ಮಾನವ ಹಕ್ಕುಗಳು, ಇ- ಗವರ್ನೆನ್ಸ್, ಆರ್ ಟಿ ಐ ಜಾಗೃತಿ ಕಾರ್‍ಯಕ್ರಮದಲ್ಲಿ ನ್ಯಾ. ಸರಸ್ವತಿ ಹೇಳಿಕೆ
ಕಾನೂನಿನ ಬಗ್ಗೆ ಗೌರವವಿರಲಿ, ಬಿಡಲಿ, ಹುಟ್ಟಿನಿಂದ ಸಾವಿನವರೆಗೆ ಅದನ್ನು ಪಾಲಿಸಬೇಕು. ನಮಗೆ ಅನ್ಯಾಯವಾದಾಗ ಅದಕ್ಕೆ ಪರಿಹಾರ ಪಡೆಯಲು ಕಾನೂನು ಬೇಕು. ಸಮಾಜದಲ್ಲಿ ಗೌರವಯುತವಾಗಿ ಬಾಳಲು ಕಾನೂನಿನ ಅವಶ್ಯಕತೆ ಇದೆ ಎಂದು ಸಿವಿಲ್ ನ್ಯಾಯಾಧೀಶೆ ಮತ್ತುಶಿವಮೊಗ್ಗ ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್‍ಯದರ್ಶಿ ಕೆ. ಎನ್. ಸರಸ್ವತಿ ಹೇಳಿದರು.
ಇಲ್ಲಿನ ಕುವೆಂಪು ಬಿ. ಇಡಿ ಕಾಲೇಜಿನಲ್ಲಿ ಮಾನವ ಹಕ್ಕುಗಳು, ಇ- ಗವರ್ನೆನ್ಸ್, ಆರ್ ಟಿ ಐ ಮತ್ತು ಸಿವಿಸಿ ಕುರಿತ ಜಾಗೃತಿ ಕಾರ್‍ಯಕ್ರಮವನು ಉದ್ಘಾಟಿಸಿ ಅವರು ಮಾತನಾಡಿದರು.
೧೯೯೩ರಲ್ಲಿ ಮಾನವ ಹಕ್ಕುಗಳ ರಕ್ಷಣಾ ಕಾಯ್ದೆ ಜಾರಿಯಾಗಿದೆ. ಆನಂತರ ಮಾನವ ಹಕ್ಕುಗಳು ಉಲ್ಲಂಘವಾದಾಗ ಪರಿಹಾರ ಪಡೆಯಲಾಗುತ್ತಿದೆ. ಎಲ್ಲ ಕಾನೂನಿಗಿಂತ ಅಗ್ರಮಾನ್ಯ ಸ್ಥಾನ ಮಾನವ ಹಕ್ಕಿಗಿದೆ. ಸಂತ್ರಸ್ತ ವ್ಯಕ್ತಿಯ ರಕ್ಷಣೆಯ ಜೊತೆಗೆ ಹಕ್ಕನ್ನೂ ಸಹ ಇದು ರಕ್ಷಿಸುತ್ತಿದೆ ಎಂದು ಹೇಳಿದರು.
ಮಾನವ ಹಕ್ಕು, ಇ -ಗವರ್‍ನೆನ್ಸ್ ಮತ್ತು ಆರ್‌ಟಿಐ ಕುರಿತು ಮಾತನಾಡಿದ ಅಪರ ಜಿಲ್ಲಾಧಿಕಾರಿ ನಾಗೇಂದ್ರ ಎಫ್. ಹೊನ್ನಳ್ಳಿ, ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾನವ ಹಕ್ಕುಗಳ ಉಲ್ಲಂಘನೆ ಆಗುವುದಿಲ್ಲ. ಯಾವುದೇ ವೃತ್ತಿ ಇರಲಿ, ಅದನ್ನು ಮೊದಲು ಗೌರವಿಸಬೇಕು. ಅನೇಕ ಮಹನೀಯರು ಮಾನವ ಹಕ್ಕುಗಳ ಬಗ್ಗೆ ಹೋರಾಟ ಮಾಡಿ ಜಾರಿಗೊಳಿಸಿದ್ದಾರೆ. ಆದರೆ ಅದನ್ನು ಪಾಲಿಸುವಲ್ಲಿ ನಾವು ವಿಫಲರಾಗಿದ್ದೇವೆ ಎಂದರು.
