Malenadu Mitra
ರಾಜ್ಯ ಶಿವಮೊಗ್ಗ

ಸಹೃದಯಿ ಸೇವೆಯ ಶರಣ್ಯ ಸಂಸ್ಥೆಗೆ ನೆರವಾಗಿ : ಉಚಿತ ಸೇವೆಗೆ ಸಾರ್ವಜನಿಕರ ಬೆಂಬಲ ಕೋರಿದ ಆಡಳಿತ ಮಂಡಳಿ

ಗುಣಮುಖವಾಗದ ರೋಗಿಗಳ ಆರೈಕೆ ಕೇಂದ್ರವಾದ ಶರಣ್ಯ ಸೇವಾ ಸಂಸ್ಥೆಯು ಗಾಜನೂರಿನಲ್ಲಿ 20 ರೋಗಿಗಳಿಗೆ ಚಿಕಿತ್ಸೆ ನೀಡಲು ಹೊಸವಾರ್ಡ್ ಒಂದನ್ನು ನಿರ್ಮಿಸಲಾಗಿದೆ. ಉಚಿತ ಸೇವೆ ನೀಡುವ ಈ ಸಂಸ್ಥೆ ಮಲೆನಾಡಿನಲ್ಲಿ ಸಂತೃಪ್ತ ಸೇವೆ ನೀಡುತ್ತಿದೆ. ಈ ಸಂಸ್ಥೆ ಇನ್ನಷ್ಟು ಸೇವೆ ನೀಡುವ ಉದ್ದೇಶ ಹೊಂದಿದ್ದು, ದಾನಿಗಳ ನೆರವಿನ ಅಗತ್ಯವಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಡಿ.ಎಲ್. ಮಂಜುನಾಥ್ ಹೇಳಿದರು.
ಗಾಜನೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವ ಪ್ರತಿಫಲಾಪೇಕ್ಷೆ ಇಲ್ಲದೇ ಡಿ.ಎಸ್.ಎಲ್. ಟ್ರಸ್ಟ್ ವತಿಯಿಂದ ಗಾಜನೂರು ಬಳಿ ರೋಗಿಗಳ ಸೇವೆಗಾಗಿಯೇ ಕಂಕಣಬದ್ಧವಾಗಿ ಕೆಲಸ ಮಾಡುತ್ತಿದೆ. 25 ವರ್ಷಗಳಿಂದ ರೋಗಿಗಳಿಗಾಗಿಯೇ ವಿಶೇಷ ಸೇವೆ ನೀಡುತ್ತಾ ಬಂದಿದೆ. ಕ್ಯಾನ್ಸರ್, ಸಂಪೂರ್ಣ ಪಾರ್ಶ್ವವಾಯು, ಮೆದುಳಿನ ರಕ್ತಸ್ರಾವದಂತಹ ಕಾಯಿಲೆಗಳಿಂದ ಯಾವ ಚಿಕಿತ್ಸೆಗೂ ಗುಣಮುಖರಾಗದೇ ಬಳಲುತ್ತಿರುವವರಿಗೆ ಆಶ್ರಯ ನೀಡಿ ಅವರ ಅಂತಿಮ ದಿನಗಳನ್ನು ಅತ್ಯಂತ ಗೌರವದಿಂದ ನೋಡಿಕೊಳ್ಳುವ ಈ ಸಂಸ್ಥೆ ರಾಜ್ಯದಲ್ಲಿಯೇ ಎರಡನೇಯದಾಗಿದೆ ಎಂದರು.

