Malenadu Mitra
ರಾಜ್ಯ ಶಿವಮೊಗ್ಗ

ಸ್ಥಳೀಯ ಸಂಸ್ಥೆ ಬಲವರ್ಧನೆ ನನ್ನ ಆದ್ಯತೆ : ಡಿ.ಎಸ್.ಅರುಣ್

ಸ್ಥಳೀಯ ಸಂಸ್ಥೆಗಳ ಬಲಗೊಳಿಸುವ ಮೂಲಕ ಗ್ರಾಮೀಣಾಭಿವೃದ್ಧಿಯ ಗುರಿಹೊಂದಿ ಪಕ್ಷದ ಹಿರಿಯರ ಆಶಯದಂತೆ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿ ಡಿ.ಎಸ್.ಅರುಣ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಹಿರಿಯರ ಸಹಕಾರದಿಂದ ಎಲ್ಲಾ ಕಡೆ ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗುತ್ತಿದ್ದು, ಅತ್ಯಂತ ಸುಲಭವಾಗಿ ಮೂರು ಸಾವಿರಕ್ಕೂ ಹೆಚ್ಚು ಮತ ಪಡೆದು ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕರ್ತರು ವಿಶೇಷವಾಗಿ ಈ ಚುನಾವಣೆಯಲ್ಲಿ ನಮ್ಮ ಪರವಾಗಿ ಕೆಲಸ ಮಾಡುತ್ತಿದ್ದಾರೆ. ದಾವಣಗೆರೆ ಜಿಲ್ಲೆಯೂ ಸೇರಿದಂತೆ ಒಟ್ಟು 10 ವಿಧಾನ ಸಭಾ ಕ್ಷೇತ್ರಗಳು ನಮ್ಮ ವ್ಯಾಪ್ತಿಗೆ ಬರುತ್ತಿದ್ದು, ಅದರಲ್ಲಿ 9 ಬಿಜೆಪಿ ಶಾಸಕರೇ ಇದ್ದಾರೆ. ಇವರೆಲ್ಲರೂ ಕೂಡ ಪ್ರಚಾರ ಕೈಗೊಂಡಿದ್ದಾರೆ. ಜೊತೆಗೆ ಪಕ್ಷದ ಹಿರಿಯರಾದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಚಿವ ಕೆ.ಎಸ್. ಈಶ್ವರಪ್ಪ ಅವರೂ ಕೂಡ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದು, ಸರ್ಕಾರದ ಸಾಧನೆಗಳನ್ನು ಮತದಾರರಿಗೆ ಹೇಳುವ ಮೂಲಕ ತಮ್ಮ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ ಎಂದರು.

ಶಿಕ್ಷಣ, ಆರೋಗ್ಯ, ಸ್ವಚ್ಛತೆ ಈ ಮೂರು ಇಂದು ಅತ್ಯಗತ್ಯವಾಗಿದೆ. ಶಿಕ್ಷಣಕ್ಕೆ ಆದ್ಯತೆ ಕೊಡಬೇಕಾದುದು ನಮ್ಮ ಕರ್ತವ್ಯ ಕೂಡ ಆಗಿದೆ. ಹಾಗೆಯೇ ಆರೋಗ್ಯ ಮತ್ತು ಸ್ವಚ್ಛತೆಗೂ ಕೂಡ ನಾವು ಆದ್ಯತೆ ಕೊಡಬೇಕು. ತಾವು ಆಯ್ಕೆಯಾದರೆ ಈ ಮೂರಕ್ಕೂ ಹೆಚ್ಚಿನ ಆದ್ಯತೆ ನೀಡುತ್ತೇನೆ. ಪ್ರಮುಖವಾಗಿ ಸರ್ಕಾರದ ಯೋಜನೆಗಳು ಗ್ರಾಮೀಣ ಭಾಗವನ್ನು ತಲುಪಬೇಕಿದೆ. ಇದಕ್ಕಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಶಿಬಿರಗಳನ್ನು ಏರ್ಪಡಿಸಿ ಸೌಲಭ್ಯಗಳು ಮತ್ತಷ್ಟು ಹೆಚ್ಚಲು ಅಗತ್ಯ ವಾತಾವರಣ ರೂಪಿಸಬೇಕು. ಬಗರ್ ಹುಕುಂ ಸಮಸ್ಯೆ ಇನ್ನೂ ಇದೆ. ಈ ಎಲ್ಲದಕ್ಕೂ ಪರಿಹಾರವ ಕಲ್ಪಿಸಲು ಬಿಜೆಪಿ ಸರ್ಕಾರ ಈಗಾಗಲೇ ಕ್ರಮಕೈಗೊಂಡಿದೆ ಎಂದರು.

ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಜೊತೆಗೆ ನಗರ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೂ ಹೆಚ್ಚು ಒತ್ತು ಕೊಡುತ್ತೇನೆ. ನಗರ ಮಟ್ಟದಲ್ಲಿ ಜನಪ್ರತಿನಿಧಿಗಳಿಗೆ ಭದ್ರತೆ ಇಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಇವುಗಳನ್ನು ನಿವಾರಣೆ ಮಾಡಿ ಪ್ರತಿಯೊಬ್ಬರಿಗೂ ಆರೊಗ್ಯ ಕಾರ್ಡ್ ಸೇರಿದಂತೆ ಹಲವು ಸೌಲಭ್ಯಗಳನ್ನು ವಿಸ್ತರಿಸಲು ನಾನು ಪ್ರಯತ್ನ ಪಡುತ್ತೇನೆ. ಗ್ರಾಮ ಪಂಚಾಯಿತಿ ಸದಸ್ಯರ ಗೌರವಧನ ಈಗ ಒಂದು ಸಾವಿರ ರೂ. ಇದ್ದು ಅದನ್ನು ಎರಡು ಸಾವಿರ ರೂ.ಗೆ ಹೆಚ್ಚಿಸಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್, ಎಸ್. ದತ್ತಾತ್ರಿ, ಶಿವರಾಜ್, ಹೃಷಿಕೇಶ್ ಪೈ, ನಾಗರಾಜ್, ಪವಿತ್ರಾ ರಾಮಯ್ಯ, ಕೆ.ವಿ. ಅಣ್ಣಪ್ಪ ಸೇರಿದಂತೆ ಹಲವರಿದ್ದರು.

ಶಿವಮೊಗ್ಗ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಹಾಗಾಗಿ ಜೆಡಿಎಸ್ ಬೆಂಬಲಿತ ಸದಸ್ಯರು ಕೂಡ ತಮ್ಮ ಪರವಾಗಿ ಇರುವುದಾಗಿ ಈಗಾಗಲೇ ತಿಳಿಸಿದ್ದಾರೆ. ಅವರ ನೆರವನ್ನು ಕೂಡ ಪಡೆಯುವುದಾಗಿ ಅರುಣ್ ತಿಳಿಸಿದರು.
ಒಟ್ಟಾರೆ ಇಂದಿನಿಂದಲೇ ಚುನಾವಣಾ ಪ್ರಚಾರ ಬಿರುಸಾಗಿ ನಡೆಯಲಿದ್ದು, ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ಮಾಯಕೊಂಡ ಸೇರಿದಂತೆ ಜಿಲ್ಲೆಯ ಎಲ್ಲಾ ಮತದಾರರನ್ನು ಭೇಟಿಯಾಗಿ ಮತಯಾಚನೆ ಮಾಡುವ ಕಾರ್ಯ ನಡೆದಿದೆ. ತಮ್ಮ ಗೆಲುವು ಖಚಿತವಾಗಿದೆ. ಉಳಿದ 11 ದಿನಗಳಲ್ಲಿ ಎಲ್ಲಾ365 ಗ್ರಾಮ ಪಂಚಾಯಿತಿಗಳನ್ನು ನಾವು ತಲುಪುತ್ತೇವೆ.

-ಡಿ.ಎಸ್.ಅರುಣ್


Ad Widget

Related posts

ಬಿಪಿಎಲ್ ಕಾರ್ಡ್ಗೆ ಕಲ್ಲೂರು ಮೇಘರಾಜ್ ಆಗ್ರಹ

Malenadu Mirror Desk

ಹಸೆ ಚಿತ್ತಾರ ಕಲೆಯ ಕುರಿತ ಮೊದಲ ಸಮಗ್ರ ಸಂಶೋಧನಾ ಕಾರ್ಯ ಶ್ಲಾಘನೀಯ: ಕಾಗೋಡು ತಿಮ್ಮಪ್ಪ

Malenadu Mirror Desk

ಸಿಗಂದೂರಲ್ಲಿ ಗುರು ಪೂರ್ಣಿಮೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.