Malenadu Mitra
ರಾಜ್ಯ ಶಿವಮೊಗ್ಗ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ದೇಶದಿಂದ ಗಡಿಪಾರು ಮಾಡಬೇಕು: ಎಸ್.ಎನ್. ಚನ್ನಬಸಪ್ಪ

ಮತಾಂತರ ನಿಷೇಧ ಕಾಯ್ದೆ ವಿರೋಧಿಸುತ್ತಿರುವ ವಿಪಕ್ಷ ನಾಯಕ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ದೇಶದಿಂದ ಗಡಿಪಾರು ಮಾಡಬೇಕೆಂದು ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್.ಎನ್. ಚನ್ನಬಸಪ್ಪ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮತಾಂತರ ನಿಷೇಧ ಕಾಯ್ದೆಗೆ ಕಾಂಗ್ರೆಸ್ ನವರಿಗೆ ಕಸಿವಿಸಿ ಏಕೆ ಎಂದು ಅರ್ಥವಾಗುತ್ತಿಲ್ಲ. ಹೀಗೆಂದು ಹೇಳುವವರು ಸಂವಿಧಾನಕ್ಕೆ ವಿರೋಧವಾಗಿಯೇ ನಡೆದುಕೊಳ್ಳುತ್ತಿದ್ದಾರೆ. ಮತಾಂತರ ಎಂದರೆ ಅದು ರಾಷ್ಟ್ರಾಂತರವೇ ಆಗಿದೆ. ಅಂಬೇಡ್ಕರ್ ಮತಾಂತರಗೊಂಡರೂ ಕೂಡ ಅವರು ಯಾವುದೇ ಕ್ರಿಶ್ಚಿಯನ್ ಅಥವಾ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಲಿಲ್ಲ. ಹಿಂದೂ ಧರ್ಮದ ಭಾಗವೇ ಆಗಿದ್ದ ಬೌದ್ಧ ಧರ್ಮಕ್ಕೆ ಮತಾಂತರವಾದರು. ಕಾಂಗ್ರೆಸ್ ನವರು ಅಂಬೇಡ್ಕರ್ ಅವರ ಹೆಸರನ್ನು ಮಧ್ಯ ತರುವುದರಲ್ಲಿ ಯಾವ ಅರ್ಥವೂ ಇಲ್ಲ ಎಂದರು.

ಇತ್ತೀಚೆಗೆ ದೇಶದಲ್ಲಿ ಮತಾಂತರ ಹೆಚ್ಚಾಗುತ್ತಿದೆ. ಇಲ್ಲದ ಆಮಿಷಗಳನ್ನೊಡ್ಡಿ ಮತಾಂತರ ಮಾಡುವಲ್ಲಿ ಕ್ರಿಶ್ಚಿಯನ್ ಮಿಷನರಿಗಳು ಸೇರಿದಂತೆ ಹಲವರು ಸಕ್ರಿಯವಾಗಿದ್ದಾರೆ. ಕಾಂಗ್ರೆಸ್ ಸರ್ಕಾರ ಇಷ್ಟು ವರ್ಷಗಳ ತನಕ ಆಡಳಿತ ನಡೆಸಿದರೂ ಕೂಡ ಮತಾಂತರ ತಡೆಯುವಲ್ಲಿ ಸಂಪೂರ್ಣ ವಿಫಲವಾಗಿದೆ. ಈಗ ಬಿಜೆಪಿ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಹೊರಟಿರುವುದು ಅತ್ಯಂತ ಸ್ವಾಗತ ವಿಷಯವಾಗಿದೆ. ಇದರಿಂದ ಹಿಂದೂ ಸಮಾಜ ಮತ್ತಷ್ಟು ಗಟ್ಟಿಯಾಗುತ್ತದೆ ಎಂದರು.

