Malenadu Mitra
ರಾಜ್ಯ ಶಿವಮೊಗ್ಗ

ಸಂವಿಧಾನವನ್ನು ಅರ್ಥ ಮಾಡಿಕೊಂಡು ಗೌರವಿಸಬೇಕು : ನ್ಯಾ.ಮುಸ್ತಫಾ ಹುಸೇನ್

ಸಂವಿಧಾನ ದಿನಾಚರಣೆ

ನಮ್ಮ ನೆಲದ ಕಾನೂನಾದ ಸಂವಿಧಾನವನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು ಹಾಗೂ ಗೌರವಿಸಬೇಕು. ಸಂವಿಧಾನವನ್ನು ಗೌರವಿಸುವುದು ನಮ್ಮೆಲ್ಲರ ಮೂಲಭೂತ ಕರ್ತವ್ಯವಾಗಿದೆ ಎಂದು ಶಿವಮೊಗ್ಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮುಸ್ತಫಾ ಹುಸೇನ್.ಎಸ್.ಎ ಹೇಳಿದರು.
 ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ  ವಕೀಲರ ಭವನದಲ್ಲಿ ಏರ್ಪಡಿಸಲಾಗಿದ್ದ ‘ಸಂವಿಧಾನ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಾದಿಯಾಗಿ ಎಲ್ಲರೂ ಸಂವಿಧಾನವನ್ನು ಓದಿ ಅರ್ಥ ಮಾಡಿಕೊಳ್ಳಬೇಕು. ಹಾಗೂ ಸಂವಿಧಾನ ತಿಳಿದವರು ಇತರರಲ್ಲೂ ಇದರ ಅರಿವು ಮೂಡಿಸಬೇಕು. ಇದು ನಮ್ಮ ನೆಲದ ಮೂಲಭೂತ ಕಾನೂನಾಗಿದ್ದು ಮುಖ್ಯವಾಗಿ ವಕೀಲರು ಇದನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು. ನ್ಯಾಯಾಂಗಕ್ಕೆ ಸಂವಿಧಾನ ಒಂದು ಮುಖ್ಯ ಅಂಶವಾಗಿದ್ದು ಕಾನೂನು ವ್ಯವಹರಿಸುವ ನಮಗೆ ಇದು ಬಹು ಮಹತ್ವದ್ದಾಗಿದೆ ಎಂದರು.

ನಾವು ಐಚ್ಚಿಕವಾಗಿ ಸಂವಿಧಾನ ಓದಿದಲ್ಲಿ ನಮಗೆ ಸಂವಿಧಾನ ರಚನೆ ಹಿಂದೆ ಇರುವ ಮಹನೀಯರ ಪರಿಶ್ರಮ ಮತ್ತು ಆಶಯಗಳು ಅರ್ಥವಾಗುತ್ತವೆ. ಇದರ ರಚನೆ ಹಿಂದೆ ಬಹಳ ಶ್ರಮ ಇದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಕೂಡ ಡ್ರಾಫ್ಟಿಂಗ್ ಕೆಲಸ ಕಷ್ಟ. ಇದಕ್ಕೆ ಉತ್ತಮ ಕೌಶಲ್ಯದ ಅಗತ್ಯವಿದೆ ಎಂದರು.

