ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷರ ಚುನಾವಣೆ ನಡೆದು ಆಡಳಿತಾಧಿಕಾರಿಗಳಿಂದ ನ. ೨೫ ರಂದು ಜವಾಬ್ದಾರಿ ವಹಿಸಿಕೊಂಡಿದ್ದೇನೆ. ಆದರ ಕಸಾಪ ಖಾತೆಯಲ್ಲಿ ಕೇವಲ ೨ ಸಾವಿರ ರೂ. ಮಾತ್ರ ಇದೆ. ಚಾರ್ಜ್ ಪಡೆಯಲು ಸಾಹಿತ್ಯ ಗ್ರಾಮಕ್ಕೆ ಹೋದಾಗ ಪ್ರಮುಖ ದಾಖಲೆಗಳಿಲ್ಲದೇ ಇರುವುದು ಗಮನಕ್ಕೆ ಬಂದಿದೆ ಎಂದು ನೂತನ ಅಧ್ಯಕ್ಷ ಡಿ. ಮಂಜುನಾಥ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಈ ವಿಚಾರವನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ೨೦೧೫ರಲ್ಲಿ ತಾನು ಅಧಿಕಾರ ವಹಿಸಿಕೊಡುವಾಗ ಪರಿಷತ್ತಿನ ಬ್ಯಾಂಕ್ ಖಾತೆಯಲ್ಲಿ ಐದು ಲಕ್ಷದ ಎಂಪತ್ತೊಂಭತ್ತು ಸಾವಿರದ ಮುನ್ನೂರ ಎಂಭತ್ತೇಳು ರೂಪಾಯಿಯಿತ್ತು. ಆದರೆ ಇಂದು ಖಾತೆಯಲ್ಲಿ ಎರಡು ಸಾವಿರ ರೂ. ಹಣವಿದೆ. ಕಚೇರಿಯ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಒಂದೂವರೆ ಸಾವಿರ ರೂ. ಬಿಲ್ಲು ಬಾಕಿಯಿದೆ. ವಿದ್ಯುತ್ ಸಂಪರ್ಕ ಪಡೆದು ಕೆಲಸ ಆರಂಭ ಮಾಡಿದ್ದೇವೆ. ಕಚೇರಿ ಸ್ವಚ್ಚಗೊಳಿಸಿ ಸದಸ್ಯರ ಅಭಿಪ್ರಾಯ ಪಡೆದು ಸಮಿತಿ ರಚಿಸುವ ಪ್ರಯತ್ನಕ್ಕೆ ಸಿದ್ಧನಾಗಿದ್ದೇನೆ. ಇವೆಲ್ಲವನ್ನು ನಿಭಾಯಿಸಲು ಎಲ್ಲರ ಸಹಕಾರ ಕೋರುವುದಾಗಿ ಹೇಳಿದರು.
ಸದಸ್ಯರ ಸಂಪರ್ಕಕ್ಕಾಗಿ ಮಾಧ್ಯಮಗಳು, ಸಾಮಾಜಿಕ ಜಾಲತಾಣ, ದೂರವಾಣಿ ಮೂಲಕ ಸಂಪರ್ಕಮಾಡಲು ಎಲ್ಲಾ ತಾಲೂಕಿನ ನಮ್ಮ ಕ್ರಿಯಾಶೀಲ ಕಾರ್ಯಪಡೆ ಪ್ರಯತ್ನ ಮಾಡುತ್ತಿದೆ. ಸಾಗರದಲ್ಲಿ ಡಿ. ೧೧ ರಂದು ಶನಿವಾರ ಸಂಜೆ ೪ ಕ್ಕೆ ಮಲೆನಾಡು