ರಾಜ್ಯದ ಭ್ರಷ್ಟ ಸರ್ಕಾರ ಬದಲಾಗಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸಂದರ್ಭದಲ್ಲಿ ಬೆಡ್ ಖರೀದಿ ಅವ್ಯವಹಾರ ನಡೆದಿದೆ. ಪರಿಷತ್ ಚುನಾವಣೆಯಲ್ಲಿ ೧೫ ಸ್ಥಾನ ಗೆಲ್ಲುವ ನಿರೀಕ್ಷೆ ಇದೆ. ಪರಿಷತ್ ಚುನಾವಣೆ ನಂತರ ಸಿಎಂ ಬದಲಾಗುತ್ತಾರೆ ಎಂದು ಈಶ್ವರಪ್ಪ ಹೇಳಿದ್ದಾರೆ. ಆ ಪಕ್ಷದಲ್ಲಿ ಡಿಸಿಎಂ ಆಗಿದ್ದ ಈಶ್ವರಪ್ಪ ಹೇಳಿಕೆ ಲಘುವಾಗಿ ತೆಗೆದುಕೊಳ್ಳುವಂತಿಲ್ಲ. ಹಿಂದೆ ಸಿಎಂ ಬದಲಾಗಲಿದ್ದಾರೆ ಎಂದು ಅವರು ನೀಡಿದ್ದ ಹೇಳಿಕೆ ನಿಜವಾಗಿದೆ ಎಂದು ಡಿಕೆಶಿವಕುಮಾರ ಹೇಳಿದರು.
ಗೃಹ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪಾಪ ಗೃಹ ಸಚಿವರು ಇರುವುದನ್ನು ಹೇಳ್ತಾ ಇದ್ದಾರೆ. ಆಯುಧ ಪೂಜೆ ದಿನ ಉಡುಪಿ, ವಿಜಯಪುರದಲ್ಲಿ ಪೋಲಿಸರಿಗೆ ಹೊಸ ಬಟ್ಟೆ ಕೊಡಿಸಿದ್ದಾರೆ. ಎಂಜಲು ಕಾಸು ಎಂಬ ಪದ ಬಳಸಬಾರದಿತ್ತು. ಆದರೆ ಆರಗ ಅಂತಹವರು ಇದ್ದರೆ ಇಲಾಖೆಯಲ್ಲಿ ಏನಾಗುತ್ತಿದೆ ಎಂಬುದನ್ನಾದರೂ ಹೇಳ್ತಾರೆ ಎಂದು ವ್ಯಂಗ್ಯವಾಡಿದರು.
ಈಶ್ವರಪ್ಪ ಬಾಯಿ ತಪ್ಪಿ ಸತ್ಯ ಹೇಳುತ್ತಾರೆ
ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ನಿರ್ವಹಣೆ ಮಾಡಲು ಆಗದೇ ಇದ್ದರೆ ರಾಜೀನಾಮೆ ನೀಡಬೇಕು. ಅವರ ಇಲಾಖೆಯಲ್ಲಿ ಭ್ರಷ್ಟಾಚಾರ ಕೊಳೆತು ನಾರುತ್ತಿದೆ ಎನ್ನುವುದು ಮನವರಿಕೆ ಆಗಿದೆ. ಈ ಹಿನ್ನೆಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಇಂತಹ ಹೇಳಿಕೆ ನೀಡಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ಬಗ್ಗೆ ಈಶ್ವರಪ್ಪ ನೀಡಿರುವ ಹೇಳಿಕೆ ಕುರಿತು ಶಿವಮೊಗ್ಗದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈಶ್ವರಪ್ಪ ಬಾಯಿತಪ್ಪಿ ಕೆಲ ನಿಜ ಹೇಳ್ತಾರೆ. ಇದ್ದರೂ ಇರಬಹುದು ಎಂದು ಹೇಳಿದರು.
ಪ್ರಧಾನಿ ಮೋದಿ ಮತ್ತು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ, ಬಿಜೆಪಿಗೆ ಜೆಡಿಎಸ್ ಬೆಂಬಲಿಸುತ್ತದೆ. ಕೆಲವು ಕ್ಷೇತ್ರದಲ್ಲಿ ಜೆಡಿಎಸ್ ಸ್ಥಳೀಯ ಮುಖಂಡರು ಕಾಂಗ್ರೆಸ್ ಗೆ ಬೆಂಬಲ ನೀಡಿದ್ದಾರೆ ಎಂದರು.