ಬಹು ಸಂಸ್ಕೃತಿಯ ನಮ್ಮ ದೇಶಕ್ಕೆ ಅನ್ವಯವಾಗುವಂತಹ ಬಹುದೊಡ್ಡ ಸಂವಿಧಾನವನ್ನು ನೀಡಿದ ಮಹನೀಯರನ್ನು ಸ್ಮರಿಸುವ ದಿನ ಇದಾಗಿದೆ. ಸಂವಿಧಾನ ರಚನಾ ಪೂರ್ವದ ಚರ್ಚೆಗಳನ್ನು ವಕೀಲರು ಸೇರಿದಂತೆ ಎಲ್ಲರೂ ತಿಳಿದುಕೊಳ್ಳಬೇಕು. ಸಂವಿಧಾನ ನ್ಯಾಯಾಲಯಕ್ಕೆ ವಿಶೇಷ ಅಧಿಕಾರ ನೀಡಿದ್ದು, ಸಂವಿಧಾನ ಕಾನೂನು ಮತ್ತು ಅದರ ಬೆಳವಣಿಗೆಯನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ದೇವೇಂದ್ರಪ್ಪ ಮಾತನಾಡಿ, ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಲು ಒತ್ತಾಸೆಯಾಗಿ ನಿಂತಿದ್ದು ನಮ್ಮ ಸಂವಿಧಾನ. ವೈವಿಧ್ಯಮಯವಾದ ನಮ್ಮ ದೇಶದಲ್ಲಿ ಯಾವುದೇ ಬೇಧ ಭಾವವಿಲ್ಲದೆ ಎಲ್ಲರನ್ನೂ ಸಮಾನರಾಗಿ ಕಾಣುವ ಮತ್ತು ದೇಶದ ಒಗ್ಗಟ್ಟಿನ ಮೂಲಭೂತ ತತ್ವ ನಮ್ಮ ಸಂವಿಧಾನ. ಇಂತಹ ನಮ್ಮ ಸಂವಿಧಾನವನ್ನು ನಾವೆಲ್ಲರೂ ಗೌರವಿಸಬೇಕು. ಸಂವಿಧಾನ ರಚನೆ ಒಂದು ಬಹುದೊಡ್ಡ ಕಾರ್ಯವಾಗಿದ್ದು ಶಿವಮೊಗ್ಗದ ಹಿರಿಯರಾದ ಕೃಷ್ಣಮೂರ್ತಿಯವರು ಸಹ ಈ ಕಾರ್ಯದಲ್ಲಿ ಪಾಲ್ಗೊಂಡಿದ್ದರೆಂಬುದು ನಮಗೆ ಹೆಮ್ಮೆಯ ವಿಷಯವಾಗಿದೆ. ಪ್ರಸ್ತುತ ಎಲ್ಲ ವಕೀಲರು ಸಂವಿಧಾನದ ಆಶಯಗಳನ್ನು ಅರಿತು ಅದೇ ಪಥದಲ್ಲಿ ಸಾಗಬೇಕೆಂದು ಆಶಿಸಿದರು.
ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸರಸ್ವತಿ ಕೆ.ಎನ್. ಸ್ವಾಗತಿಸಿದರು. ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಕಾಂತ್‌ರಾಜ್ ಕೆ.ಆರ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯಾಧೀಶರು, ಸರ್ಕಾರಿ ಅಭಿಯೋಜಕರು, ನ್ಯಾಯವಾದಿಗಳು, ಸಂಘದ ಸದಸ್ಯರು, ಪ್ಯಾನೆಲ್ ವಕೀಲರು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಸಂವಿಧಾನ  ಪ್ರಜಾಪ್ರಭುತ್ವಕ್ಕೆ ಅಡಿಪಾಯ: ಆರ್.ಕೆ ಸಿದ್ದರಾಮಣ್ಣ