ಡಿ.ಎಸ್.ಎಲ್. ಸಂಸ್ಥೆಯು 2002 ರಲ್ಲಿ ಸ್ಥಾಪನೆಗೊಂಡಿತು. ಮೊದಲು ಕ್ಯಾನ್ಸರ್ ರೋಗಿಗಳಿಗೆ ಮನೆ ಬಾಗಿಲಿಗೆ ಹೋಗಿ ಚಿಕಿತ್ಸೆ ನೀಡಲಾಗುತ್ತಿತ್ತು. ನಂತರ ಗಾಜನೂರಿನ ಅಗ್ರಹಾರದಲ್ಲಿ ಸುಮಾರು 10.5 ಎಕರೆ ಜಾಗ ಖರೀದಿಸಿ ರೋಗಿಗಳ ಸೇವೆಗಾಗಿಯೇ ಎರಡು ವಾರ್ಡ್ ಗಳನ್ನು ನಿರ್ಮಿಸಿ ಅತಿ ಹೆಚ್ಚು ಉಲ್ಬಣಿಸಿದ ರೋಗಿಗಳನ್ನು ನೋಡಿಕೊಳ್ಳುವ, ಆಶ್ರಯ ನೀಡುವ, ಆರೈಕೆ ಮಾಡುವ ಜವಾಬ್ದಾರಿಯನ್ನು ಹೊತ್ತಿದೆ. ಮಾನವೀಯ ನೆಲೆಯಲ್ಲಿ ಶರಣ್ಯ ಸಂಸ್ಥೆ ಈ ಎಲ್ಲಾ ಸೇವೆಯನ್ನು ದಾನಿಗಳ ನೆರವಿನಿಂದ ಉಚಿತವಾಗಿ ನೀಡುತ್ತಿದೆ. ಪ್ರತಿತಿಂಗಳು ಸುಮಾರು 3 ಲಕ್ಷ ರೂ. ಖರ್ಚು ಬರುತ್ತಿದೆ. ಇದುವರೆಗೂ ಹೇಗೋ ಇದನ್ನು ಹೊಂದಿಸಿಕೊಂಡು ಹೋಗುತ್ತಿದ್ದೇವೆ. ರೋಗಿಗಳ ಶುಶ್ರೂಷೆ ಜೊತೆಗೆ ಇದನ್ನು ಮತ್ತಷ್ಟು ಅಭಿವೃದ್ಧಿಪಡಿಸಬೇಕಾಗಿದೆ. ಆದ್ದರಿಂದ ದಾನಿಗಳು ಈ ಸಂಸ್ಥೆಗೆ ಹೆಚ್ಚು ಹೆಚ್ಚು ನೆರವು ನೀಡಬೇಕು ಎಂದರು.

ದಾನಿಗಳು ತಮ್ಮ ದೇಣಿಗೆಯನ್ನು ಡಿಎಸ್‍ಎಲ್ ಟ್ರಸ್ಟ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಖಾತೆ ನಂ. 095431043000018, ಐ.ಎಫ್.ಎಸ್.ಸಿ. ಕೋಡ್ ಯುಬಿಐ ನಂ. 809543 ಕ್ಕೆ ಸಂದಾಯ ಮಾಡಬಹುದು. ಮತ್ತು ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 99457 76583 ಸಂಪರ್ಕಿಸುವಂತೆ ಕೋರಿದರು.

ಸಂಸ್ಥೆಯ ಅಧ್ಯಕ್ಷ ಟಿ.ಆರ್. ಅಶ್ವತ್ಥನಾರಾಯಣಶೆಟ್ಟಿ ಮಾತನಾಡಿ, ಇಂತಹ ಮಾನವೀಯ ಅಂತಃಕರಣದ ಸಂಸ್ಥೆಯಲ್ಲಿ ಹಲವರು ಕೆಲಸ ಮಾಡುತ್ತಿದ್ದಾರೆ. ಇವರ ಸೇವೆ ಅಸಾಧಾರಣವಾದುದು ಎಂದು ಬಣ್ಣಿಸಿದರಲ್ಲದೇ ಸತ್ಯನಾರಾಯಣ ಉಷಾ, ಶಾರದಾ, ಇಂದಿರಾ, ಪ್ರೇಮಾ, ಲಕ್ಷ್ಮಿ, ರಮೇಶ್, ಮುಸ್ತಾಫ್, ಟಿ.ಕೆ. ರಾಮನಾಥ್, ಜಯಶ್ರೀ ಮುಂತಾದ ಸಿಬ್ಬಂದಿಗೆ ಗುಲಾಬಿ ಹೂ ನೀಡಿ ಅಭಿನಂದನೆ ಸಲ್ಲಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶರಣ್ಯ ಸಂಸ್ಥೆಯ ಟ್ರಸ್ಟಿ ರಾಮಚಂದ್ರ ವಿ ಗುಣಾರಿ, ಸಿಬ್ಬಂದಿಗಳಾದ ರಾಮನಾಥ್, ಅರ್ಜುನ್, ಮಂಜುನಾಥ್ ಮತ್ತಿತರರಿದ್ದರು.


