Malenadu Mitra
ರಾಜ್ಯ ಸಾಗರ

ಸೇತುವೆಗೆ ಕೇಸರಿ ಬಣ್ಣ : ಹುಚ್ಚರ ರೀತಿ ನಗರಸಭೆ ಆಡಳಿತ: ಕಾಗೋಡು ತಿಮ್ಮಪ್ಪ

ಸಾಗರ ನಗರವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ಹಾಳಾಗಿರುವ ರಸ್ತೆಗಳನ್ನು ರಿಪೇರಿ ಪಡಿಸುವುದು, ಉದ್ಯಾನವನಗಳನ್ನು ಸೂಕ್ತವಾಗಿ ನಿರ್ವಹಿಸಬೇಕು ಮತ್ತು ಅಂಗನವಾಡಿಗಳನ್ನು ಅಭಿವೃದ್ದಿಪಡಿಸುವಂತೆ ಒತ್ತಾಯಿಸಿ ಸೋಮವಾರ ಬ್ಲಾಕ್ ಕಾಂಗ್ರೇಸ್ ಅಸಂಘಟಿತ ಕಾರ್ಮಿಕರ ಘಟಕದ ವತಿಯಿಂದ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ನಗರವ್ಯಾಪ್ತಿಯ ಬಹುತೇಕ ಬಡಾವಣೆಗಳಲ್ಲಿ ರಸ್ತೆ ಚರಂಡಿಗಳು ಸಂಪೂರ್ಣ ಹಾಳಾಗಿದ್ದು, ಜನ ಹಾಗೂ ವಾಹನ ಸಂಚಾರ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ರಸ್ತೆ, ಉದ್ಯಾನವನ ಇನ್ನಿತರೆ ಅಭಿವೃದ್ದಿ ಪಡಿಸಬೇಕಾದ ನಗರಸಭೆ ಆಡಳಿತ ಸೇತುವೆಗೆ ಕೇಸರಿ ಬಣ್ಣ ಹಚ್ಚುತ್ತಿದೆ. ಒಂದರ್ಥದಲ್ಲಿ ಹುಚ್ಚರ ರೀತಿ ನಗರಸಭೆ ಆಡಳಿತ ಕಾರ್ಯನಿರ್ವಹಿಸುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದರು.

ಬಿ.ಎಚ್.ರಸ್ತೆ ಮೂಲಕ ಜೋಸೆಫ್ ನಗರಕ್ಕೆ ಬರುವ ರಸ್ತೆ ಸಂಪೂರ್ಣ ಹಾಳಾಗಿದೆ. ಜೊತೆಗೆ ಕಂಬಳಿಕೊಪ್ಪ ಕೆರೆ ಪಕ್ಕದ ರಸ್ತೆ ಹಾಳಾಗಿದೆ. ಮಾರಿಕಾಂಬಾ ರಸ್ತೆ ಮತ್ತು ಶಿವಾಜಿ ರಸ್ತೆ ಓಡಾಡಲು ಸಾಧ್ಯವೇ ಇಲ್ಲ ಎನ್ನುವಂತೆ ಆಗಿದೆ. ಅನೇಕ ಕಡೆಗಳಲ್ಲಿ ಉದ್ಯಾನವನ ಹಾಳಾಗಿದೆ. ಕೆಲವು ಕಡೆಗಳಲ್ಲಿ ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಇಲ್ಲ. ಇಂತಹ ಆಡಳಿತ ಮಾಡಿದರೆ ಜನರು ಸುಮ್ಮನೆ ಇರುವುದಿಲ್ಲ. ಜನ ಈಗ ಎಚ್ಚೆತ್ತುಕೊಂಡಿದ್ದಾರೆ. ತಕ್ಷಣ ನಗರಸಭೆ ಆಡಳಿತ ಅಭಿವೃದ್ದಿ ಕೆಲಸಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಒತ್ತಾಯಿಸಿದರು.