ಹಕ್ಕುದಾರರ ಮೇಲೆ ಹಲ್ಲೆ ಹೆಚ್ಚುತ್ತಿದೆ. ಇನ್ನೊಂದೆಡೆ, ಅಧಿಕಾರಿಗಳ ಮೇಲೆ ಒತ್ತಡ ಹೆಚ್ಚುತ್ತಿದೆ. ಇದನ್ನೆಲ್ಲ ತಪ್ಪಿಸಬೇಕಾದರ ಕಾನೂನಿನ ಜಾಗೃತಿ ಬಗ್ಗೆ ಅರಿತುಕೊಳ್ಳಬೇಕಿದೆ. ಎಲ್ಲ ಕ್ಷೇತ್ರಗಳಲ್ಲೂ ಇಂದು ನೈತಿಕ ಅಧಃಪತನವಾಗುತ್ತಿದೆ. ವೃತ್ತಿ ಎಂದರೆ ಹಣಗಳಿಸಲು ಎಂಬ ಭಾವನೆ ಬಂದಿದೆ. ಹಣದ ಬದಲು ಜನರನ್ನು ಗಳಿಸುವ ಕೆಲಸ ಆಗಬೇಕಿದೆ ಎಂದರು.
ಇ ಗವರ್‍ನೆನ್ಸ್ ಮೂಲಕ ಎರಡು ನಿಮಿಷದಲ್ಲಿ ಕೆಲಸ ಆಗುತ್ತಿದೆ. ಒಂದು ದಶಕದಿಂದ ಇದು ಜಾರಿಯಲ್ಲಿದೆ. ಜನರ ಕೆಲಸಗಳು ತ್ವರಿತಗತಿಯಲ್ಲಿ ಈಗ ನಡೆಯುತ್ತಿವೆ ಎಂದ ಅವರು, ಆರ್‌ಟಿಐ ಮೂಲಕ ನಮಗೆ ಬೇಕಾದ ಮಾಹಿತಿಯನ್ನು ಪಡೆಯಬಹುದಾಗಿದೆ. ಇದರಿಂದ ಅನೇಕ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಮತ್ತು ಭ್ರಷ್ಟಾಚಾರ ತಡೆಗಟ್ಟಲು, ಅಕ್ರಮ ನಿಲ್ಲಿಸಬಹುದಾಗಿದೆ ಎಂದರು.
ಅಧ್ಯಕ್ಷತೆಯನ್ನು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎನ್. ಎಚ್. ಶ್ರೀಕಾಂತ್ ವಹಿಸಿದ್ದರು. ವೇದಿಕೆಯಲ್ಲಿ ಉಪನ್ಯಾಸಕರಾಗಿ ನ್ಯಾಯವಾದಿಗಳಾದ ಚನ್ನಬಸಪ್ಪ ಮತ್ತು ವಸಂತಕುಮಾರ್ ಹಾಜರಿದ್ದರು. ಕುವೆಂಪು ವಿವಿ ಎನ್‌ಎಸ್‌ಎಸ್ ಸ
ಂಯೋಜನಾಧಿಕಾರಿ ನಾಗರಾಜ ಪರಿಸರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್. ದೇವೇಂದ್ರಪ್ಪ ಹಾಜರಿದ್ದರು. ಪ್ರಾಚಾರ್‍ಯ ಜಿ. ಮಧು ಪ್ರಾಸ್ತಾವಿಕ ಮಾತನಾಡಿದರು. ಎನ್‌ಎಸ್‌ಎಸ್ ಕಾರ್‍ಯಕ್ರಮಾಧಿಕಾರಿ ಎನ್. ಜೆ. ಪ್ರಕಾಶ್ ಸ್ವಾಗತಿಸಿದರು.