರಿನಲ್ಲಿ ಶೇ.25ರಷ್ಟು ನೀರನ್ನು ಮಾತ್ರ ಬಳಸಲಾಗುತ್ತಿದ್ದು, ಶೇ.75ರಷ್ಟು ನೀರನ್ನು ವ್ಯರ್ಥವಾಗಿ ಸಮುದ್ರಗಳಿಗೆ ಹರಿಸಲಾಗುತ್ತಿದೆ. ಈ ನೀರನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕು. ಕಡಿಮೆ ನೀರಿನಲ್ಲಿ ಉತ್ತಮ ಬೆಳೆ ಹಾಗೂ ಇಳುವರಿಯನ್ನು ಪಡೆದು, ಆಹಾರೋತ್ಪಾದನೆಯಲ್ಲಿ ಹಾಗೂ ಆಹಾರ ಸಂಸ್ಕರಣೆಯಲ್ಲಿ ಭಾರತ ಸ್ವಾವಲಂಬನೆ ಸಾಧಿಸಬೇಕೆಂದು ಅವರು ಹೇಳಿದರು.
ರಾಜ್ಯಪಾಲ ಥ್ಯಾವರ್ ಚಂದ್ ಗೆಹ್ಲೋಟ್ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ನವಿಲೆಯ ವಿವಿ ಆವರಣದಲ್ಲಿ ಏರ್ಪಡಿಸಲಾಗಿದ್ದ 6ನೇ ಘಟಿಕೋತ್ಸವ ಸುಗ್ಗಿ ಸಂಭ್ರಮಕ್ಕೆ ಚಾಲನೆ ನೀಡಿದರು.
ಘಟಿಕೋತ್ಸವದಲ್ಲಿ ಇದೇ ಮೊದಲ ಬಾರಿಗೆ ವಿಶ್ವವಿದ್ಯಾನಿಲಯದ ವತಿಯಿಂದ ಹೈದ್ರಾಬಾದ್‍ನ ಭಾರತ್ ಬಯೋಟೆಕ್ ಸಂಸ್ಥೆಯ ಸಂಸ್ಥಾಪಕ ಡಾ ಕೃಷ್ಣಮೂರ್ತಿ ಎಲ್ಲಾ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಇದರೊಂದಿಗೆ ಕೃಷಿ ಮತ್ತು ತೋಟಗಾರಿಕೆ ವಿವಿಯ ಸಂಶೋಧನಾರ್ಥಿಗಳಿಗೆ ಡಾಕ್ಟರೇಟ್ ಹಾಗೂ ವಿವಿಧ ನಿಕಾಯಗಳ ಪದವೀಧರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ವಿವಿಯ ಕುಲಪತಿ ಡಾ|| ಎಂ.ಕೆ.ನಾಯ್ಕ್ ಸ್ವಾಗತಿಸಿದರು. ಕುಲಸಚಿವ ಡಾ. ಆರ್.ಲೋಕೇಶ್ ಸೇರಿದಂತೆ ವ್ಯವಸ್ಥಾಪನಾ ಮಂಡಳಿಯ ಸದಸ್ಯರು, ವಿಶ್ವವಿದ್ಯಾಲಯದ ಉಪನ್ಯಾಸಕರು, ಪದಕದ ದಾನಿಗಳು, ವಿದ್ಯಾರ್ಥಿಗಳು ಹಾಗೂ ಪೋಷಕರು
ಉಪಸ್ಥಿತರಿದ್ದರು.