ಕಾರ್ಮಿಕ ಘಟಕದ ಅಧ್ಯಕ್ಷ ಕೆ.ಸಿದ್ದಪ್ಪ ಮಾತನಾಡಿ, ರಸ್ತೆ ಹೊಂಡಗುಂಡಿ ಬಿದ್ದಿರುವುದರಿಂದ ಮಳೆಗಾಲದಲ್ಲಿ ಕೆಸರಿನ ಹೊಂಡವಾದರೆ, ಬೇಸಿಗೆಯಲ್ಲಿ ಧೂಳಿನಿಂದ ತುಂಬಿ ಜನರು ಅನಾರೋಗ್ಯ ಸಮಸ್ಯೆ ಎದುರಿಸುವಂತೆ ಆಗಿದೆ. ಮಾರಿಕಾಂಬಾ ರಸ್ತೆ, ಶಿವಾಜಿ ರಸ್ತೆ, ಶಿವಪ್ಪನಾಯಕ ವೃತ್ತದಿಂದ ಇಕ್ಕೇರಿಗೆ ಹೋಗುವ ರಸ್ತೆ, ಪೊಲೀಸ್ ಸ್ಟೇಷನ್ ವೃತ್ತ ಹೀಗೆ ಎಲ್ಲ ಕಡೆಯೂ ಜಲ್ಲಿ ಎದ್ದು ವಾಹನ ಸವಾರರು ಬಿದ್ದು ಗಾಯಗೊಂಡು ಆಸ್ಪತ್ರೆ ಸೇರುತ್ತಿದ್ದಾರೆ. ಹಲವು ಬಾರಿ ರಸ್ತೆ ರಿಪೇರಿಗೆ ಮನವಿ ಸಲ್ಲಿಸಿದ್ದಾಗ್ಯೂ ಆಡಳಿತಕ್ಕೆ ಕಿವಿಕಣ್ಣು ಇಲ್ಲವೇ ಎನ್ನುವ ಪ್ರಶ್ನೆ ಸಾರ್ವಜನಿಕರದ್ದಾಗಿದೆ. ತಕ್ಷಣ ವಿಶೇಷ ಅನುದಾನ ತಂದು ರಸ್ತೆ ಅಭಿವೃದ್ದಿಪಡಿಸುವಂತೆ ಒತ್ತಾಯಿಸಿದ ಅವರು ಉದ್ಯಾನವನ ನಿರ್ವಹಣೆ ಮತ್ತು ಅಂಗನವಾಡಿಗಳ ಅಭಿವೃದ್ದಿಗೆ ನಗರಸಭೆ ಹೆಚ್ಚಿನ ಒತ್ತು ನೀಡಬೇಕು ಎಂದರು.

ಪ್ರತಿಭಟನೆಯನ್ನು ಉದ್ದೇಶಿಸಿ ಕೆಪಿಸಿಸಿ ಕಾರ್ಯದರ್ಶಿ ಡಾ. ರಾಜನಂದಿನಿ ಕಾಗೋಡು ಮಾತನಾಡಿದರು. ಪ್ರಮುಖರಾದ ಕೆ.ಹೊಳೆಯಪ್ಪ, ವೆಂಕಟೇಶ್ ಜಿ., ಪಾರ್ವತಿ ಬೇಸೂರು, ಸುಭಾಷ್ ಎಲ್.ವಿ., ಪರಿಮಳ, ಮಹೇಂದ್ರ, ಐ.ಬಿ.ಪಟಗಾರ್, ವಿಜಯಮೂರ್ತಿ, ನಾರಾಯಣ ಅರಮನೆಕೇರಿ, ಅರುಣ್, ಸುರೇಶ್ ಇನ್ನಿತರರು ಹಾಜರಿದ್ದರು.

ನಗರವ್ಯಾಪ್ತಿಯ ಬಹುತೇಕ ಬಡಾವಣೆಗಳಲ್ಲಿ ರಸ್ತೆ ಚರಂಡಿಗಳು ಸಂಪೂರ್ಣ ಹಾಳಾಗಿದ್ದು, ಜನ ಹಾಗೂ ವಾಹನ ಸಂಚಾರ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ರಸ್ತೆ, ಉದ್ಯಾನವನ ಇನ್ನಿತರೆ ಅಭಿವೃದ್ದಿ ಪಡಿಸಬೇಕಾದ ನಗರಸಭೆ ಆಡಳಿತ ಸೇತುವೆಗೆ ಕೇಸರಿ ಬಣ್ಣ ಹಚ್ಚುತ್ತಿದೆ. ಒಂದರ್ಥದಲ್ಲಿ ಹುಚ್ಚರ ರೀತಿ ನಗರಸಭೆ ಆಡಳಿತ ಕಾರ್ಯನಿರ್ವಹಿಸುತ್ತಿರುವುದು ಬೇಸರದ ಸಂಗತಿಯಾಗಿದೆ

– ಕಾಗೋಡು ತಿಮ್ಮಪ್ಪ ,

Ad Widget

Related posts

ವಿದ್ಯುತ್ ಇಲ್ಲ – ದಸರಾಕ್ಕೆ ಅನುದಾನ ಇಲ್ಲ, ರಾಜ್ಯ ಸರ್ಕಾರದ ನಿಲುವಿಗೆ ಕೆ.ಬಿ. ಪ್ರಸನ್ನಕುಮಾರ್ ಖಂಡನೆ

Malenadu Mirror Desk

ಮಾನವೀಯತೆ ಕಟ್ಟಿಕೊಡುವ ಶಿಕ್ಷಣದ ಅಗತ್ಯವಿದೆ ,ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿಖ್ಯಾತನಂದ ಸ್ವಾಮೀಜಿ ಅಭಿಮತ

Malenadu Mirror Desk

ಮಲೆನಾಡಿನಲ್ಲಿ ಬಿರುಸಿನ ಮತ ಸಂಭ್ರಮ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.