ಸೊರಬದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವಂತೆ ಆಗ್ರಹಿಸಿ ಪ್ರತಿಭಟಿಸಿ ನಂತರ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಸೋಮವಾರ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ತಾಲೂಕು ಪ್ರಗತಿಪರ ಸಂಘಟನೆಗಳ ಸಂಚಾಲಕ ರಾಜಪ್ಪ ಮಾಸ್ತರ್ ಮಾತನಾಡಿ, ಶಾಲಾ ಮಕ್ಕಳ ಆರೋಗ್ಯದಲ್ಲಿ ಉಂಟಾಗುವ ಅಪೌಷ್ಟಿಕತೆ ಹೋಗಲಾಡಿಸಲು ಶಾಲೆಗಳಲ್ಲಿ ಬಿಸಿಯೂಟದ ಜೊತೆ ಮೊಟ್ಟೆ ವಿತರಣೆ ಮಾಡುವುದನ್ನು ಸರ್ಕಾರ ನಿಲ್ಲಿಸಬಾರದು. ಸರಕಾರ ಜಾರಿಗೆ ತಂದಿರುವ ಈ ಯೋಜನೆ ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಮಾತ್ರ ಅನುಷ್ಠಾನಗೊಳ್ಳುತ್ತಿದೆ. ಪರಿಪೂರ್ಣವಾಗಿ ರಾಜ್ಯದಾದ್ಯಂತ ಯೋಜನೆ ವಿಸ್ತರಣೆ ಆಗಬೇಕು ಎಂದ ಅವರು, ಮಕ್ಕಳ ಆರೋಗ್ಯಕ್ಕೆ ಪೂರಕವಾಗಿರುವ ಮೊಟ್ಟೆ ವಿತರಣೆಯನ್ನು ಪಟ್ಟಭದ್ರ ಹಿತಾಸಕ್ತಿಗಳು ಮೊಟ್ಟೆ ಮಾಂಸಾಹಾರ ಎಂದು ವಿರೋಧಿಸುತ್ತಿದ್ದಾರೆ. ಸಮಾಜದಲ್ಲಿ ಮಾಂಸಾಹಾರಿಗಳು ಕೀಳು ಎಂಬ ಬೇಧ, ಭಾವ ಹುಟ್ಟಿಸಿ ಬಡ ಮಕ್ಕಳಿಗೆ ಸಿಗಬೇಕಾದ ಸೌಲಭ್ಯವನ್ನು ಕಿತ್ತುಕೊಳ್ಳುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದ ಅವರು ಶಾಲಾ ಮಕ್ಕಳಲ್ಲಿನ ಅಪೌಷ್ಟಿಕತೆ ಹೋಗಲಾಡಿಸಲು ಮೊಟ್ಟೆ ಜೊತೆಗೆ ಹಣ್ಣುಗಳನ್ನು ಸರ್ಕಾರ ವಿತರಣೆ ಮಾಡಬೇಕು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಬಸವರಾಜಪ್ಪ ಹಸ್ವಿ, ಹಿರಿಯಪ್ಪ ಕಲ್ಲಂಬಿ, ಹರೀಶ ಚಿಟ್ಟೂರು, ಶ್ಯಾಮಣ್ಣ ತುಡನೀರು, ವಿನಾಯಕ ಕಾನಡೆ, ಶೇಖರ್, ಬಸವೇಶ್ವರ ಹಿರೇಕಸವಿ, ಪುರುಷೋತ್ತಮ, ಪ್ರಶಾಂತ ಹುಣಸವಳ್ಳಿ, ಸುರೇಶಕುಮಾರ್, ಬಸಪ್ಪ ಪಾಲ್ಗೊಂಡಿದ್ದರು.