ಘಟಿಕೋತ್ಸವದಲ್ಲಿ ಸ್ನಾತಕ ಪದವಿಯಲ್ಲಿ 238 ವಿದ್ಯಾರ್ಥಿಗಳಿಗೆ (ಬಿ.ಎಸ್ಸಿ.ಕೃಷಿ, ತೋಟಗಾರಿಕೆ ಮತ್ತು ಅರಣ್ಯ), ಕೃಷಿ, ತೋಟಗಾರಿಕೆ ಮತ್ತು ಅರಣ್ಯ ವಿಷಯಗಳಲ್ಲಿ 105 ಎಂ.ಎಸ್ಸಿ. ವಿದ್ಯಾರ್ಥಿಗಳಿಗೆ ಹಾಗೂ 15 ಪಿಹೆಚ್.ಡಿ.ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ. ಇದರಲ್ಲಿ 9 ಬಿ.ಎಸ್ಸಿ. ವಿದ್ಯಾರ್ಥಿಗಳಿಗೆ 15 ಚಿನ್ನದ ಪದಕಗಳನ್ನು, 14 ಎಂ.ಎಸ್ಸಿ. ವಿದ್ಯಾರ್ಥಿಗಳಿಗೆ 15 ಚಿನ್ನದ ಪದಕಗಳನ್ನು ಮತ್ತು 5 ಪಿಹೆಚ್.ಡಿ. ವಿದ್ಯಾರ್ಥಿಗಳಿಗೆ 5 ಚಿನ್ನದ ಪದಕಗಳನ್ನು, ಒಟ್ಟಾರೆ 35 ಚಿನ್ನದ ಪದಕಗಳನ್ನು 28 ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಪ್ರದಾನ ಮಾಡಲಾಯಿತು.
ಮೌಲ್ಯವರ್ಧನೆ ಕುರಿತ ನವೋದ್ಯಮ ಘಟಕಗಳು ಆರಂಭ: ಎಂ.ಕೆ.ನಾಯ್ಕ್
ಶಿವಮೊಗ್ಗ: ವಿಶ್ವವಿದ್ಯಾಲಯದಲ್ಲಿ ಬಾಳೆ ಅಂಗಾಂಶ ಕೃಷಿ, ಜೈವಿಕ ಗೊಬ್ಬರ ಮತ್ತು ಜೈವಿಕ ಪೀಡೆನಾಶಕಗಳ ಉತ್ಪಾದನೆ, ಅಡಿಕೆ ಉಪ ಉತ್ಪನ್ನಗಳ ತಯಾರಿಕೆ, ಅಡಿಕೆ ನ್ಯಾನೋ ಉತ್ಪನ್ನ, ಅನಾನಸ್ ಸಂಸ್ಕರಣೆ ಇನ್‍ಕ್ಯುಬೇಶನ್ ಸೌಲಭ್ಯ, ಸಾಂಬಾರು ಪದಾರ್ಥ ಸಂಸ್ಕರಣೆ, ಶೇಂಗಾ ಸಂಸ್ಕರಣೆ, ಮೌಲ್ಯವರ್ಧನೆ ಕುರಿತ ನವೋದ್ಯಮ ಸೌಲಭ್ಯ ಆರಂಭಿಸಲಾಗಿದೆ ಎಂದು ಕೃಷಿ ಮತ್ತು ತೋಟಗಾರಿಕೆ ವಿವಿಯ ಕುಲಪತಿ ಪ್ರೊ ಮಂಜುನಾಥ ಕೆ. ನಾಯ್ಕ್ ಹೇಳಿದರು.
