ಕುವೆಂಪು ವಿವಿಯಲ್ಲಿ ಕ್ಯಾನ್ಸರ್ ಕುರಿತು ಜಾಗೃತಿ
ಭಾರತದಲ್ಲಿ ಒಂದು ವರ್ಷಕ್ಕೆ ಸುಮಾರು ಮೂರು ಲಕ್ಷ ಜನರು ಮಾರಣಾಂತಿಕ ಕ್ಯಾನ್ಸರ್ ಖಾಯಿಲೆಗೆ ತುತ್ತಾಗುತ್ತಿದ್ದಾರೆ. ಪಾಶ್ಚಿಮಾತ್ಯ ದೇಶಗಳಲ್ಲಿ ಗುಣಮುಖರಾಗುವರ ಸಂಖ್ಯೆ ಶೇಕಡ 84 ರಷ್ಟಿದ್ದು, ಭಾರತದಲ್ಲಿ ಶೇಕಡ 62 ರಷ್ಟಿದೆ. ಖಾಯಿಲೆಯ ಅರಿವಿನ ಕೊರತೆಯಿಂದ ಕ್ಯಾನ್ಸರ್ ಪೀಡಿತರು 3ನೇ ಮತ್ತು 4ನೇ ಹಂತದಲ್ಲಿ ಆಸ್ಪತ್ರೆಗೆ ಭೇಟಿನೀಡುತ್ತಿರುವುದು ರೋಗದ ತೀವ್ರತೆಗೆ ಮುಖ್ಯ ಕಾರಣ ಎಂದು ಮಲ್ನಾಡ್ ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರ ಚಿಕಿತ್ಸಾ ತಜ್ಞ ಡಾ.ರೋಷನ್ ಬಿ.ಎ.ರಾವ್ ಅಭಿಪ್ರಾಯಪಟ್ಟರು.
ವಿಶ್ವವಿದ್ಯಾಲಯದ ಆರೋಗ್ಯ ಕೇಂದ್ರ ಮತ್ತು ಶಿವಮೊಗ್ಗದ ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆಯ ಸಹಯೋಗದೊಂದಿಗೆ ಗುರುವಾರ ಪ್ರೊ. ಎಸ್. ಪಿ. ಹಿರೇಮಠ್ ಸಭಾಂಗಣದಲ್ಲಿ ಕ್ಯಾನ್ಸರ್ ಖಾಯಿಲೆಯ ಕುರಿತು ಆಯೋಜಿಸಲಾಗಿದ್ದ ಜಾಗೃತಿ ಕಾರ್ಯಕ್ರಮವನ್ನು ಉಧ್ಘಾಟಿಸಿ ಅವರು ಮಾತನಾಡಿದರು. ತಂಬಾಕು ಸೇವನೆ, ಮದ್ಯಪಾನ, ಧೂಮಪಾನ, ಜೀವನದ ಒತ್ತಡ, ಡ್ರಗ್ಸ್ ಸೇವನೆ, ಧೀರ್ಘಕಾಲದಿಂದ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಕ್ಯಾನ್ಸರ್ ಖಾಯಿಲೆಯ ಸಾಧ್ಯತೆ ಹೆಚ್ಚು ಎಂದರು.
ಒಂದು ಅಥವಾ ಎರಡು ವಾರಗಳಿಗೂ ಅಧಿಕ ಸಮಯ ಬಾಯಿಯಲ್ಲಿ ಗಾಯ ಗುಣವಾಗದಿರುವುದು, ಧ್ವನಿ ಬದಲಾವಣೆ, ಊಟ ಕಡಿಮೆ ಸೇರುವುದು, ಮೂತ್ರದಲ್ಲಿ ರಕ್ತ ಹೋಗುವಿಕೆ, ಮೂಳೆಗಳಲ್ಲಿ ನೋವು ಮತ್ತು ದೇಹದಲ್ಲಿ ಗಡ್ಡೆಗಳು ಕಾಣಿಸಿಕೊಳ್ಳುವುದು ಕ್ಯಾನ್ಸರ್‌ನ ಮುನ್ಸೂಚನೆಗಳಾಗಿವೆ. ಆದ್ದರಿಂದ ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ ಪ್ರಾರಂಭಿಸಿದರೆ ಕ್ಯಾನ್ಸರ್‌ನಿಂದ ಗುಣಮುಖರಾಗಬಹುದು ಎಂದು ಸಲಹೆ ನೀಡಿದರು.
ಕುಲಸಚಿವರಾದ ಜಿ.ಅನುರಾಧ ಅವರು ಮಾತನಾಡಿ, ಆಧುನಿಕ ಜೀವನ ಶೈಲಿ ಆಹಾರ ಪದ್ಧತಿ ಮತ್ತು ದುಶ್ಚಟಗಳು ಮಾರಣಾಂತಿಕ ಕ್ಯಾನ್ಸರ್‌ಗೆ ಮುಖ್ಯ ಕಾರಣ, ಆದ್ದರಿಂದ ಆರೋಗ್ಯಕರ ಜೀವನ ಶೈಲಿ ಅಳವಡಿಸಿಕೊಳ್ಳುವುದು ಮತ್ತು ಸೂಕ್ತ ಸಮಯಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದರ ಮೂಲಕ ಕ್ಯಾನ್ಸರ್ ರೋಗವನ್ನು ತಡೆಗಟ್ಟಬಹುದು ಎಂದು ಅಭಿಪ್ರಾಯಪಟ್ಟರು.
ಹಣಕಾಸು ಅಧಿಕಾರಿ ಎಸ್ ರಾಮಕೃಷ್ಣ, ಆರೋಗ್ಯಾಧಿಕಾರಿ ಡಾ.ಶ್ರೀರಕ್ಷಾ, ಮಹಿಳಾ ವೈದ್ಯಾಧಿಕಾರಿ ಡಾ.ಉಷಾರಾಣಿ, ಆಪ್ತ ಸಮಾಲೋಚಕಿ ರಜಿನಿ, ಹಸೀನ, ವಿಶ್ವವಿದ್ಯಾಲಯದ ಆರೋಗ್ಯ ಸಿಬ್ಬಂದಿ, ಅಧ್ಯಾಪಕ ಹಾಗೂ ಅಧ್ಯಾಪಕೇತರ ನೌಕರರು ಉಪಸ್ಥಿತರಿದ್ದರು.