ಪ್ರತಿಷ್ಠೆಯ ಕಣವಾದ ಒಕ್ಕಲಿಗರ ಸಂಘದ ಚುನಾವಣೆ
ರಾಜ್ಯದ ಪ್ರಬಲ ಸಮುದಾಯವಾದ ಒಕ್ಕಲಿಗರ ಸಂಘದ ಚುನಾವಣೆ ಡಿ.೧೨ ರಂದು ನಡೆಯಲಿದ್ದು, ಯಾವ ಸಾರ್ವತ್ರಿಕ ಚುನಾವಣೆಗೂ ಕಡಿಮೆ ಇಲ್ಲದಂತೆ ಈ ಚುನಾವಣೆಯ ಕಾವು ಮಲೆನಾಡಿನಾದ್ಯಂತ ಜೋರಾಗಿಯೇ ಇದೆ. ವಾಯುಬಾರ ಕುಸಿತದಿಂದಾಗಿ ಮಳೆ ಮತ್ತು ಮೋಡ ಕವಿದ ವಾತಾವರಣದ ಕಾರಣಕ್ಕಾಗಿ ರೈತಾಪಿ ಜನರು ಅಡಕೆ, ಭತ್ತ ಸೇರಿದಂತೆ ಪೈರನ್ನು ಹೇಗೆ ಹಸನು ಮಾಡುವುದು ಎಂಬ ಆತಂಕದಲ್ಲಿರುವಾಗಲೇ ಚುನಾವಣೆ ಗದ್ದಲ ಬಿರುಸುಪಡೆದುಕೊಂಡಿದೆ. . ಯಾವುದೇ ಸಂಗತಿ ಇರಲಿ ಮಲೆನಾಡಲ್ಲಿ ಗೌಡ್ರ ಗದ್ಲ ಸ್ವಲ್ಪ ಜೋರೇ ಇರ್‍ತದೆ. ತಮ್ಮದೇ ಸಂಘದ ರಾಜ್ಯ ಘಟಕಕ್ಕೆ ನಡೆಯುತ್ತಿರುವ ಈ ಚುನಾವಣೆಯಲ್ಲಿ ಅಭ್ಯರ್ಥಿಗಳ ಅಬ್ಬರ ನೋಡಿ …..” ಒಯ್ ಎಂತ..ಅಡ್ಕೆ ಕೊಯ್ಲ್ ಆತಾ….ಅಂತ ಕೇಳೊ ಬದ್ಲು , ಓ.. ಗೌಡ್ರೆ.. ಎಂತ …. ಎಲೆಕ್ಷನ್…ಗಮ್ಮತ್ತುಂಟಾ... ಎಂದು ಕೇಳುವಂತಾಗಿದೆ.
ರಾಜ್ಯ ಸಂಘದ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯಿಂದ ಒಬ್ಬ ಹಾಗೂ ಚಿಕ್ಕಮಗಳೂರು ಜಿಲ್ಲೆಯಿಂದ ತಲಾ ಒಬ್ಬರು ನಿರ್ದೇಶಕರನ್ನು ಆಯ್ಕೆ ಮಾಡಲು ಚುನಾವಣೆ ನಡೆಯುತ್ತಿದೆ. ಶಿವಮೊಗ್ಗದಿಂದ ಚೇತನಾ ಹೆಗ್ಡೆ ಎಂಬ ಮಹಿಳೆ ಸೇರಿದಂತೆ ೯ ಅಭ್ಯರ್ಥಿಗಳು ಕಣದಲ್ಲಿದ್ದು, ಚಿಕ್ಕಮಗಳೂರಲ್ಲಿ ಒಂದು ಸ್ಥಾನಕ್ಕೆ ನಾಲ್ವರು ಹುರಿಯಾಳುಗಳು ಕಣದಲ್ಲಿದ್ದಾರೆ.
ಚಿಕ್ಕಮಗಳೂರಲ್ಲಿ ಯಾರ್‍ಯಾರು ಅಭ್ಯರ್ಥಿ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು13342 ಮತದಾರರಿದ್ದು, 28 ಮತಗಟ್ಟೆಗಳಲ್ಲಿ ಚುನಾವಣೆ ಮತದಾನ ನಡೆಯಲಿದೆ. ಕ್ಷೇತ್ರದಲ್ಲಿ ಐ.ಪಿ.ನವೀನ್‌ಕುಮಾರ್, ಬಿ.ಜೆ.ನಾಗರಾಜ್, ಎ.ಪೂರ್ಣೇಶ್ ಹಾಗೂ ಬಿ.ಎಲ್.ಸಂದೀಪ್ ಕಣದಲ್ಲಿದ್ದು, ಭಾರೀ ಪೈಪೋಟಿ ನಡೆಯುತ್ತಿದೆ.
