ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಸಂಸತ್ತಿನಲ್ಲಿ ಚರ್ಚಿಸಿ ವಾಪಸ್ ಪಡೆಯಬೇಕು ಮತ್ತು ಬೆಂಬಲಬೆಲೆಯನ್ನು ಶಾಸನಬದ್ಧಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಭೂ ಸುಧಾರಣಾ ಕಾಯ್ದೆಯನ್ನೂ ರದ್ದುಮಾಡಬೇಕು. ಭತ್ತ, ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ಸ್ಥಾಪಿಸಬೇಕು. ಬೆಂಬಲ ಬೆಲೆಯನ್ನು ಶಾಸನಬದ್ಧಗೊಳಿಸಬೇಕು. ಮಳೆ ಹಾನಿಗೆ ರೈತರು ಒಳಗಾಗಿದ್ದು, ಎಲ್ಲ ರೈತರ ಬೆಳೆಸಾಲವನ್ನು ಮನ್ನಾ ಮಾಡಬೇಕು ಮತ್ತು ಪರಿಹಾರ ನೀಡಬೇಕು. ವೈಜ್ಞಾನಿಕ ಬೆಲೆ ನಿಗದಿಪಡಿಸುವವರೆಗೂ ರೈತರ ಬ್ಯಾಂಕಿನ ವ್ಯವಹಾರವನ್ನು ಸಿಬಿಲ್ ವ್ಯಾಪ್ತಿಗೆ ಒಳಪಡಿಸಬಾರದು ಎಂದು ಪ್ರತಿಭಟನಾ ನಿರತ ರೈತರು ಆಗ್ರಹಿಸಿದರು.
ಅಪಾರ ಮಳೆಗೆ ಕಂದುಜಿಗಿ ಹುಳುವಿನ ಬಾಧೆಗೆ ರೈತರ ಬೆಳೆಗಳು ತುತ್ತಾಗಿವೆ. ಮೇವಿನ ಕೊರತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ಮೇವು ಖರೀದಿಗಾಗಿ ತಕ್ಷಣವೇ ೨೫ ಸಾವಿರ ರೂ. ಪರಿಹಾರ ಒದಗಿಸಬೇಕು. ವಿದೇಶಿ ಹಾಲಿನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಬಾರದು. ಜಾನುವಾರು ಸಾಕಣೆ ದುಬಾರಿಯಾಗಿದ್ದು, ರೈತರಿಗೆ ಲೀಟರ್ ಹಾಲಿಗೆ ಕನಿಷ್ಟ ೪೦ ರೂ. ಕೊಡಬೇಕು. ಕೃಷಿ ಉಪಕರಣಗಳಿಗೆ ಸಹಾಯಧನವನ್ನು ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ರೈತಸಂಘದ ವರಿಷ್ಟ ನಾಯಕ ಕೆ.ಟಿ. ಗಂಗಾಧರ್, ಪ್ರಮುಖರಾದ ಬೀರೇಶ್, ಮೋಹನ ಕೂಡ್ಲಿಗೆರೆ, ಯಶವಂತರಾವ್ ಘೋರ್ಪಡೆ, ಜಗದೀಶ್ ಮತ್ತಿತರರಿದ್ದರು.
ಸಂಯುಕ್ತ ಕಿಸಾನ್ ಮೋರ್ಚಾದಿಂದ ರಸ್ತೆತಡೆ
ಕೇಂದ್ರ ಸರ್ಕಾರದ ರೈತವಿರೋಧಿ ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಒತ್ತಾಯಿಸಿ, ಬೆಳೆಹಾನಿ ಪರಿಹಾರ ನೀಡಲು ಆಗ್ರಹಿಸಿ ನಗರದ ಅಶೋಕವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡುತ್ತಿದ್ದ ಸಂಯುಕ್ತ ಕಿಸಾನ್ ಮೋರ್ಚಾದ ರೈತನಾಯಕರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.
ಕನಿಷ್ಠ ಬೆಂಬಲ ಬೆಲೆ ಖಾತ್ರಿ ಮಾಡುವ ಕಾನೂನು ಹಾಗೂ ವಿದ್ಯುತ್ ಮಸೂದೆ-೨೦೨೦ ಕಾನೂನು ಕೂಡ ಇತ್ಯರ್ಥವಾಗಬೇಕು. ರೈತಚಳುವಳಿಯಲ್ಲಿ ಸುಮಾರು ೭೦೦ಕ್ಕೂ ಹೆಚ್ಚುಜನ ರೈತರು ಹುತಾತ್ಮರಾಗಿದ್ದಾರೆ. ಇವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು. ರೈತರ ಮೇಲೆ ಹಾಕಿರುವ ಸುಳ್ಳು ಕೇಸುಗಳನ್ನು ವಾಪಸ್ಸು ತೆಗೆದುಕೊಳ್ಳಬೇಕು. ಮಳೆಗೆ ರೈತರ ಬೆಳೆ ನಷ್ಟವಾಗಿದ್ದು, ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರೈತಮುಖಂಡ ಹೆಚ್. ಆರ್. ಬಸವರಾಜಪ್ಪ, ಎನ್. ರಮೇಶ್, ಮಹಾನಗರ ಪಾಲಿಕೆ ಸದಸ್ಯ ರಮೇಶ್ ಹೆಗ್ಡೆ, ಹೆಚ್.ಸಿ. ಯೋಗೀಶ್, ಸಿ.ಜಿ. ಮಧುಸೂದನ್, ಜಿ.ಎಂ. ಚಂದ್ರಪ್ಪ, ಹಿಟ್ಟೂರು ರಾಜು, ಎ.ಎಂ. ಮಹೇಶ್ವರಪ್ಪ, ಡಿ.ಹೆಚ್. ರಾಮಚಂದ್ರಪ್ಪ, ಪಂಚಾಕ್ಷರಪ್ಪ ಮತ್ತಿತರರಿದ್ದರು.