ಸಿರಿ ವರದಾಶ್ರೀ ಸಭಾಂಗಣದಲ್ಲಿ, ೧೨ ರಂದು ಶಿಕಾರಿಪುರದ ಗುರುಭವನದಲ್ಲಿ ಬೆಳಿಗ್ಗೆ ೧೧ ಕ್ಕೆ, ಸಂಜೆ ೪ ಕ್ಕೆ ಸೊರಬದ ಗುರು ಭವನದಲ್ಲಿ ಸಭೆ ಏರ್ಪಡಿಸಲಾಗಿದೆ. ಶಿವಮೊಗ್ಗದ ಸಭೆ ೧೫ ರಂದು ಬುಧವಾರ ಸಂಜೆ ೫:೩೦ ಕ್ಕೆ ಕರ್ನಾಟಕ ಸಂಘ ಸಭಾಂಗಣದಲ್ಲಿ, ನಡೆಯಲಿದೆ. ಭದ್ರಾವತಿ ಸಭೆ ೧೮ನೆಯ ಶನಿವಾರ ಸಂಜೆ ೪ ಕ್ಕೆ ಭದ್ರಾವತಿಯ ಉಂಬಳೇಬೈಲು ರಸ್ತೆಯ ಲಯನ್ಸ್ ಸಭಾಂಗಣದಲ್ಲಿ, ಹೊಸನಗರ ಸಭೆ ೧೯ ರ ಭಾನುವಾರ ಬೆಳಿಗ್ಗೆ ೧೧ ಸೀತಾರಾಮ ಕಲ್ಯಾಣ ಮಂದಿರದಲ್ಲಿ ಏರ್ಪಡಿಸಲಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಪ್ರಮುಖರಾದ ಕೃಷ್ಣಮೂರ್ತಿ ಹಿಳ್ಳೋಡಿ, ಟಿ.ಕೃಷ್ಣಪ್ಪ, ಎಸ್.ಶಿವಮೂರ್ತಿ, , ಡಿ.ಗಣೇಶ್, ಭೈರಾಪುರ ಶಿವಪ್ಪಮೇಷ್ಟ್ರು ಉಪಸ್ಥಿತರಿದ್ದರು.
ಸಾಹಿತ್ಯ ಗ್ರಾಮ ಯೋಜನೆ ಅಪೂರ್ಣವಾಗಿದೆ. . ಚುನಾವಣೆಯ ಪ್ರಕ್ರಿಯೆ ನಡೆಯುವಾಗಲೆ ಅಧ್ಯಕ್ಷರಾದವರು ನಿಯಮದಂತೆ ಆಡಳಿತಾಧಿಕಾರಿಗಳಿಗೆ ಪರಿಷತ್ತಿನ ಎಲ್ಲಾ ಚರ-ಸ್ಥಿರ ಆಸ್ತಿಯನ್ನು ಹಸ್ತಾಂತರ ಮಾಡಬೇಕು. ಆದರೆ ನಮ್ಮ ಜಿಲ್ಲೆಯಲ್ಲಿ ಹಾಗೆ ಆಗಲೇ ಇಲ್ಲ. ಸಾಹಿತ್ಯ ಗ್ರಾಮದ ಅಷ್ಟೊಂದು ದೊಡ್ಡ ಆಸ್ತಿಯ ದಾಖಲೆಗಳನ್ನು ವಶಕ್ಕೆ ಪಡೆಯದೇ ನಿರ್ಲಕ್ಷ ತೋರಲಾಗಿದೆ. ಮುಂದಿನ ಚಟುವಟಿಕೆಗಳಿಗೆ ಅನಗತ್ಯ ಉಪದ್ರಕೊಡುವ ಕೆಲಸ ಇದಾಗಿದೆ. ದಾಖಲೆಗಳಿಲ್ಲದೆ ನಾವು ಚಾರ್ಜು ಪಡೆಯೊಲ್ಲ ಎಂದು ಹೇಳಿದ್ದೇನೆ ಆ ಬಗ್ಗೆ ಪತ್ರಗಳನ್ನು ಬರೆದಿದ್ದೇವೆ. ಸಮಾಲೋಚನೆ ಸಭೆ ಸಾಹಿತ್ಯ ಗ್ರಾಮದಲ್ಲಿ ಮಾಡಲು ತೊಂದರೆಯಾಗಿದೆ
– ಡಿ. ಮಂಜುನಾಥ , ನೂತನ ಅಧ್ಯಕ್ಷ