6ನೆಯ ಘಟಿಕೋತ್ಸವದಲ್ಲಿ ಸ್ವಾಗತ ಭಾಷಣ ಮಾಡಿ, ಕಾಲೇಜಿನ ಬಗ್ಗೆ ಸಂಕ್ಷಿಪ್ತ ವರದಿ ನೀಡಿದ ಅವರು, 2020-21ನೇ ಶೈಕ್ಷಣಿಕ ವರ್ಷದಲ್ಲಿ ನಡೆದ ಐ.ಸಿ.ಎ.ಆರ್. ಜೆ.ಆರ್.ಎಫ್. ಪರೀಕ್ಷೆಯಲ್ಲಿ ನಮ್ಮ ವಿಶ್ವವಿದ್ಯಾಲಯದ ಒಟ್ಟು 14 ವಿದ್ಯಾರ್ಥಿಗಳು ರ್ಯಾಂಕ್ ಪಡೆದಿದ್ದಾರೆ ಹಾಗೂ ಅಖಿಲ ಭಾರತ ಐ.ಸಿ.ಎ.ಆರ್. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 2 ವಿದ್ಯಾರ್ಥಿಗಳು ಎಸ್.ಆರ್.ಎಫ್.ಗಳಾಗಿ ಆಯ್ಕೆಯಾಗಿರುತ್ತಾರೆ ಹಾಗೂ 15 ವಿದ್ಯಾರ್ಥಿಗಳು ಎನ್.ಟಿ.ಎಸ್. (ಸ್ನಾತಕೋತ್ತರ) ಪ್ರವೇಶ ಪಡೆದುಕೊಂಡಿರುತ್ತಾರೆ. 2020-21ರ ಸಾಲಿನಲ್ಲಿ ಸ್ನಾತಕ ಪದವಿ ಕಾರ್ಯಕ್ರಮಗಳಿಗೆ ಒಟ್ಟು 399 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದಾರೆ. ಜೊತೆಗೆ ಶಿವಮೊಗ್ಗ, ಮೂಡಿಗೆರೆ ಮತ್ತು ಪೊನ್ನಂಪೇಟೆ ಕಾಲೇಜುಗಳಲ್ಲಿ 122 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಗೆ ಹಾಗೂ ಕತ್ತಲಗೆರೆ ಮತ್ತು ಬ್ರಹ್ಮಾವರದಲ್ಲಿ 45 ವಿದ್ಯಾರ್ಥಿಗಳು ಡಿಪ್ಲೊಮಾ ಕೃಷಿಗೆ ಪ್ರವೇಶ ಪಡೆದಿರುತ್ತಾರೆ. ಇರುವಕ್ಕಿಯ ವಿಶ್ವವಿದ್ಯಾಲಯದ ಆವರಣದಲ್ಲಿ ್ಲ 57 ವಿದ್ಯಾರ್ಥಿಗಳಿಗೆ ಕೃಷಿ ಪದವಿ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದರು.
ಕೃಷಿ ವಿಸ್ತರಣಾ ವಿಭಾಗದ ವಿದ್ಯಾರ್ಥಿ ಎಂ. ಸಿ. ವಿವೇಕ್ ಅವರಿಗೆ ಹೈದರಾಬಾದ್‍ನ ಮ್ಯಾನೇಜ್ ವತಿಯಿಂದ ರಾಷ್ಟ್ರಮಟ್ಟದ ಅತ್ಯುತ್ತಮ ಎಂ.ಎಸ್ಸಿ. ಪ್ರಬಂಧ ಪ್ರಶಸ್ತಿ ನೀಡಿ ಗೌರವಿಸಿದೆ. ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದಿಂದ ಪದವಿ ಪಡೆದಿರುವ ಕು. ಪಲ್ಲವಿ ಪೂಜಾರ್ ಇವರು ಜರ್ಮನಿಯ ನೇತಾಜಿ ಸುಭಾಸ್-ಐಸಿಎಆರ್ ಇಂಟರ್‍ನಾಷನಲ್ ಫೆಲೋಶಿಪ್‍ಗೆ ಬಾಜನರಾಗಿದ್ದಾರೆ. ಶಶಿಭೂಷಣ್ ಮಿಶ್ರಾ ಮತ್ತು ಝೆಂಕಾರ್ ಎಂ.ಜೆ. ಅವರು ಕ್ರಮವಾಗಿ ಕೋಪನ್ ಹೇಗನ್ ವಿಶ್ವವಿದ್ಯಾಲಯ ಮತ್ತು ಜರ್ಮನಿಯ ಗೊಟ್ಟಿಂಗನ್ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ.ಗೆ ಪ್ರವೇಶ ಪಡೆದಿರುವುದು ಹರ್ಷವೆನಿಸಿದೆಮಂಜುನಾಥ ಕೆ. ನಾಯ್ಕ್ , ಕುಲಪತಿ