9 ಅಭ್ಯರ್ಥಿಗಳು:
ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯನ್ನು ಒಳಗೊಂಡ ಶಿವಮೊಗ್ಗ ಕ್ಷೇತ್ರದಲ್ಲಿ 13447 ಮತದಾರರಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ 12174 ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ 1274 ಮತದಾರರಿದ್ದಾರೆ. ವಕೀಲ ಕೆ.ಎಸ್.ರವಿಕುಮಾರ್, ಎಸ್.ಕೆ.ಧರ್ಮೇಶ್, ಚೇತನಾ ಹೆಗ್ದೆ, ಎಸ್.ಕುಮಾರ್, ಎಸ್.ವಿ ಲೋಕೇಶ್, ರಜನೀಕಾಂತ್, ಹೆಚ್.ಡಿ. ಶಶಿಧರ್, ಟಿ.ಎನ್.ನಾಗರಾಜ್ ಸೇರಿ ಒಂಬತ್ತು ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಪ್ರತಿಷ್ಠೆಯ ಸಂಘಟನೆ:
ರಾಜ್ಯ ಒಕ್ಕಲಿಗರ ಸಂಘವು ರಾಜ್ಯದಲ್ಲಿಯೇ ಪ್ರಭಾವಿಯಾಗಿದ್ದು, ಯಾವ ಜಾತಿಯ ಸಂಘಟನೆಯೂ ಇಷ್ಟು ಆರ್ಥಿಕವಾಗಿ ಸಬಲವಾಗಿಲ್ಲ. ಈ ಸಂಘಟನೆಯ ಭಾಗವಾಗುವುದೇ ಒಂದು ಪ್ರತಿಷ್ಠೆಯ ಸಂಗತಿಯಾಗಿದ್ದು, ಇದಕ್ಕಾಗಿ ಪ್ರತಿಬಾರಿ ಪ್ರಬಲ ಹೋರಾಟವೇ ನಡೆಯುತ್ತದೆ. ಹಿಂದೆಲ್ಲ ಸಮಾಜದ ಗಣ್ಯರು,ಹಿರಿಯರನ್ನು ಸಮಾಜದ ಕೆಲಸಕ್ಕೆ ಗೌರವ ಸೂಚಕವಾಗಿ ಆಯ್ಕೆ ಮಾಡಲಾಗುತಿತ್ತು. ಆದರೆ ಈಗ ಶ್ರೀಮಂತ ಸಂಘಟನೆಯ ನಿರ್ದೇಶಕರಾಗುವುದೇ ಒಂದು ಪ್ರತಿಷ್ಠೆ ಎನ್ನುವಂತಾಗಿದೆ.
ಆರ್ಥಿಕಲಾಭ:
ಒಕ್ಕಲಿಗರ ಸಂಘವು ಮೆಡಿಕಲ್ ಕಾಲೇಜು ಸೇರಿದಂತೆ ಅನೇಕ ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುತ್ತದೆ. ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಕಡೆ ಬೆಲೆಬಾಳುವ ಆಸ್ತಿಗಳನ್ನು ಹೊಂದಿದ್ದು, ಸಂಘ ಉತ್ತಮ ಆದಾಯ ಹೊಂದಿದೆ. ಈ ಕಾರಣದಿಂದ ಸಂಘದ ಚುನಾವಣೆಯಲ್ಲಿ ವ್ಯಾಪಕ ಬಂಡವಾಳ ಹರಿದಾಡುತ್ತಿದೆ.
