ಅಕ್ರಮವಾಗಿ ಗಂಧದ ಮರದ ತುಂಡುಗಳನ್ನು ಸಂಗ್ರಹಿಸಿಟ್ಟಿದ್ದ ಆರೋಪಿಗಳನ್ನು ಶಿವಮೊಗ್ಗದ ತುಂಗಾನಗರ ಪೊಲೀಸರು ಬಂಧಿಸಿದ್ದಾರೆ. ಅಪ್ಸರ್ ಬಂಧಿತ ಆರೋಪಿ.
ಆರೋಪಿ ಅಪ್ಸರ್, ಶಿವಮೊಗ್ಗ ಟಿಪ್ಪು ನಗರದ ಏಳನೇ ತಿರುವಿನ ಗೋಡೌನ್‌ನಲ್ಲಿ ಸುಮಾರು 910 ಕೆ.ಜಿ ಶ್ರೀಗಂಧದ ತುಂಡುಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದನು. ಈ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿದ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸೋಮವಾರ ತಡರಾತ್ರಿ ಏಕಾಏಕಿ ದಾಳಿ ನಡೆಸಿದ್ದಾರೆ.
ಸದ್ಯ ಆರೋಪಿಯನ್ನು ಬಂಧಿಸಿ 910 ಕೆ.ಜಿ ಶ್ರೀಗಂಧದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.
ಅಮರಾವತಿಗೆ ಸಾಗಾಟ ಮಾಡುತ್ತಿದ್ದ : ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಿ ಪ್ರಸಾದ್
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಶಿವಮೊಗ್ಗ ಟಿಪ್ಪು ನಗರದ ಗೋದಾಮಿನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದು 910 ಕೆಜಿ ಶ್ರೀಗಂಧದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಿ ಪ್ರಸಾದ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪುನಗರದ ಅಪ್ಸರ್ ಎಂಬಾತನನ್ನು ಬಂಧಿಸಲಾಗಿದೆ. ಈತ ಬೇರೆ ಕಡೆಯಿಂದ ಶ್ರೀಗಂಧದ ತುಂಡುಗಳನ್ನು ತಂದು ಸಂಗ್ರಹಿಸಿ ಅಮರಾವತಿಗೆ ಸಾಗಾಟ ಮಾಡುತ್ತಿದ್ದ ಎಂಬ ಮಾಹಿತಿ ಗೊತ್ತಾಗಿದೆ ಎಂದರು.
ಶ್ರೀಗಂಧ ಸಂಗ್ರಹಿಸಿದ ಬಗ್ಗೆ ಬಂದ ಮಾಹಿತಿ ಅನುಸಾರ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿ ಜಂಟಿ ಕಾರ್ಯಾಚರಣೆ ನಡೆಸಲಾಗಿದೆ. ಅರಣ್ಯ ಇಲಾಖೆಯವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಬಂಧಿತನ ಮೇಲೆ ಪೊಲೀಸ್ ಠಾಣೆಗಳಲ್ಲಿ ಯಾವುದೇ ಪ್ರಕರಣ ಇಲ್ಲ. ಹಿಂದೆ ಆತ ಇಂತಹ ಕೃತ್ಯಗಳಲ್ಲಿ ಭಾಗಿಯಾದ ಮಾಹಿತಿ ಇಲ್ಲ. ಅರಣ್ಯ ಇಲಾಖೆಯಲ್ಲಿ ಈ ಬಗ್ಗೆ ಮಾಹಿತಿಯಿದ್ದು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿಸಿದರು.
೨೦ ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಶ್ರೀಗಂಧದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಕೇರಳ ನೋಂದಣಿಯ ವಾಹನ ಕೂಡ ವಶಕ್ಕೆ ಪಡೆದಿದ್ದು, ಅದರಲ್ಲಿಯೂ ಶ್ರೀಗಂಧದ ತುಂಡುಗಳು ಸಿಕ್ಕಿವೆ ಎಂದರು.