ಈಶ್ವರಪ್ಪ ಅವರಿಗೆ ಸಿಎಂ ಮೇಲೆ ನಂಬಿಕೆ ಇಲ್ಲ. ಈ ಹಿನ್ನೆಲೆಯಲ್ಲಿ ಸಚಿವ ಈಶ್ವರಪ್ಪ ರಾಜೀನಾಮೆ ನೀಡಬೇಕು ಎಂದು ಹೇಳಿದರು. ಸಿದ್ದರಾಮಯ್ಯ ಅವರನ್ನು ಟೀಕೆ ಮಾಡಿದ್ರೆ ಈಶ್ವರಪ್ಪ ಲೀಡರ್ ಆಗುತ್ತೇನೆ ಅಂದುಕೊಂಡಿದ್ದಾನೆ. ಜನರ ಆಶೀರ್ವಾದ ಇದ್ದರೆ ಮಾತ್ರ ನಾಯಕ ಆಗಲು ಸಾಧ್ಯ ಎಂದು ಕುಟುಕಿದರು.
ಅಧಿವೇಶನ ಆರಂಭವಾಗುತ್ತಿದೆ. ಅತಿವೃಷ್ಟಿ ಸಮಸ್ಯೆಯಾಗಿದೆ. ಮೂರು ನಾಲ್ಕು ಪಟ್ಟು ಹೆಚ್ಚು ಮಳೆ ಹೆಚ್ಚಾಗಿದೆ. ಅಪಾರ ಪ್ರಮಾಣದ ಬೆಳೆ ನಷ್ಟ ಆಗಿದೆ. ಒಂದು ತಿಂಗಳಾಯ್ತು, ಇನ್ನು ಕೂಡಾ ಸರ್ವೇ ಆಗಿಲ್ಲ. ೬ ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. ರೈತರ ವಿರೋಧಿ ಸರ್ಕಾರ ಇದಾಗಿದೆ. ಬಿಜೆಪಿ ಸರ್ಕಾರ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಜನರು ಶಾಪ ಹಾಕುತ್ತಿದ್ದಾರೆ ಎಂದರು.
ಜನರು ನೆಮ್ಮದಿಯಿಂದಿರಬೇಕು ಎಂದು ಪ್ರಾರ್ಥಿಸಿದ್ದೇನೆ
ವಿಧಾನಸಭೆಯಲ್ಲಿ ಬಿಜೆಪಿಗೆ ಪೂರ್ಣ ಬಹುಮತವಿದೆ. ಈ ಚುನಾವಣೆ ಮೂಲಕ ವಿಧಾನಪರಿಷತ್ ನಲ್ಲೂ ಪೂರ್ಣ ಬಹುಮತ ಸಾಧಿಸುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ತಿಕ ಮಾಸದಲ್ಲಿ ಹೋಮ-ಹವನ ಮಾಡುತ್ತಿದ್ದೇವೆ. ರೈತರು, ಜನರು ನೆಮ್ಮದಿಯಿಂದಿರಬೇಕು ಎಂದು ಪ್ರಾರ್ಥಿಸಿದ್ದೇನೆ. ಚುನಾವಣೆಗಾಗಿ ಹೋಮ ಮಾಡಿಲ್ಲ ಎಂದು ಹೇಳಿದ್ದಾರೆ.
ಭಗವಂತನ ಕೃಪೆ ಬಿಜೆಪಿ ಮೇಲೆ ಇದೆ. ಕನಿಷ್ಟ ೧೬ ಸ್ಥಾನದಲ್ಲಿ ನಾವು ಗೆಲ್ಲುತ್ತೆವೆ ಎಂದ ಸಚಿವ ಈಶ್ವರಪ್ಪ ಅವರು, ಎಲ್ಲಾ ನಾಯಕರು ಬೂತ್ ಮಟ್ಟದಲ್ಲಿ ಓಡಾಡಬೇಕೆಂದು ತೀರ್ಮಾನಿಸಿದ್ದೇವೆ. ನಾನು ನಾಳೆಯಿಂದ ತೀರ್ಥಹಳ್ಳಿ, ಹೊನ್ನಾಳಿ, ಚನ್ನಗಿರಿ, ಸೊರಬಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿದರು.