ಬಿಜೆಪಿಯ ವಿಧಾನಪರಿಷತ್ ಚುನಾವಣೆ ಪ್ರಚಾರ ಸಭೆಗೆ ಜನ ಸೇರುವುದನ್ನು ನೋಡಿ ಕಾಂಗ್ರೆಸ್ ನಿಬ್ಬೆರಗಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿದರು.
ಇಲ್ಲಿನ ಗಾಯತ್ರಿ ಕಲ್ಯಾಣ ಮಂದಿರದಲ್ಲಿ ಗ್ರಾಮಾಂತರ ಬಿಜೆಪಿಯಿಂದ ಏರ್ಪಡಿಸಲಾಗಿದ್ದ ಚುನಾವಣೆ ನಿಮಿತ್ತದ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಹಿಂದೆ ಕಾಂಗ್ರೆಸ್ ವತಿಯಿಂದ ಯಾರೇ ನಾಮಪತ ಹಾಕಿದರೂ ಅವರು ಗೆದ್ದುಬರುತ್ತಿದ್ದರು. ಆದರ ಇಂದು ಚಿತ್ರಣ ಬದಲಾಗಿದೆ. ದೇಶದಾದ್ಯಂತ ಬಿಜೆಪಿ ಪ್ರಬಲವಾಗಿದೆ. ಪ್ರಧಾನಿ ಮೋದಿ ಅವರ ಉತ್ತಮ ಆಡಳಿತದಿಂದ ಗ್ರಾಮಮಟ್ಟದವರೆಗೆ ಬಿಜೆಪಿ ಬೇರು ಬಿಟ್ಟಿದೆ. ಇದರಿಂದ ಚುನಾವಣೆ ಎಂದರೆ ಕಾಂಗ್ರೆಸ್ ಸೋಲುವಂತಹ ಸ್ಥಿತಿ ಎದುರಾಗಿದೆ. ಲೋಕಸಭೆಯಲ್ಲಿ ಅದರ ದಯನೀಯ ಸ್ಥಿತಿಯನ್ನು ಕಾಣಬಹುದು ಎಂದರು.
ಈ ಚುನಾವಣೆ ಮುಂಬರುವ ಜಿಪಂ, ತಾಪಂ ಚುನಾವಣೆಗೆ sದ್ರ ಬುನಾದಿ ಆಗಲಿದೆ. ಬಹುತೇಕ ಎಲ್ಲಾ ಕಡೆ ಎಂಎಲ್ಸಿಗಳು, ಎಂಎಲ್‌ಎಗಳು, ಸಂಸದರು ಬಿಜೆಪಿಯವರೇ ಇರುವುದರಿಂದ ಕಾರ್‍ಯಕರ್ತರು ಇವರೊಡಗೂಡಿ ಕೆಲಸ ಮಾಡಿ ಬಿಜೆಪಿ ಬಹುಮತದಿಂದ ಗೆದ್ದು ಬರುವಂತೆ ಮಾಡಬೇಕು. ಗ್ರಾಪಂನಲ್ಲಿ ಪಕ್ಷೇತರ ಸದಸ್ಯರು ಸಾಕಷ್ಟಿದ್ದು, ಅವರನ್ನು ಬಿಜೆಪಿಯತ್ತ ಕರೆತರಬೇಕು. ಬಿಜೆಪಿ ಅಭ್ಯರ್ಥಿಗೆ ಮತ ಹಾಕುವಂತೆ ಮಾಡಬೇಕೆಂದರು.
ಸಂಸದ ಬಿ ವೈ ರಾಘವೇಂದ್ರ ಮಾತನಾಡಿ, ಅಭಿವೃದ್ಧಿ ಕಾರ್‍ಯಕ್ರಮದ ಮೂಲಕ ಮತ ಯಾಚಿಸಬೇಕು. ಇನ್ನೂ ಸಹ ಸಾಕಷ್ಟು ಕೆಲಸಗಳು ಗ್ರಾಮಾಂತರದಲ್ಲಿ ಬಾಕಿ ಇವೆ. ಸ್ಮಾರ್ಟ್ ಗ್ರಾಮ ಯೋಜನೆ ಸಹ ಜಾರಿಯಲ್ಲಿದೆ. ಇದನ್ನೆಲ್ಲ ಜಾರಿಗೊಳಿಸುವ ಉದ್ದೇಶದಿಂದ ಬಿಜೆಪಿ ಉಮೇದುವಾರರನ್ನು ಗೆಲ್ಲಿಸುವ ಅವಶ್ಯಕತೆ ಇದೆ. ಸದಸ್ಯರು ನಿಷ್ಠೆಯಿಂದ ಪಕ್ಷದ ಉಮೇದುವಾರರಿಗೆ ಮತ ನೀಡಬೇಕು ಎಂದರು.
ಎಂಎಲ್‌ಸಿ ಆಯನೂರು ಮಂಜುನಾಥ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ಯಡಿಯೂರಪ್ಪ ಅವರ ಛಾಪು ಇನ್ನೂ ಇದೆ. ಅದನ್ನು ಬಳಸಿಕೊಂಡು ಮತ ಪಡೆಯುವಂತಾಗಬೇಕು. ಪ್ರಥಮ ಪ್ರಾಶಸ್ತ್ಯ ಮತದಲ್ಲೇ ಬಿಜೆಪಿ ಗೆಲ್ಲುವಂತಾಗಬೇಕೆಂದರು.
ಎಂಎಲ್‌ಸಿ ರುದ್ರೇಗೌಡ, ಮಾಜಿ ಎಂಎಲ್‌ಸಿ ಭಾನುಪ್ರಕಾಶ್, ಆರ್. ಕೆ. ಸಿದ್ದರಾಮಣ್ಣ, ಸಾಗರ ಶಾಸಕ ಹರತಾಳು ಹಾಲಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ. ಡಿ. ಮೇಘರಾಜ್, ಅಭ್ಯರ್ಥಿ ಡಿ. ಎಸ್. ಅರುಣ್ ಮೊದಲಾದವರು ಮಾತನಾಡಿದರು.
ಗ್ರಾಮಾಂತರ ಶಾಸಕ ಅಶೋಕ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು
ಗ್ರಾಮರಾಜ್ಯದಿಂದ ರಾಮರಾಜ್ಯ ಎಂದು ಮಹಾತ್ಮಾ ಗಾಂಧಿ ಹೇಳಿದ್ದರು. ಆದರೆ ಇಂದಿಗೂ ಗ್ರಾಮೀಣ ಭಾರತವನ್ನು ಗಟ್ಟಿಗೊಳಿಸಲಾಗಲಿಲ್ಲ. ಇದು ಕೇವಲ ಘೋಷಣೆಯಾಗಿ ಉಳಿಯಬಾರದು. ಇತ್ತೀಚೆಗೆ ಸಾಕಷ್ಟು ಅನುದಾನಗಳು ಹರಿದುಬರುತ್ತಿದ್ದು, ಅವುಗಳ ಮೂಲಕ ಹೆಚ್ಚಿನ ಕೆಲಸ ನಡೆಯಬೇಕಿದೆ
– ಆರಗ ಜ್ಞಾನೇಂದ್ರ, ಗೃಹ ಸಚಿವ