ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಸರ್ಕಾರ ಈಗಾಗಲೇ ಜಾರಿಗೆ ತಂದಿರುವ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಇ.ಎನ್. ರಮೇಶ್(ಇಕ್ಕೇರಿ) ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರ, ರಾಜ್ಯ, ಜಿಲ್ಲಾ ಕಾಂಗ್ರೆಸ್ ನಾಯಕರು ನನ್ನನ್ನು ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಹಾಗಾಗಿ ಎಲ್ಲಾ ನಾಯಕರಿಗೆ ನನ್ನ ಕೃತಜ್ಞತೆಗಳು ಎಂದರು.
ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ಕಾಂಗ್ರೆಸ್ ಸರ್ಕಾರ ಸುಮಾರು 3 ಕೋಟಿ ರೂ.ಗೂ ಹೆಚ್ಚು ಹಣವನ್ನು ಖರ್ಚು ಮಾಡಿದ್ದು, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಕಾಳಜಿ ವಹಿಸಿತ್ತು. ಶಿವಮೊಗ್ಗ ಜಿಲ್ಲೆಗೂ ಸಾಕಷ್ಟು ಹಣ ಬಿಡುಗಡೆ ಮಾಡಿತ್ತು. ಆದರೆ, ಬಿಜೆಪಿ ಸರ್ಕಾರ2021-22 ನೇ ಸಾಲಿನಲ್ಲಿ ಯಾವುದೇ ಹಿಂದುಳಿದ ಸಮಾಜಕ್ಕೆ ಅನುದಾನವನ್ನು ಬಿಡುಗಡೆ ಮಾಡಿಲ್ಲ ಎಂದು ಅವರು ಆರೋಪಿಸಿದರು.
ದೇವರಾಜ ಅರಸ್ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ವಿಶ್ವಕರ್ಮ, ಉಪ್ಪಾರ, ಅಂಬಿಗರ ಚೌಡಯ್ಯ, ಸವಿತಾ ಸಮಾಜ, ಮಡಿವಾಳ ಮಾಚಿದೇವ ಮತ್ತೆ ಅಲೆಮಾರಿ ಅಭಿವೃದ್ಧಿ ನಿಗಮಗಳೆಲ್ಲವನ್ನೂ ಒಟ್ಟಿಗೆ ಸೇರಿಸಿ ಕೇವಲ 2 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಈ ಅನುದಾನ ಯಾವುದಕ್ಕೂ ಸಾಲದಾಗಿದೆ ಎಂದು ಅವರು ದೂರಿದರು.
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆಯಡಿ ಊಟ ಮತ್ತು ವಸತಿಗಾಗಿ ಕೇವಲ1500 ರೂ. ನೀಡುತ್ತಿದ್ದು, ಇದನ್ನು ಎರಡೂವರೆ ಸಾವಿರ ರೂ.ಗಳಿಗೆ ಹೆಚ್ಚಿಸಬೇಕು, ದೇವರಾಜ ಅರಸು ಪ್ರತಿಭಾ ಪುರಸ್ಕಾರದಲ್ಲಿ 10 ನೇ ತರಗತಿ ಮತ್ತು ಪದವಿ ಪೂರ್ವ ತರಗತಿಗಳಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ 10 ಸಾವಿರ ರೂ. ಪ್ರೋತ್ಸಾಹಧನ ನೀಡುತ್ತಿದ್ದು, ಅದನ್ನು 20 ಸಾವಿರ ರೂ.ಗೆ ಹೆಚ್ಚಿಸಬೇಕು ಎಂದು ಅವರು ಒತ್ತಾಯಿಸಿದರು.
ಕಾಂಗ್ರೆಸ್ ಸರ್ಕಾರದಲ್ಲಿ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಜಾತಿ ಆಧಾರಿತ ಜನಗಣತಿ ಸಮೀಕ್ಷೆ ವರದಿಯನ್ನು ಸಿದ್ಧಪಡಿಸಿತ್ತು. ಆದರೆ ಈಗಿನ ಬಿಜೆಪಿ ಸರ್ಕಾರ ಆ ವರದಿಯನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಈ ವರದಿ ಆಧಾರದಲ್ಲಿ ಎಲ್ಲಾ ಹಿಂದುಳಿದ ವರ್ಗಗಳ ಅಭಿವೃದ್ಧಿಯಾಗಲಿದೆ. ಆದ್ದರಿಂದ ಆಡಳಿತಾರೂಢ ಸರ್ಕಾರ ಕೂಡಲೇ ಜಾತಿ ಆಧಾರಿತ ಜನಗಣತಿ ಸಮೀಕ್ಷೆಯನ್ನು ಬಿಡುಗಡೆಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಕಾಂಗ್ರೆಸ್ ಘಟಕದ ಉಪಾಧ್ಯಕ್ಷ ಉಮಾಪತಿ ಮಾತನಾಡಿ, ಇಕ್ಕೇರಿ ರಮೇಶ್ ಅವರು ಜಿಲ್ಲಾಧ್ಯಕ್ಷರಾಗಿ ನೇಮಕವಾಗಿರುವುದು ಸಂತೋಷದ ವಿಷಯವಾಗಿದೆ. ಅವರಿಂದ ಮತ್ತಷ್ಟು ಕೆಲಸಗಳನ್ನು ನಿರೀಕ್ಷಿಸಲಾಗಿದೆ. ಅವರ ಆಯ್ಕೆಗೆ ಜಿಲ್ಲಾ ಮತ್ತು ರಾಜ್ಯ ನಾಯಕರು ಕಾರಣರಾಗಿದ್ದಾರೆ. ಅವರಿಗೆ ನಮ್ಮ ಅಭಿನಂದನೆಗಳು ಎಂದರು.
ಸರ್ಕಾರ ರೈತರ ಬಗ್ಗೆ ನಿರ್ಲಕ್ಷ್ಯ ಭಾವನೆ ತಾಳುತ್ತಿದೆ. ರೈತರ ಬೆಳೆಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಆದಷ್ಟು ಬೇಗ ಖರೀದಿ ಕೇಂದ್ರಗಳನ್ನು ಆರಂಭಿಸಿ ಬೆಂಬಲ ಬೆಲೆಯಲ್ಲಿ ಬೆಳೆ ಖರೀದಿಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಮುಖಂಡರಾದ ಶ್ರೀಧರಮೂರ್ತಿ ನವಿಲೆ, ರಮೇಶ್ ಶಂಕರಘಟ್ಟ, ಹಿಂದುಳಿದ ಜಾತಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಸ್.ಬಿ. ಅಶೋಕ್ ಕುಮಾರ್, ಎನ್.ಪಿ. ಧರ್ಮರಾಜ್ ಇದ್ದರು.
previous post