ಕನಕ ಜಯಂತಿಯಲ್ಲಿ ಪೇಜಾವರ ಶ್ರೀ ಹೇಳಿಕೆ
ಸನಾತನ ಹಿಂದೂ ಧರ್ಮವನ್ನು ಮತ್ತಷ್ಟು ಗಟ್ಟಿಗೊಳಿಸಬೇಕಾದ ಅವಶ್ಯಕತೆ ಇದ್ದು, ಇದಕ್ಕಾಗಿ ಎಲ್ಲರೂ ಒಟ್ಟಾಗಬೇಕು ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಕರೆ ನೀಡಿದರು.
ಸನಾತನ ಹಿಂದೂ ಸಮಾಜ ಪರಿಷತ್ ವತಿಯಿಂದ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಶ್ರೀ ಕನದಾಸ ಜಯಂತಿ ಮಹೋತ್ಸವದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ನಮ್ಮದು ಸನಾತನ ಹಿಂದೂ ಧರ್ಮದ ಪುಣ್ಯಭೂಮಿಯಾಗಿದೆ. ದಾರ್ಶನಿಕರೆಲ್ಲರೂ ಹಿಂದೂ ಧರ್ಮದ ತಳಹದಿಯ ಮೇಲೆ ಕೆಲಸ ಮಾಡಿದ್ದಾರೆ. ಎಲ್ಲಾ ಗುರು ಪೀಠಗಳು ತಮ್ಮ ತಮ್ಮ ಸಿದ್ಧಾಂತಗಳನ್ನು ವೈಭವೀಕರಿಸಿದ್ದರೂ ಕೂಡ ಅದರ ಒಳಗೆ ಹಿಂದೂ ಧರ್ಮದ ತಳಹದಿ ಇದೆ. ಭಾವೈಕ್ಯವಿದೆ ಎಂದು ಹೇಳಿದರು.
ಸಮಾಜದಲ್ಲಿ ಎಲ್ಲವೂ ಒಂದೇ ರೀತಿ ಇರುವುದಿಲ್ಲ ನಿಜ. ನಮ್ಮ ಕೈಬೆರಳುಗಳೆಲ್ಲಾ ಬೇರೆ ಬೇರೆಯೇ ಆಗಿರುತ್ತವೆ. ಆದರೆ ಅದನ್ನು ಮುಷ್ಠಿ ಮಾಡಿದರೆ ಅದಕ್ಕೆ ತನ್ನದೇ ಆದ ಶಕ್ತಿ ಬರುತ್ತದೆ. ಹಾಗೆಯೇ ಎಲ್ಲಾ ಜಾತಿಗಳ ಗುರುಪೀಠಗಳು, ಮಠಗಳು ಇಲ್ಲಿವೆ. ಆಚಾರ ವಿಚಾರ ವೇಷಭೂಷಣಗಳು ಭಿನ್ನತೆಯಿಂದ ಕೂಡಿವೆ. ಅವೆಲ್ಲವೂ ಒಟ್ಟಾದಾಗ ಸನಾತನ ಹಿಂದೂ ಧರ್ಮ ವಿಜೃಂಭಿಸುತ್ತದೆ. ಇಲ್ಲದೇ ಹೋದರೆ, ಹಿಂದೂ ಧರ್ಮ ದುರ್ಬಲವಾಗುವ ಸಾಧ್ಯತೆ ಇದೆ. ಯಾವ ಕಾರಣಕ್ಕೂ ನಾವು ಹಿಂದೂ ಧರ್ಮ ಮರೆಯಬಾರದು. ಅದು ಇಡೀ ಮಾನವ ಸಮುದಾಯಕ್ಕೆ ಬೆಳಕು ನೀಡುತ್ತದೆ ಎಂದರು.
ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿ ಮಾತನಾಡಿ, ಧರ್ಮಗಳು ಹಿಂಡನ್ನು ಅಗಲಿದ ಕುರಿಯಂತೆ ಆಗಬಾರದು. ಇದು ಅಪಾಯಕ್ಕೆ ಕಟ್ಟಿಟ್ಟ ಬುತ್ತಿಯಾಗುತ್ತದೆ. ಇತರೆ ಧರ್ಮಗಳು ನಮ್ಮ ಮೇಲೆ ದಾಳಿ ನಡೆಸಲು ಕೂಡ ಕಾರಣವಾಗುತ್ತದೆ. ಬೇರೆ ಧರ್ಮದವರು ದಬ್ಬಾಳಿಕೆ ಮಾಡುವ ಮೊದಲೇ ಜಾತ್ಯತೀತವಾಗಿ ನಾವೆಲ್ಲರೂ ಒಂದಾಗಬೇಕಾಗಿದೆ. ಸರ್ವ ಧರ್ಮಗಳು ಸಹಬಾಳ್ವೆಯಿಂದ ಇರಬೇಕು ಎಂದು ಕರೆ ನೀಡಿದರು.