ಶಿವಮೊಗ್ಗದಲ್ಲಿಯೇ ಬಾಪೂಜಿ ನಗರ, ಶಾಂತಿನಗರ ಸೇರಿದಂತೆ ಹಲವು ಕಡೆ ಮತಾಂತರ ನಡೆಯುತ್ತಿದೆ. ಕ್ರಿಶ್ಚಿಯನ್ ಶಾಲೆಗಳು ಮಕ್ಕಳಲ್ಲಿ ಕ್ರಿಶ್ಚಿಯನ್ ಧರ್ಮವನ್ನು ಸದ್ದಿಲ್ಲದೇ ಬೋಧಿಸುತ್ತಿವೆ. ಆದರೂ ಕೂಡ ಈ ಕಾಂಗ್ರೆಸ್ ನವರಿಗೆ ಇದು ಅರ್ಥವಾಗುತ್ತಿಲ್ಲ. ಕಾಂಗ್ರೆಸ್ ನಾಯಕರು ಇತ್ತೀಚೆಗಷ್ಟೇ ಕ್ರಿಶ್ಚಿಯನ್ ಧರ್ಮಗುರುಗಳ ಭೇಟಿ ಮಾಡಿದ್ದು, ಗುಪ್ತವಾಗೇನೂ ಉಳಿದಿಲ್ಲ. ಪಾದ್ರಿಗಳ ಜೊತೆ ಚರ್ಚಿಸಿ ಅವರ ಆದೇಶದಂತೆ ಸದನದಲ್ಲಿ ಈ ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ ಎಂದು ಆರೋಪಿಸಿದರು.

ಗೋಹತ್ಯೆ ನಿಷೇಧ ಕಾಯ್ದೆ ಮತ್ತು ಮತಾಂತರ ನಿಷೇಧ ಕಾಯ್ದೆ ಈ ಎರಡನ್ನೂ ವಿರೋಧಿಸುವವರು ಈ ದೇಶದಲ್ಲಿರಲು ಯೋಗ್ಯರಲ್ಲ. ಇವರನ್ನು ಗಡಿಪಾರು ಮಾಡಬೇಕು. ಬಿಜೆಪಿ ಈ ಕಾಂಗ್ರೆಸ್ ನವರಿಗೆ ಏನು ಅನ್ಯಾಯ ಮಾಡಿದೆ ಎಂದೇ ಗೊತ್ತಾಗುತ್ತಿಲ್ಲ. ಕೇವಲ ರಾಜಕಾರಣಕ್ಕಾಗಿ, ಮತಗಳ ಓಲೈಕೆಗಾಗಿ ಇದನ್ನು ವಿರೋಧಿಸುತ್ತಿದ್ದಾರೆ. ಕಾಂಗ್ರೆಸ್ ಮುಖಂಡರಾದ ಸಿದ್ಧರಾಮಯ್ಯ, ಡಿ.ಕೆ. ಶಿವಕುಮಾರ್ ಸೇರಿದಂತೆ ವಿರೋಧಿಸುತ್ತಿರುವ ಎಲ್ಲರನ್ನು ದೇಶದಿಂದಲೇ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.

ಮಹಾನಗರ ಪಾಲಿಕೆ ಮೇಯರ್ ಸುನಿತಾ ಅಣ್ಣಪ್ಪ ಅವರು ತಮಗೆ ಕೊರೋನಾ ಪಾಸಿಟಿವ್ ಬಂದಿರುವುದನ್ನು ಗಮನಿಸಿಯೇ ಪ್ರಧಾನಿ ಮೋದಿ ಅವರು ವಾರಣಾಸಿಯಲ್ಲಿ ಕರೆದಿದ್ದ ಮೇಯರ್ ಗಳ ಸಭೆಗೆ ಹೋಗಲಿಲ್ಲ. ಅದರ ಬದಲು ಸಂದರ್ಭವನ್ನು ಅರಿತು ತಮಗೆ ಒದಗಿ ಬಂದ ಅವಕಾಶವನ್ನು ಮರೆತು ಮನೆಯಲ್ಲಿ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತು ಪ್ರಾಮಾಣಿಕವಾಗಿ ನಡೆದುಕೊಂಡಿದ್ದಾರೆ.  ಆದರೆ, ಆಮ್ ಆದ್ಮಿ ಪಕ್ಷದವರು ಮೇಯರ್ ವಿರುದ್ಧ ದೂರು ಕೊಡಲು ಹೊರಟಿರುವುದನ್ನು ನೋಡಿದರೆ ಇವರಿಗೆ ಬೇರೆ ಏನೂ ಕೆಲಸವಿಲ್ಲವೆಂದು ಕಾಣುತ್ತದೆ. ತಮಗೆ ಕೊರೋನಾ ಪಾಸಿಟಿವ್ ಇರುವುದು ಗೊತ್ತಾದ ತಕ್ಷಣದಿಂದಲೇ ಎಚ್ಚರಿಕೆಯಿಂದ ವರ್ತಿಸಿದ್ದಾರೆ ಎಂದು ಎಸ್.ಎನ್ ಚನ್ನಬಸಪ್ಪ ಸಮರ್ಥನೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಜಗದೀಶ್, ಮಾಜಿ ಅಧ್ಯಕ್ಷ ಎನ್.ಜೆ. ನಾಗರಾಜ್, ಎಂ.ಜಿ. ಬಾಲು ಇದ್ದರು.

