ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕು ಸವಳಂಗ ಸಮೀಪದ ಚಿನ್ನಿ ಕಟ್ಟೆ ಗ್ರಾಮದಲ್ಲಿ ಶುಕ್ರವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದು, ಒಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
ಚಿನ್ನಿಕಟ್ಟೆ ಸೇತುವೆ ಮೇಲ ಎರ್ಟಿಗಾ ಕಾರು ಹಾಗೂ ಸರಕಾರಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಸ್ಥಳದಲ್ಲಿಯೇ ಮೂವರು ಸಾವಿಗೀಡಾದರೆ, ಒಬ್ಬರು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಮೃತರನ್ನು ಭದ್ರಾವತಿ ತಾಲೂಕು ಹೊಳೆಹೊನ್ನೂರು ಸಮೀಪದ ಯಡೇಹಳ್ಳಿಯ ದಾಕ್ಷಾಯಿಣಿ,ಸುಮಾ, ಶಾರದಮ್ಮ ಹಾಗೂ ಚಾಲಕ ಸುನೀಲ್ ಅವರನ್ನು ಮೃತರೆಂದು ಗುರುತಿಸಲಾಗಿದೆ.ಚಿನ್ನಿಕಟ್ಟೆ ಜೋಗದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ಕಾರಿನಲ್ಲಿ ದಾಕ್ಷಾಯಿಣಿ ಮತ್ತಿತರರು ಹೋಗುತ್ತಿದ್ದರೆನ್ನಲಾಗಿದೆ.
ಅಪಘಾತಕ್ಕೊಳಗಾದ ಸರಕಾರಿ ಬಸ್‌ಗೆ ಹಿಂದಿನಿಂದ ಬಂದು ಹೊಡೆದ ಲಾರಿ ಚಾಲಕನಿಗೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಹಿಂದಿನಿಂದ ಲಾರಿ ಡಿಕ್ಕಿಯಾಗಿದ್ದರಿಂದ ಬಸ್ಸಿನಲ್ಲಿದ್ದ ಹಲವರು ಗಾಯಗೊಂಡಿದ್ದಾರೆ. ಆಸ್ಪತ್ರೆಗೆ ದಾಖಲಿಸಲಾಗಿದೆ. ನ್ಯಾಮತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.