ಕೇಂದ್ರ ಸರ್ಕಾರವು ಬರುವ ಜನವರಿಯಿಂದ ಜನರ ಅತ್ಯಗತ್ಯ ಹಾಗೂ ದಿನ ನಿತ್ಯ ಬಳಕೆಯ ಜವಳಿ ಮೇಲೆ ಶೇ. 12ಕ್ಕೆ ಜಿಎಸ್‌ಟಿ ಹೆಚ್ಚಳ ಮಾಡುತ್ತಿರುವುದು ಆಘಾತಕಾರಿ ನಡೆಯಾಗಿದೆ.ಈ ಹೊರೆಯನ್ನು ಇಳಿಸಲು ಆಗ್ರಹಿಸುವ ಸಲುವಾಗಿ ಈ ಎರಡೂ ಸಂಘಟನೆಗಳು ಅಂಚೆ ಕಾರ್ಡು ಚಳುವಳಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಸಂಘ ಹಾಗೂ ಜವಳಿ ವರ್ತಕರ ಸಂಘ ಹೇಳಿದೆ.
ಗುರುವಾರ ಜಂಟಿ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಚೇಂಬರ್ ಅಧ್ಯಕ್ಷ ಜೆ. ಆರ್. ವಾಸುದೇವ್ ಮತ್ತು ಜವಳಿ ವರ್ತಕರ ಸಂಘದ ಅಧ್ಯಕ್ಷ ವೆಂಕಟೇಶ್‌ಮೂರ್ತಿ, ಈಗ ಮತ್ತೊಂದು ಆಘಾತವನ್ನು ಎದುರಿಸಲು ಜನ ಸಾಮಾನ್ಯರು ಸಿದ್ಧವಾಗಬೇಕಿದೆ. ಜೀವನದುದ್ದಕ್ಕೂ ಅಗತ್ಯವಿರುವ ಬಟ್ಟೆಯೂ ಸಹ ಈಗ ದುಬಾರಿಯಾಗುತ್ತಿದೆ. ಬಟ್ಟೆಯ ಮೇಲಿನ ಶೇ. 5 ರ ಜಿಎಸ್‌ಟಿಯನ್ನು ಶೇ. 12ಕ್ಕೆ ಏರಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಜನವರಿಯಿಂದ ಜಾರಿಗೆ ಬರಲಿದೆ. ಕೇಂದ್ರ ಮತು ರಾಜ್ಯ ಸರ್ಕಾರಗಳ ಯಾವುದೇ ತೆರಿಗೆಗಳು ಅಂತಿಮವಾಗಿ ಜನ ಸಾಮಾನ್ಯರ ಕಿಸೆಗೆ ಕೈ ಹಾಕುತ್ತವೆ. ಹೀಗಾಗಿ ಬಟ್ಟೆಯ ಮೇಲಿನ ಈ ಹೆಚ್ಚುವರಿ ಜಿಎಸ್‌ಟಿ ಕೂಡಾ ಜನ ಸಾಮಾನ್ಯರಿಗೆ ಹೊರೆಯಾಗಲಿದೆ ಎಂದರು.
ಜಿಲ್ಲಾ ವಾಣಿಜ್ಯ ಹಾಗೂ ಕೈಗಾರಿಕಾ ಸಂಘ ಮತ್ತು ಜವಳಿ ವರ್ತಕರ ಪ್ರತಿಭಟನೆಗೆ ಸಾರ್ವಜನಿಕರೂ ಸಹ ಕೈ ಜೋಡಿಸಬೇಕಾಗಿದೆ. ಈಗಾಗಲೇ ಎರಡು ಸಾವಿರ ಕಾರ್ಡುಗಳನ್ನು ನಗರದ ಜವಳಿ ವರ್ತಕರು ಪೋಸ್ಟ್ ಮಾಡಿ, ಕೇಂದ್ರ ಸರ್ಕಾರದಗಮನವನ್ನು ಸೆಳೆದಿದ್ದಾರೆ. ಜಿಲ್ಲೆಯಿಂದ ಜವಳಿ ವರ್ತಕರು ಸಾರ್ವಜನಿಕರು ಸೇರಿ ಒಟು ಐದು ಸಾವಿರ ಕಾರ್ಡುಗಳನ್ನು ಪೋಸ್ಟ್ ಮಾಡುವ ಉದ್ದೇಶವಿದೆ. ಹಾಗೆಯೇ ಪ್ರತೀ ಜವಳಿ ಅಂಗಡಿಗಳಲ್ಲಿ ಪ್ರತಿಭಟನೆಯ ಸಂಕೇತವಾಗಿ ಪ್ಲಕಾರ್ಡ್‌ನ್ನು ಹಾಕಲಾಗುತ್ತಿದೆ ಎಂದರು.
ಸಾರ್ವಜನಿಕರು ಈ ಅಂಚೆ ಕಾರ್ಡು (ಪೋಸ್ಟ್‌ಕಾರ್ಡ್) ಚಳುವಳಿಯಲ್ಲಿ ಭಾಗವಹಿಸಿ ಅವರೂ ಸಹ ಕಾರ್ಡ್ ಗಳನ್ನು ಬರೆದು ಪ್ರಧಾನ ಮಂತ್ರಿ ಗಳಿಗೆ ಪೋಸ್ಟ್ ಮಾಡುವಂತೆ ಮನವಿ ಮಾಡಲಾಗಿದೆ. ನಗರ ಹಾಗೂ ಜಿಲ್ಲೆಯ ಎಲ್ಲಾ ಸಾರ್ವಜನಿಕರು ಕನಿಷ್ಟ ೧೦ ಪೋಸ್ಟ್ ಕಾರ್ಡ್‌ಗಳನ್ನು ಪ್ರಧಾನಿ ಕಛೇರಿಗೆ ಪೋಸ್ಟ್ ಮಾಡುವುದರ ಮೂಲಕ ಪ್ರತಿಭಟನೆ ವ್ಯಕ್ತಪಡಿಸಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಟಿಯಲ್ಲಿ ವರ್ತಕರಾದ ಟಿ.ಆರ್. ಅಶ್ವತ್ಥನಾರಾಯಣ ಶೆಟ್ಟಿ, ಸುರೇಶ್, ಪ್ರಭಾಕರ್, ಹರೀಶ್, ಸಂತೋಷ್, ಜಿ. ವಿಜಕುಮಾರ್ , ಪ್ರಭಾಕರ ಮೊದಲಾದವರಿದ್ದರು