ಔಷಧವನ

ಶರಣ್ಯ ಸಂಸ್ಥೆ ವತಿಯಿಂದ ಸುಮಾರು ಒಂದು ಎಕರೆಗೂ ಹೆಚ್ಚಿನ ಜಾಗದಲ್ಲಿ ಔಷಧವನ ನಿರ್ಮಿಸಲಾಗಿದೆ. ಆಲ, ಸರ್ಪವರ್ಣಿ, ಬಿಳಿ ಎಕ್ಕೆ, ಅಶ್ವತ್ಥ, ಅರಳಿ, ಬನ್ನಿ, ಗರಿಕೆ, ರಂಜಲು ಹೀಗೆ ಹಲವು ಬಗೆಯ ಸಸ್ಯ, ಗಿಡಗಳನ್ನು ಬೆಳೆಸಲಾಗಿದ್ದು, 12 ರಾಶಿ, 9 ಗ್ರಹ, 27 ನಕ್ಷತ್ರಗಳಿಗೆ ಅನುಗುಣವಾಗಿ ಯಾವ ರಾಶಿಯವರಿಗೆ ಯಾವ ಔಷಧ ಗಿಡ ಎಂಬುದನ್ನು ಕೂಡ ಸೂಚಿಸಲಾಗಿದೆ. ಈ ವನದಲ್ಲಿ ಕುಳಿತರೆ ಸಾಕು, ಒಂದು ವಿಶೇಷ ಶಕ್ತಿ ಉಂಟಾಗುತ್ತದೆ. ಪರಿಸರವೂ ಕೂಡ ಸ್ವಚ್ಛವಾಗಿರುತ್ತದೆ. ಈ ಅಮೂಲ್ಯ ಸಸ್ಯಗಳನ್ನು ನಾವು ವಿವಿಧೆಡೆಯಿಂದ ತಂದು ಬೆಳೆಸಿದ್ದೇವೆ ಎಂದು ಡಿ.ಎಲ್. ಮಂಜುನಾಥ್ ಹೇಳಿದರು.

ಒಬ್ಬ ರೋಗಿ ಯಾವ ಕಾರಣಕ್ಕೂ ಗುಣವಾಗುವುದಿಲ್ಲ ಎಂದು ವೈದ್ಯರು ತಿಳಿಸಿದ ಮೇಲೆ ಅಂತಹ ರೋಗಿಗೆ ನಿರಂತರವಾದ ವೈದ್ಯಕೀಯ ಆರೈಕೆ ಅವರು ಬದುಕಿರುವ ತನಕ ಬೇಕಾಗುತ್ತದೆ. ಮತ್ತು ಅವರನ್ನು ಮನೆಗಳಲ್ಲಿ ನೋಡಿಕೊಳ್ಳುವುದು ಕಷ್ಟವಾಗುತ್ತದೆ. ರೋಗಿಯ ಕುಟುಂಬದವರಿಗೂ ಸಾಂತ್ವನ ಹೇಳುವ ಪರಿಸ್ಥಿತಿ ಬರುತ್ತದೆ. ಈ ಸೇವೆ ಬಡವ, ಬಲ್ಲಿದ, ಜಾತಿ, ಧರ್ಮಗಳನ್ನು ಮೀರಿ ನಿಂತಿದೆ. ಹಾಗಾಗಿ ಪ್ರಾರ್ಥಿಸುವ ತುಟಿಗಳಿಗಿಂತ ಸೇವೆ ಮಾಡುವ ಕೈಗಳೇ ಮುಖ್ಯ ಎನ್ನುವ ಹಿನ್ನೆಲೆಯಲ್ಲಿ ಈ ಸಂಸ್ಥೆ ಒಂದು ಅದ್ಭುತ ಕೆಲಸ ಮಾಡುತ್ತಿದೆ

ಡಿ.ಎಲ್. ಮಂಜುನಾಥ್

Ad Widget

Related posts

ಜಿಲ್ಲೆಯಲ್ಲಿ ವೀಕೆಂಡ್ ಕರ್ಪ್ಯೂ ಅಗತ್ಯವಿಲ್ಲ: ಕೆ.ಬಿ ಪ್ರಸನ್ನಕುಮಾರ್

Malenadu Mirror Desk

ಸಹ್ಯಾದ್ರಿ ಕ್ಯಾಂಪಸ್ ಹಸ್ತಾಂತರ ಬೇಡ: ಎನ್.ಎಸ್.ಯು.ಐ

Malenadu Mirror Desk

ಅಪೂರ್ವಗೆ ಮೂರನೇ ರ‍್ಯಾಂಕ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.