ತೀರ್ಥಹಳ್ಳಿ ತಾಲೂಕಿನ ಮೇಳಿಗೆಯಿಂದ ಅಕ್ರಮವಾಗಿ ದನಗಳನ್ನು ಸಾಗಣೆ ಮಾಡುತ್ತಿರುವ ದನಗಳ್ಳರನ್ನು ತಡೆಯಲು ಯತ್ನಿಸಿದ ಇಬ್ಬರು ಯುವಕರ ಮೇಲೆ ಪಿಕ್ ಅಪ್ ವ್ಯಾನ್ ಹತ್ತಿಸಿದ ಪರಿಣಾಮ ಇಬ್ಬರು ಯುವಕರು ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾದ ಘಟನೆ ಮಂಗಳವಾರ ನಡೆದಿದೆ.
ಮೇಳಿಗೆಯಿಂದ ಫಾಲೋ ಮಾಡಿದ ಯುವಕರ ಮೇಲೆ ಬೆಜ್ಜವಳ್ಳಿಯಲ್ಲಿ ಪಿಕ್ ಅಪ್ ಹತ್ತಿಸಲಾಗಿದೆ. ಕುಡುಮಲ್ಲಿಗೆ ರೈಸ್ ಮಿಲ್ ಬಳಿಯೂ ಕೆಲವರ ಮೇಲೆ ಹತ್ತಿಸಿದ ಘಟನೆಯೂ ನಡೆದಿದೆ.
ಸಹೋದರರಾದ ಕಿರಣ್(23), ಚರಣ್(24) ಗಂಭೀರ ಗಾಯಗೊಂಡಿದ್ದು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರು ತಾಲೂಕಿನ ಕಿತ್ತನಗದ್ದೆ ಮಂಜುನಾಥ್ ಅವರ ಪುತ್ರರು. ಘಟನೆ ನಡೆದ ಬಳಿಕ ಆಸ್ಪತ್ರೆಯ ಮುಂದೆ ನೂರಾರು ಜನ ಸೇರಿದ್ದು ಆತಂಕದ ವಾತಾವರಣ ನಿರ್ಮಾಣವಾಗಿದೆ.
ಭಜರಂಗ ದಳ ಆಕ್ರೋಶ
ತೀರ್ಥಹಳ್ಳಿ ಸೇರಿ ಮಲೆನಾಡಲ್ಲಿ ಅಕ್ರಮ ಗೋ ಸಾಗಣೆ ಹೆಚ್ಚುತ್ತಿದೆ. ಒಂದು ತಿಂಗಳ ಹಿಂದೆ ನಡೆದ ಗುರುಮೂರ್ತಿ ಪ್ರಕರಣ ಇನ್ನು ತನಿಖೆಯಾಗಿಲ್ಲ. ಪ್ರತಿ ದಿನ ಗೋವುಗಳ ಕಳ್ಳ ಸಾಗಣೆ ನಡೆಯುತ್ತದೆ. ಕೂಡಲೇ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಹಿಂದೂ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.
ಅಕ್ರಮ ಗೋ ಸಾಗಣೆ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು.ಇಬ್ಬರು ಯುವಕರ ಚಿಕಿತ್ಸೆಗೆ ಮಣಿಪಾಲದಲ್ಲಿ ವ್ಯವಸ್ಥೆ ಮಾಡಲಾಗಿದೆ. ಆರೋಪಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು
-ಜ್ಞಾನೇಂದ್ರ ,ಗೃಹ ಮಂತ್ರಿ