Malenadu Mitra
ರಾಜ್ಯ ಶಿವಮೊಗ್ಗ

ಮಧ್ಯಕರ್ನಾಟಕದಲ್ಲಿ ಮುಂದುವರಿದ ಬಿಜೆಪಿ ಪ್ರಾಬಲ್ಯ: ಅರುಣ್, ನವೀನ್ ಹಾಗೂ ಪ್ರಾಣೇಶ್ ಆಯ್ಕೆ

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಮದ್ಯಕರ್ನಾಟಕದಲ್ಲಿ ಆಡಳಿತ ಪಕ್ಷ ಬಿಜೆಪಿ ತನ್ನ ಪಾರಮ್ಯ ಮುಂದುವರಿಸಿದೆ. ರಾಜ್ಯದ ಒಟ್ಟು ೨೫ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ೧೨ ಕ್ಷೇತ್ರ ಗೆದ್ದಿರುವ ಬಿಜೆಪಿಯದು ಹೇಳಿಕೊಳ್ಳುವಂತಹ ಸಾಧನೆ ಅಲ್ಲವಾದರೂ, ಶಿವಮೊಗ್ಗ ,ಚಿಕ್ಕಮಗಳೂರು ಮತ್ತು ಚಿತ್ರದುರ್ಗ ಕ್ಷೇತ್ರದಲ್ಲಿ ಜಯಬೇರಿ ಬಾರಿಸಿದೆ. ಪ್ರತಿಪಕ್ಷದ ಕಾಂಗ್ರೆಸ್ ಕೂಡಾ ದಿಟ್ಟ ಹೋರಾಟ ನಡೆಸಿದ್ದು, ಚಿಕ್ಕಮಗಳೂರಿನಲ್ಲಿ ಕೇವಲ ನಾಲ್ಕು ಮತಗಳ ಅಂತರಲ್ಲಿ ಪರಾಭವಗೊಂಡಿದೆ. ಶಿವಮೊಗ್ಗ ಹಾಗೂ ಚಿತ್ರದುರ್ಗ ಕ್ಷೇತ್ರಗಳಲ್ಲಿ ಬಿಜೆಪಿ ತನ್ನ ಬಿಗಿಹಿಡಿತವನ್ನು ಮುಂದುವರಿಸಿದೆ.
ಶಿವಮೊಗ್ಗ ಕ್ಷೇತ್ರದಲ್ಲಿ ಡಿ.ಎಸ್.ಅರುಣ್ ಹಾಗೂ ಚಿತ್ರದುರ್ಗದ ನವೀನ್ ಕೆ.ಎಸ್. ಅವರುಗಳು ಇದೇ ಮೊದಲ ಬಾರಿ ಮೇಲ್ಮನೆ ಪ್ರವೇಶ ಮಾಡಿದ್ದರೆ, ಚಿಕ್ಕಮಗಳೂರಿನ ಎಂ.ಕೆ.ಪ್ರಾಣೇಶ್ ಅವರು ಎರಡನೇ ಬಾರಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಪ್ರತಿಷ್ಠೆಯಾಗಿದ್ದ ಶಿವಮೊಗ್ಗ ಕ್ಷೇತ್ರ


