ಪಕ್ಷದ ನಾಯಕರೊಂದಿಗೆ ಚರ್ಚಿಸಿ ಗ್ರಾಮ ಪಂಚಾಯಿತಿಗಳ ಬಲವರ್ಧನೆಗೆ ಕ್ರಮ ಕೈಗೊಳ್ಳುವುದಾಗಿ ವಿಧಾನ ಪರಿಷತ್ ನೂತನ ಸದಸ್ಯ ಡಿ.ಎಸ್. ಅರುಣ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಗ್ರಾಪಂಗಳಲ್ಲಿನ ಸಮಸ್ಯೆಗಳನ್ನು ಈಗಾಗಲೇ ಆಲಿಸಿದ್ದೇನೆ. ಅವುಗಳ ಪರಿಹಾರದ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಗ್ರಾಮದ ಅಭಿವೃದ್ಧಿ ನಿಟ್ಟಿನಲ್ಲಿ ಹೆಚ್ಚಿನ ಸಹಕಾರವಾಗಲಿದೆ ಎಂದರು.
ಗ್ರಾಪಂಗಳಲ್ಲಿ ಗೆದ್ದಿರುವ ಬಹುತೇಕ ಸದಸ್ಯರು ಬಿಜೆಪಿ ಬೆಂಬಲಿತರಾಗಿದ್ದರು. ಅದರಲ್ಲೂ ಪಕ್ಷದ ಬೇರೆ ಬೇರೆ ಸ್ತರದಲ್ಲಿ ಕೆಲಸ ಮಾಡಿದವರಿದ್ದರು. ಹೀಗಾಗಿ ಅವರು ಅರುಣ್ ಎನ್ನುವುದಕ್ಕಿಂತ ಮುಖ್ಯವಾಗಿ ತಾವೇ ಸ್ಪರ್ಧೆ ಮಾಡಿರುವಷ್ಟು ಹುಮ್ಮಸ್ಸಿನಲ್ಲಿ ಚುನಾವಣಾ ಪ್ರಚಾರ ಮಾಡಿ ಮತವನ್ನೂ ಹಾಕಿದ್ದಾರೆಂದು ಹೇಳಿದರು.
ಯಡಿಯೂರಪ್ಪ, ಈಶ್ವರಪ್ಪ, ಸಂಸದ ರಾಘವೇಂದ್ರ, ಪಕ್ಷದ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರು ತಮ್ಮದೇ ಚುನಾವಣೆ ಎಂದು ಕ್ಷೇತ್ರದಲ್ಲಿ ನಿರಂತರವಾಗಿ ಪ್ರವಾಸ ಮಾಡಿ ಪ್ರಚಾರ ಮಾಡಿದ್ದರು. ಅಲ್ಲದೆ ಇದನ್ನು ಪ್ರತಿಷ್ಟೆಯನ್ನಾಗಿ ಪರಿಗಣಿಸಿದ್ದರು ಎಂದರು.
ಚುನಾವಣೆ ಘೋಷಣೆ ನಂತರ ಪಕ್ಷದ ಕಾರ್ಯಕರ್ತರ ಪಡೆ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಲ್ಲದೇ, ಪಕ್ಷದ ವತಿಯಿಂದ ನಡೆದ ಜನ ಸ್ವರಾಜ್ ಸಮಾವೇಶದಲ್ಲಿ ಚುನಾವಣೆಗೆ ಸಿದ್ಧತೆಗಳ ಬಗ್ಗೆ ಚರ್ಚೆ ನಡೆದಿದ್ದು, ಪ್ರತಿ ಪಂಚಾಯಿತಿಗೊಬ್ಬ ಪ್ರಮುಖರನ್ನು ನೇಮಿಸಿದ್ದು, ಹಾಗೂ ಒಗ್ಗಟ್ಟಿನಿಂದ ಕೆಲಸ ಮಾಡಿದ್ದರಿಂದ ಗೆಲುವಿಗೆ ಸಹಕಾರವಾಯಿತು
ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸಲು ಪ್ರಯತ್ನಿಸುತ್ತೇನೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ ಮೇಘರಾಜ್ ಮಾತನಾಡಿ, ವಿಧಾನ ಪರಿಷತ್ ಚುನಾವಣೆಯಲ್ಲಿ ನಿರೀಕ್ಷೆಯಂತೆ ಪಕ್ಷದ ಅಭ್ಯರ್ಥಿ ಅರುಣ್ ಅವರಿಗೆ ಜಯಗಳಿಸಿದ್ದಾರೆ. ಈ ಗೆಲುವಿನ ಹಿಂದೆ ಪಕ್ಷದ ನಾಯಕರಾದ ಬಿ.ಎಸ್.ಯಡಿಯೂರಪ್ಪ, ಕೆ.ಎಸ್. ಈಶ್ವರಪ್ಪ, ಆರಗ ಜ್ಞಾನೇಂದ್ರ, ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರ ಶ್ರಮವಿದೆ.ಅದರಲ್ಲೂ ಪಕ್ಷದ ಕಾರ್ಯರ ಶ್ರಮವಿದೆ ಎಂದರು.
ಈ ಚುನಾವಣೆಯಲ್ಲಿ ಕಾಂಗ್ರೆಸ್ ನವರು ಗೆಲ್ಲುವ ಹಗಲುಗನಸು ಕಾಣುತ್ತಿದ್ದರು. ಮುಂದೆ ಬರಲಿರುವ ಜಿಪಂ ಹಾಗೂ ತಾಪಂ ಚುನಾವಣೆಯಲ್ಲಿಯೂ ಪಕ್ಷದ ಅಭ್ಯರ್ಥಿಗಳು ನಿಶ್ಚಿತವಾಗಿ ಗೆಲುವು ಸಾಧಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಬಿ.ಕೆ. ಶ್ರೀನಾಥ್, ಎಸ್.ಎನ್. ಚನ್ನಬಸಪ್ಪ, ಶಿವರಾಜ್, ಜ್ಞಾನೇಶ್ವರ್, ಸುನೀತಾ ಅಣ್ಣಪ್ಪ, ಎಸ್. ರಮೇಶ್, ವಾಗೀಶ್, ಹೃಷಿಕೇಶ್ ಪೈ, ಎನ್.ಡಿ. ಸತೀಶ್, ಗೀತಾ, ಕೆ.ವಿ. ಅಣ್ಣಪ್ಪ ಇದ್ದರು.
ಯಡಿಯೂರಪ್ಪ, ಈಶ್ವರಪ್ಪ, ಸಂಸದ ರಾಘವೇಂದ್ರ, ಪಕ್ಷದ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರು ತಮ್ಮದೇ ಚುನಾವಣೆ ಎಂದು ಕ್ಷೇತ್ರದಲ್ಲಿ ನಿರಂತರವಾಗಿ ಪ್ರವಾಸ ಮಾಡಿ ಪ್ರಚಾರ ಮಾಡಿದ್ದರು. ಅಲ್ಲದೆ ಇದನ್ನು ಪ್ರತಿಷ್ಟೆಯನ್ನಾಗಿ ಪರಿಗಣಿಸಿದ್ದರು
– ಡಿ.ಎಸ್. ಅರುಣ್