ಸ್ವ ಇಚ್ಛೆಯಿಂದ ಮತಾಂತರಗೊಳ್ಳಬಹುದು ಎಂದಾಗಿದ್ದರೂ ಕೂಡ ಅದು ಸ್ವೇಚ್ಛಾಚಾರವಾಗುತ್ತದೆ. ಇದು ಹಿಂದೂ ದೇಶ. ಇಲ್ಲಿ ಹಿಂದೂಗಳಿಗೆ ಆದ್ಯತೆ ಇರಬೇಕು. ಹಾಗಾಗಿ ಬಿಜೆಪಿ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತಂದಾದರೂ ಸರಿಯೇ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿ ಮಾಡಿಯೇ ಮಾಡುತ್ತೇವೆ. ಹಿಂದೂಗಳೇ ಇರುವ ಈ ದೇಶದಲ್ಲಿ ಹಿಂದೂಗಳ ಪರವಾಗಿ ಬರುವ ಕಾಯ್ದೆಗಳನ್ನು ಒಪ್ಪಿಕೊಳ್ಳುವುದೇ ಆರ್.ಎಸ್.ಎಸ್. ಅಜೆಂಡಾ ಆಗಿದೆ. ಹಾಗಾಗಿಯೇ ಮುಂದಿನ ದಿನಗಳಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ಈ ಕಾಯ್ದೆಯನ್ನು ಜಾರಿಗೆ ತರುತ್ತೇವೆ. ಜೊತೆಗೆ ಗೋಹತ್ಯೆ ನಿಷೇಧ ಕಾಯ್ದೆಯನ್ನು ಕೂಡ ಮತ್ತಷ್ಟು ಬಿಗಿಗೊಳಿಸುತ್ತೇವೆ.

– ಎಸ್.ಎನ್. ಚನ್ನಬಸಪ್ಪ

Ad Widget

Related posts

ಬಟ್ಟೆಮಲ್ಲಪ್ಪದಲ್ಲಿ ಅಡಕೆ ಕಳ್ಳನ ಬಂಧನ

Malenadu Mirror Desk

ಬಂಡೆ ಕೂಲಿ ಕಾರ್ಮಿಕರ ಸಮಸ್ಯೆ ಇತ್ಯರ್ಥ ಆಗದಿದ್ದಲ್ಲಿ  ಉಪವಾಸ ಸತ್ಯಾಗ್ರಹ , ಪ್ರತಿಭಟನೆಯಲ್ಲಿ ಸಭೆಯಲ್ಲಿ ಕಿಮ್ಮನೆ ಎಚ್ಚರಿಕೆ

Malenadu Mirror Desk

ಸಂವಿಧಾನ ದುರ್ಬಳಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ, ಜು.೧೨ ರಂದು ಗಾಂಧಿಪ್ರತಿಮೆ ಎದುರು ಸತ್ಯಾಗ್ರಹ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.