ಹಿಂದೆಲ್ಲ ನಿರ್ದೇಶಕರ ಕೋಟಾದಲ್ಲಿ ಮೆಡಿಕಲ್ ಸೀಟ್ ಲಭ್ಯವಿದ್ದವು. ಒಬ್ಬ ನಿರ್ದೇಶಕರಿಗೆ ವರ್ಷಕ್ಕೆ ಎರಡು ಮೆಡಿಕಲ್ ಸೀಟು ಸಿಕ್ಕರೆ ಕೋಟಿಲೆಕ್ಕದಲ್ಲಿ ಆದಾಯ ಬರುತ್ತದೆ. ಈ ಕಾರಣದಿಂದ ಸಂಘದ ಚುನಾವಣೆ ಯಾವ ಚುನಾವಣೆಗೂ ಕಡಿಮೆ ಇಲ್ಲದಂತೆ ನಡೆಯುತ್ತದೆ.
ಕಾರುಬಾರು ಜೋರು
ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಮತಗಳ ಬಿಕರಿ ಜೋರಾಗಿಯೇ ನಡೆಯುತ್ತಿದೆ ಎನ್ನಲಾಗಿದೆ. ಶಿವಮೊಗ್ಗ ಚಿಕ್ಕಮಗಳೂರು ಕ್ಷೇತ್ರದಲ್ಲಿ ಒಂದು ಮತಕ್ಕೆ 2 ರಿಂದ 5 ಸಾವಿರದ ತನಕ ದರ ನಿಗದಿಮಾಡಲಾಗಿದೆ ಎಂದು ಒಕ್ಕಲಿಗರ ಸಮಾಜದ ಮೂಲಗಳೇ ಹೇಳುತ್ತದೆ. ಚುನಾವಣೆ ಪ್ರಕ್ರಿಯೆ ಆರಂಭವಾದಾಗಿನಿಂದ ಕಾರಿನಲ್ಲಿ ಸುತ್ತಾಟ, ಬಾರಿನಲ್ಲಿ ಕುಡಿತ ಮತ್ತು ಬಾಡೂಟದ ಕೂಟಗಳು ನಡೆಯುತ್ತಿವೆ. ಅಭ್ಯರ್ಥಿಗಳು ತಮ್ಮ ಜನಪ್ರಿಯತೆ ಒಂದನ್ನೇ ನೆಚ್ಚಿಕೊಳ್ಳದೆ ಹಣದ ಹೊಳೆಯನ್ನೇ ಹರಿಸುತ್ತಿದ್ದಾರೆ ಎನ್ನಲಾಗಿದೆ. ಬಲ್ಲ ಮೂಲಗಳು ಪ್ರಕಾರ ಬೆಂಗಳೂರಿನಲ್ಲಿ ಒಂದು ಮತಕ್ಕೆ ಒಂದು ಲಕ್ಷ ರೂ.ವರೆಗೆ ಬೆಲೆ ನಿಗದಿಮಾಡಲಾಗಿದೆಯಂತೆ
ಮಲೆನಾಡಿನಲ್ಲಿ ಒಕ್ಕಲಿಗರ ಸಂಘದ ಚುನಾವಣೆ ಭರಾಟೆ ಜೋರಾಗಿದೆ. ಯಾವುದೇ ಸಂಘಟನೆಗೆ ಪ್ರಜಾಸತ್ತಾತ್ಮಕವಾಗಿ ಚುನಾವಣೆ ನಡೆಯುವುದು ಒಳ್ಳೆಯದೆ. ಆದರೆ ವಿಶ್ವಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರವನ್ನು ಬಳಸಿಕೊಳ್ಳುತ್ತಿರುವ ಕೆಲವರು ಅವರ ಆದರ್ಶಗಳನ್ನು ಅಪಮೌಲ್ಯಗೊಳಿಸುತ್ತಿದ್ದಾರೆ. ಹೆಂಡ,ಖಂಡ ಹಣವೇ ಮೇಳೈಸುತ್ತಿರುವ ಈ ಚುನಾವಣೆಯಲ್ಲಿ ಮತ್ತೆ ಕೆಲವರು ಆದರ್ಶ ರಾಜಕಾರಣಿ ಶಾಂತವೇರಿ ಗೋಪಾಲಗೌಡರ ಹೆಸರನ್ನೂ ಬಳಸಿಕೊಳ್ಳುತ್ತಿರುವುದಕ್ಕೆ ನಮ್ಮ ವಿರೋಧವಿದೆ.
ಕೆ.ಪಿ.ಶ್ರೀಪಾಲ್, ವಕೀಲರು, ಪ್ರಗತಿಪರ ಚಿಂತಕರು