ಆರುಬಾರಿ ಮೇಲ್ಮನೆ ಸದಸ್ಯರಾಗಿದ್ದ ಡಿ.ಹೆಚ್.ಶಂಕರಮೂರ್ತಿ ಅವರ ಪುತ್ರ ಡಿ.ಎಸ್.ಅರುಣ್ ಅವರು ಕಣಕ್ಕಿಳಿದಿದ್ದ ಕಾರಣ ಶಿವಮೊಗ್ಗ ಕ್ಷೇತ್ರ ಒಂದು ಪ್ರತಿಷ್ಠೆಯ ಕ್ಷೇತ್ರವಾಗಿತ್ತು. ಪಕ್ಷದಲ್ಲಿ ಕಣಕ್ಕಿಳಿಯಲು ಪೈಪೋಟಿ ಇದ್ದರೂ, ಶಂಕರಮೂರ್ತಿ ಅವರ ಕುಟುಂಬದ ಪಕ್ಷ ನಿಷ್ಠೆ ಮತ್ತು ಪ್ರಭಾವದ ಕಾರಣದಿಂದ ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದರು. ಗ್ರಾಮಿಣ ರಾಜಕಾರಣ ಗೊತ್ತಿಲ್ಲ ಮತ್ತು ನಗರ ಕೇಂದ್ರಿತ ಚಟುವಟಿಕೆಗಳಲ್ಲಿ ಮಾತ್ರ ಇರುವ ಅರುಣ್ ಅವರು ಸೂಕ್ತ ಅಭ್ಯರ್ಥಿ ಅಲ್ಲ ಎಂದು ವಿರೋಧಿಗಳು ಪ್ರಚಾರ ಮಾಡಿದರೂ, ಬಿಜೆಪಿಯ ಸಂಘಟನಾ ಶಕ್ತಿ ಅವರನ್ನು ಗೆಲುವಿನ ಗುರಿ ಮುಟ್ಟಿಸಿದೆ.
ಶಿವಮೊಗ್ಗ ಕ್ಷೇತ್ರ ವ್ಯಾಪ್ತಿಗೆ ಬರುವ ಒಟ್ಟು ೯ ಶಾಸಕರಲ್ಲಿ ೮ ಮಂದಿ ಬಿಜೆಪಿಯವರಿದ್ದು, ಇಬ್ಬರು ಸಂಸದರೂ ಬಿಜೆಪಿಯವರಾಗಿದ್ದರು. ಎಲ್ಲಾ ಶಾಸಕರುಗಳು ಕೂಡಾ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ನಿರಂತರ ಸಂಪರ್ಕ ಹೊಂದಿದ್ದ ಕಾರಣ ಅವರ ಮನವೊಲಿಸುವಲ್ಲಿ ಶಾಸಕರುಗಳು ಯಶಸ್ವಿಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ , ಸಚಿವರಾದ ಕೆ.ಎಸ್. ಈಶ್ವರಪ್ಪ, ಆರಗ ಜ್ಞಾನೇಂದ್ರ, ಶಾಸಕರಾದ ಹರತಾಳು ಹಾಲಪ್ಪ, ಕುಮಾರಬಂಗಾರಪ್ಪ, ಅಶೋಕ್ ನಾಯ್ಕ್ ಬೆನ್ನಿಗೆ ನಿಂತು ಅರುಣ್ ಪರ ಕೆಲಸ ಮಾಡಿದ್ದರಿಂದ ಜಯ ಸುಲಭ ಸಾಧ್ಯವಾಗಿದೆ.
ಕಾಂಗ್ರೆಸ್ ಪಕ್ಷದ ಆರ್.ಪ್ರಸನ್ನಕುಮಾರ್ ಅವರು ಯಾವುದೇ ಪೈಪೋಟಿಯಿಲ್ಲದೆ, ಅಭ್ಯರ್ಥಿಯಾಗಿ ಆಯ್ಕೆಯಾಗಿ ಪುನರಾಯ್ಕೆ ಬಯಸಿದ್ದರು. ಕ್ಷೇತ್ರವ್ಯಾಪ್ತಿಯ ಮತದಾರರ ಸಂಪರ್ಕ ಇದ್ದರೂ, ಗೆಲುವು ಸಾಧಿಸಲಾಗಿಲ್ಲ. ಆಡಳಿತ ಪಕ್ಷದ ಶಾಸಕರು ಮತ್ತು ಸಂಸದರ ಬೆಂಬಲಿಗರ ಸಂಪರ್ಕ ಜಾಲದ ಮುಂದೆ ಸೋತು ಹೋದರು.
ಚಿಕ್ಕಮಗಳೂರಲ್ಲಿ ಪ್ರಬಲ ಪೈಪೋಟಿ
ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ತೀವ್ರ ಪೈಪೋಟಿ ಉಂಟಾಗಿದ್ದು, ಎಂ.ಕೆ.ಪ್ರಾಣೇಶ್ ಅವರು ಅಲ್ಪಮತದ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಶಾಸಕರಾದ ಮೂಡಿಗೆರೆ ಎಂ.ಪಿ.ಕುಮಾರಸ್ವಾಮಿ, ಕಡೂರು ಬೆಳ್ಳಿಪ್ರಕಾಶ್ ಎಲ್ಲರ ಪ್ರಭಾವ ಇದ್ದರೂ, ಕಾಂಗ್ರೆಸ್‌ನ ಅಭ್ಯರ್ಥಿ ಗಾಯಿತ್ರಿ ಶಾಂತೇಗೌಡ ಗಣನೀಯ ಪ್ರಮಾಣದ ಮತಗಳನ್ನು ಪಡೆಯುವ ಮೂಲಕ ಪೈಪೋಟಿ ನೀಡಿದ್ದರು. ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯ ವ್ಯಾಪ್ತಿ ಹೊಂದಿದ್ದ ಚಿತ್ರದುರ್ಗ ಕ್ಷೇತ್ರದಲ್ಲಿ ಬಿಜೆಪಿ ಜಯಬೇರಿ ಬಾರಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಹೊರಗಿನವರು ಎಂಬ ವಿಚಾರವನ್ನೇ ಮುನ್ನೆಲೆಗೆ ತಂದು ಮಾಡಿದ್ದ ಪ್ರಚಾರ ಯಶಸ್ವಿಯಾಗಿದೆ. ಒಟ್ಟಿನಲ್ಲಿ ಬಿಜೆಪಿ ಮಧ್ಯಕರ್ನಾಟಕದಲ್ಲಿ ತನ್ನ ಪ್ರಾಬಲ್ಯವನ್ನು ಉಳಿಸಿಕೊಂಡಿದ್ದು, ವಿಧಾನ ಸಭೆ ಚುನಾವಣೆಯಲ್ಲಿಯೂ ಅದನ್ನು ಸಾಬೀತು ಮಾಡಿದೆ.

Ad Widget

Related posts

ಗಿರಿರಾಜ್ ಸುಳಿವಿಲ್ಲ , ಎಟಿಎಂ ನಿಂದ ಹಣ ತೆಗೆದಿರುವ ಮಾಹಿತಿ ಲಭ್ಯ

Malenadu Mirror Desk

ಮಲೆನಾಡಲ್ಲಿ ಮಳೆ ಅಬ್ಬರ: ಲಿಂಗನಮಕ್ಕಿ ಒಳಹರಿವು 242000 ಕ್ಯೂಸೆಕ್, 1800 ಅಡಿ ತಲುಪಿದ ನೀರಿನ ಮಟ್ಟ

Malenadu Mirror Desk

ಸರ್ಕ್ಯೂಟ್ ಹೌಸ್ ಸರ್ಕಲ್ ನಲ್ಲಿ ಭೀಕರ ಅಪಘಾತ- ಇಬ್ಬರು ಯುವಕರು ಸಾವು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.