ಕನಕದಾಸರು ಭಕ್ತಿಯಿಂದ ಭಗವಂತನನ್ನು ಕಾಣಲು ಹೊರಟವರು. ಭಕ್ತಿಯೇ ಭಗವಂತನ ಕಾಣುವ ಶಕ್ತಿ ಎಂದು ಪ್ರತಿಪಾದಿಸಿದ ಅವರು ಮೌಢ್ಯದ ವಿರುದ್ಧ ಹೋರಾಡಿದವರು. ಹಾಗಾಗಿಯೇ ಅವರು ಪರಮಾತ್ಮನನ್ನು ತಮ್ಮತ್ತ ತಿರುಗಿಸಿಕೊಂಡವರು. ಕನಕದಾಸರ ಭಕ್ತಿ ಇಡೀ ಜಗತ್ತಿಗೇ ಹೆಸರಾಗಿದೆ. ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನಕದಾಸರ ಕೃತಿಗಳ ಸಮೂಹ ಗಾಯನ ನಡೆಯಿತು. ನಗರದ ಭಜನಾ ಮಂಡಳಿಗಳ ಸುಮಾರು ೧೨೫ ಕ್ಕೂ ಹೆಚ್ಚು ಮಾತೆಯರು ಕೀರ್ತನೆಗಳನ್ನು ಹಾಡಿದರು. ವೇದಿಕೆಯಲ್ಲಿ ಚಿತ್ರದುರ್ಗ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮೊದಲಾದವರಿದ್ದರು. ಕಾರ್ಯಕ್ರಮದಲ್ಲಿ ಕೆ.ಇ. ಕಾಂತೇಶ್, ಡಾ. ದಿಲೀಪ್ ಕುಮಾರ್ ಪಾಂಡೆ, ರಮೇಶ್ ಬಾಬು, ಸುನಿತಾ ಅಣ್ಣಪ್ಪ, ಸೋಮಸುಂದರ್, ನವುಲೆ ಈಶ್ವರಪ್ಪ ಭಾಗವಹಿಸಿದ್ದರು.
ಇಂದು ಮನುಷ್ಯನ ಮನಸು ಕಲುಷಿತಗೊಂಡಿದೆ. ಕನ್ನಡಿಯಲ್ಲಿ ಧೂಳು ಕುಳಿತರೆ ನಮ್ಮ ಪ್ರತಿಬಿಂಬವನ್ನು ಹೇಗೆ ನಾವು ನೋಡಿಕೊಳ್ಳಲು ಅಸಾಧ್ಯವೋ ಹಾಗೆಯೇ ಧರ್ಮಗಳು ಕೂಡ ಧೂಳು ಹಿಡಿಯುತ್ತಿವೆ. ಧರ್ಮ ಎಂದೂ ಕಲುಷಿತವಾಗಬಾರದು. ಧರ್ಮದಂತೆ ನಡೆಯಬೇಕು. ಸತ್ಯವನ್ನು ಹೇಳಬೇಕು ಎಂಬುದು ಎಲ್ಲಾ ಧರ್ಮಗಳ ಸಾರವೂ ಆಗಿದೆ. ಧರ್ಮಕ್ಕೆ ಚಲನಶೀಲತೆ ಬೇಕು. ಅದು ನಿಂತ ನೀರಾಗಬಾರದು. ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಲು ಧರ್ಮ ಸಹಾಯಕವಾಗುತ್ತದೆ.
ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ,ಬೆಕ್ಕಿನ ಕಲ್ಮಠ
ಕನಕದಾಸರು ಶ್ರೇಷ್ಠ ಸಂತರಾಗಿದ್ದಾರೆ. ದಾಸ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರವಾಗಿದೆ. ಅವರ ಅನುಭವದ ಹಾಡುಗಳು ಆಧ್ಯಾತ್ಮದಿಂದ ಕೂಡಿದ್ದು, ಭಕ್ತಿಯ ಸಂಪಾದಿಸಲು ಸುಲಭದ ಹಾಡುಗಳಾಗಿವೆ. ಸರಳ ಭಜನೆಗಳ ಮೂಲಕ ಕನಕದಾಸರು ಸಮಸ್ತ ಸಮಾಜದ ಅಮೂಲ್ಯ ಆಸ್ತಿಯಾಗಿದ್ದಾರೆ. ಆದರೆ, ನಾವು ಅವರನ್ನು ಜಾತಿಗೆ ಸೀಮಿತಗೊಳಿಸಿದ್ದೇವೆ. ಇದರಿಂದ ಹೊರಬರಬೇಕಾಗಿದೆ. ಅವರ ಆದರ್ಶಗಳನ್ನು ಬೆಳೆಸಿಕೊಳ್ಳಬೇಕಾಗಿದೆ.-ಶ್ರೀ ಪ್ರಸನ್ನನಾಥ ಸ್ವಾಮೀಜಿ,ಆದಿಚುಂಚನಗಿರಿ ಶಾಖಾ ಮಠ