ಶಿವಮೊಗ್ಗ ನಗರದ ಕುವೆಂಪುರಸ್ತೆಯಲ್ಲಿ ಸ್ಮಾರ್ಟ್ ಸಿಟಿಯ ಅವೈಜ್ಞಾನಿಕ ಕಾಮಗಾರಿಯನ್ನು ಸರಿಪಡಿಸುವಂತೆ ಆಗ್ರಹಿಸಿ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ನೇತೃತ್ವದಲ್ಲಿ ರಸ್ತೆತಡೆ ನಡೆಸಿ, ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪ್ರಮುಖ ಸಂಚಾರನಿಬಿಢ ರಸ್ತೆಯಾದ ಕುವೆಂಪು ರಸ್ತೆಯನ್ನು ಅಗಲೀಕರಣಗೊಳಿಸಬೇಕು, ಒತ್ತುವರಿ ತೆರವುಗೊಳಿಸಬೇಕು,, ಖಾತೆದಾರರಿಗೆ ಪರಿಹಾರ ನೀಡಿ ನಂತರ ಅಭಿವೃದ್ಧಿ ಪಡಿಸಬೇಕೆಂದು ಹಿಂದೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಹಣ ಕೂಡ ಮಂಜೂರಾತಿ ಆಗಿತ್ತು. ಕೆಲವು ತಾಂತ್ರಿಕ ತೊಂದರೆಗಳಿಂದ ಅಗಲೀಕರಣ ಪ್ರಕ್ರಿಯೆಗೆ ತಡೆಯುಂಟಾಗಿತ್ತು ಎಂದು ತಿಳಿಸಿದರು.
ಇದೀಗ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಕೆಲವು ವರ್ಷಗಳಿಂದ ಅಭಿವೃದ್ಧಿಕಾಮಗಾರಿ ಕುಂಟುತ್ತಾ ಸಾಗಿದ್ದು, ಬಾಕ್ಸ್ ಚರಂಡಿಯನ್ನು ನಕ್ಷೆ ಪ್ರಕಾರ ಮಾಡದೇ ನೇರವಾಗಿ ಮಾಡದೇ ಝಡ್ ಆಕಾರದಲ್ಲಿ ತಿರುವು ಪಡೆದುಕೊಂಡು ಅವೈಜ್ಞಾನಿಕವಾಗಿ ಮಾಡಲಾಗಿದೆ. ನಕ್ಷೆಯ ಪ್ರಕಾರ ಕಾಮಗಾರಿ ನಡೆದಿಲ್ಲ ಎಂದು ದೂರಿದರು.
ಯಾರದ್ದೋ ಪ್ರಭಾವಕ್ಕೆ ಒಳಗಾಗಿ ಅವೈಜ್ಞಾನಿಕ ಕಾಮಗಾರಿ ಮಾಡಲಾಗಿದೆ. ಅತಿಕ್ರಮಣ ತೆರವುಗೊಳಿಸಿಲ್ಲ. ಸ್ಥಳಕ್ಕೆ ಆಯುಕ್ತರು ಬಂದು ಸೂಕ್ತವಿವರಣೆ ನೀಡುವವರೆಗೆ ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.
ಪ್ರಮುಖರಾದ ದೀಪಕ್ ಸಿಂಗ್, ರಘು, ಲಕ್ಷ್ಮಣ್, ಆರೀಫ್, ಶಾಂಸುಂದರ್, ಮುಜೀಬ್ ಸೇರಿದಂತೆ ಹಲವರಿದ್ದರು
ರಸ್ತೆ ತಡೆ ನಡೆಸಿದ್ದರಿಂದ ನೂರಾರು ವಾಹನಗಳು ಸಾಲುಗಟ್ಟಿ ನಿಂತು ಸಂಚಾರ ದಟ್ಟಣೆ ಉಂಟಾಗಿ ಸವಾರರು ಪರದಾಡುವಂತಾಗಿತ್ತು. ಇನ್ನಾದರೂ ಸ್ಮಾರ್ಟ್ ಸಿಟಿ ಅಧಿಕಾರಿಗಳು ನಕ್ಷೆಯ ಪ್ರಕಾರ ಕಾಮಗಾರಿ ನಡೆಸಬೇಕು. ಜನರ ತೆರಿಗೆ ಹಣವನ್ನು ಯಾವುದೇ ಕಾರಣಕ್ಕೂ ಪೋಲಾಗಲು ಬಿಡುವುದಿಲ್ಲ
– ಕೆ.ಬಿ. ಪ್ರಸನ್ನ ಕುಮಾರ್ ,ಮಾಜಿ ಶಾಸಕ