ಪ್ರಜೆಗಳಿಂದ ಪ್ರಜೆಗಳಿಗಾಗಿ ಆರಿಸಲ್ಪಟ್ಟ ಜನಪ್ರತಿನಿಧಿಗಳು ಪ್ರಜಾಪ್ರಭುಗಳ ಪ್ರತಿನಿಧಿಗಳಾಗಿ ಸಂವಿಧಾನಬದ್ಧವಾಗಿ ಕಟ್ಟಕಡೆಯ ವ್ಯಕ್ತಿಗೂ ಸಮಾನ ಹಕ್ಕು ನೀಡಲು ಶ್ರಮಿಸಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ, ಬಿಜೆಪಿ ರಾಜ್ಯ ಪ್ರಶಿಕ್ಷಣ ಸಹಸಂಚಾಲಕ ಆರ್.ಕೆ. ಸಿದ್ಧರಾಮಣ್ಣ ಹೇಳಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಎಸ್.ಸಿ. ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸಂವಿಧಾನ ದಿವಸ್ ಆಚರಣೆ ಅಂಗವಾಗಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಸಂವಿಧಾನ ದಿನದ ಆಚರಣೆ ನ. 26ಕ್ಕೆ ಸೀಮಿತವಾಗದೇ ನಿರಂತರ ಆಚರಣೆಯಾಗಬೇಕು. ಸಂವಿಧಾನ ಎನ್ನುವುದು ಭಾರತದ ಪ್ರಜಾಪ್ರಭುತ್ವಕ್ಕೆ ಒಂದು ಭದ್ರ ಅಡಿಪಾಯ. ಪ್ರಪಂಚದಲ್ಲಿ ಪ್ರಜೆಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪೂಜಾ ಸ್ವಾತಂತ್ರ್ಯ, ಸಾಮಾಜಿಕ, ಆರ್ಥಿಕ ರಾಜಕೀಯ ನ್ಯಾಯ, ನಂಬಿಕೆ, ವಿಚಾರ, ಧರ್ಮ ಮತ್ತು ಉಪಾಸನೆ ಸ್ವಾತಂತ್ರ್ಯ ನೀಡಿದ ಏಕೈಕ ದೇಶ ನಮ್ಮದು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸ್ಥಾನ ಮಾನ ಮತ್ತು ಅವಕಾಶಗಳ ಸಮಾನತೆಯನ್ನು ದೊರೆಯುವಂತೆ ಮಾಡಲು ದೇಶದ ಏಕತೆ ಮತ್ತು ಸಮಗ್ರತೆ ಕಾಪಾಡಲು ಎಲ್ಲರಲ್ಲಿ ಸ್ವಾತಂತ್ರ್ಯದ ಭಾವನೆ ಮೂಡಿಸಲು ದೇಶದ ಮೂಲೆ ಮೂಲೆಗಳಿಂದ ತಜ್ಞರನ್ನು ಆಯ್ಕೆ ಮಾಡಿ ಎಲ್ಲರಿಂದ ಮಾಹಿತಿ ಪಡೆದು ಡಾ. ಬಿ.ಆರ್. ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿ ಸಂವಿಧಾನದ ಕರಡು ಪ್ರತಿ ಸಿದ್ಧಪಡಿಸಿ ವಿಸ್ತಾರವಾಗಿ ಚರ್ಚೆ ಮಾಡಿ ಆ ಸಮಿತಿಯು ಸಂವಿಧಾನದ ಕರಡನ್ನು ಅಂಗೀಕರಿಸಿದ ದಿನ ಇದಾಗಿದೆ ಎಂದರು.

ಎಸ್.ಸಿ. ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀನಿವಾಸ ಕಾಸರವಳ್ಳಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಅಭ್ಯರ್ಥಿ ಡಿ.ಎಸ್. ಅರುಣ್, ಬಿಜೆಪಿ ಜಿಲ್ಲಾ ಪದಾಧಿಕಾರಿಗಳಾದ ಶಿವರಾಜ್, ಧರ್ಮ ಪ್ರಸಾದ್, ಪಾಲಿಕೆ ಸದಸ್ಯರಾದ ಚನ್ನಬಸಪ್ಪ, ಲತಾ ಗಣೇಶ್, ಧೀರರಾಜ್ ಹೊನ್ನವಿಲೆ, ಪ್ರಮುಖರಾದ ರತ್ನಾಕರ್ ಶೆಣೈ, ವೀರಭದ್ರಪ್ಪ ಪೂಜಾರ, ದೇವರಾಜ್ ಮಂಡೇನಕೊಪ್ಪ, ಪಿ. ಯೋಗೀಶ್, ದೇವರಾಜ್ ನಾಯ್ಕ್ ಮೊದಲಾದವರಿದ್ದರು.

Ad Widget

Related posts

ನೆಟ್ವರ್ಕ್ ಸಮಸ್ಯೆಗೆ ಶೀಘ್ರ ಪರಿಹಾರ : ಹಾಲಪ್ಪ

Malenadu Mirror Desk

ತೂದೂರು – ಮುಂಡುವಳ್ಳಿ ನೂತನ ಸೇತುವೆಗೆ ಮುಖ್ಯಮಂತ್ರಿ ಒಪ್ಪಿಗೆ : ಗೃಹ ಸಚಿವ ಆರಗ ಜ್ಞಾನೇಂದ್ರ

Malenadu Mirror Desk

ಶಿವಮೊಗ್ಗದಲ್ಲಿ 1024 ಮಂದಿ ಡಿಸ್ಚಾರ್ಜ್ 8 ಸಾವು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.