ಶಿವಮೊಗ್ಗ ನಗರದ ಫ್ರೀಡಂ ಪಾರ್ಕ್‌ನಲ್ಲಿ ಭಾನುವಾರ ಶ್ವಾನಗಳ ಮೆರವಣಿಗೆ, ನಾನಾ ಜಾತಿಯ ಮುದ್ದು ಸಾಕಿ ನಾಯಿಗಳನ್ನು ಅವುಗಳ ಪೋಷಕರು ಸ್ಪರ್ಧೆಗೆ ಕರೆತಂದು ಸಂಭ್ರಮಿಸಿದರು. ಸಾರ್ವಜನಿಕರು ಕೂಡಾ ಇದೊಂದು ಜಾತ್ರೆಯೆಂದೇ ಭಾವಿಸಿ ತರಾವರಿ ಪ್ರಾಣಿಗಳನ್ನು ನೋಡಿ ಕಣ್ ತುಂಬಿಕೊಂಡರು. ಶಿವಮೊಗ್ಗ ಸ್ಮಾರ್ಟ್ ಸಿಟಿ ಶಿವಮೊಗ್ಗ ಕೆನೆಲ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಡಾಗ್ ಶೋದಲ್ಲಿ 300ಕ್ಕೂ ಅಧಿಕ ಶ್ವಾನಗಳು ಭಾಗವಹಿಸಿದ್ದು ವಿಶೇಷವಾಗಿತ್ತು.
250 ಜನ ಮುಂಚೆಯೇ ಹೆಸರು ನೋಂದಾಯಿಸಿದರೆ, 50 ಜನ ಸ್ಥಳದಲ್ಲೇ ನೋಂದಾಯಿಸಿಕೊಂಡಿದ್ದಾರೆ. ನಾನಾ ಕಡೆಗಳಿಂದ ಶ್ವಾನಗಳನ್ನು ಡಾಗ್ ಶೋಗೆ ಕರೆತರಲಾಗಿದ್ದು, ಬೆಳಗ್ಗೆಯಿಂದಲೇ ಭಾರಿ ಸಂಖ್ಯೆಯಲ್ಲಿಜನರು ನೆರೆದಿದ್ದರು.
ಮಹಾರಾಷ್ಟ್ರ, ತಮಿಳುನಾಡಿನಿಂದಲೂ ಶ್ವಾನಗಳನ್ನು ಕರೆದುಕೊಂಡು ಬರಲಾಗಿತ್ತು. ಜೊತೆಗೆ, ತೀರ್ಥಹಳ್ಳಿಯಿಂದ ೪ ವಿದೇಶಿ ಶ್ವಾನಗಳು ಭಾಗವಹಿಸಿದ್ದವು. ವಿದೇಶಿ ತಳಿಯಾದ ಅಲ್ಲಾಬಾಯ್, ಕಂಗಲ್ ಅನ್ನು ವೀಕ್ಷಿಸುವುದಕ್ಕೆ ಸಾಕಷ್ಟು ಸಂಖ್ಯೆಯಲ್ಲಿಜನರು ಆಗಮಿಸಿದ್ದರು. ವಿವಿಧ ತಳಿಗಳಾದ ಲ್ಯಾಬ್ರಡಾರ್, ಜರ್ಮನ್ ಶೆಪರ್ಡ್, ಬೀಗಲ್, ಮುಧೋಳ್, ಸೈಬೇರಿಯನ್ ಹಸ್ಕಿ, ಪಿಟ್ ಬುಲ್, ರಾಟ್ ವಿಲಾ, ಗೋಲ್ಡನ್ ರೆಟ್ರಿವರ್ ಮತ್ತಿತರ ಶ್ವಾನಗಳು ಡಾಗ್ ಶೋದಲ್ಲಿಭಾಗವಹಿಸಿದ್ದವು.
ಡಾಗ್ ಶೋದಲ್ಲಿಭಾಗವಹಿಸಿ ಗೆದ್ದ ಶ್ವಾನಗಳಿಗೆ ಒಟ್ಟು 1 ಲಕ್ಷ ರೂ. ಮೌಲ್ಯದ ಬಹುಮಾನ ನೀಡಲಾಯಿತು. ಮೊದಲ ಬಹುಮಾನ ಪಡೆದವರಿಗೆ 25000ರೂ., 2ನೇ ಬಹುಮಾನ 20,000ರೂ., 3ನೇ ಬಹುಮಾನ 15,000ರೂ. ನೀಡಲಾಯಿತು. ಜೊತೆಗೆ ಆರು ವಿಭಾಗದಲ್ಲಿ ಬಹುಮಾನಗಳನ್ನು ಕೊಡಲಾಯಿತು. ನಿಗದಿಪಡಿಸಿದಂತೆ ಉತ್ತಮ ಶ್ವಾನಕ್ಕೆ 1000 ರಿಂದ 5000 ರೂ.ವರೆಗೆ ಬಹುಮಾನ ವಿತರಣೆ ಮಾಡಲಾಯಿತು. ಫ್ರೀಡಂ ಪಾರ್ಕ್‌ನಲ್ಲಿಯೇ ಶ್ವಾನದ ಫ್ಯಾಷನ್ ಶೋ ರಾರಯಂಪ್ ವಾಕ್ ಕೂಡ ನಡೆಯಿತು. ಇದನ್ನು ಶ್ವಾನ ಪ್ರಿಯರು ಕಣ್ತುಂಬಿಕೊಂಡರು.