ಶಿಕ್ಷಣದಿಂದ ಮಾತ್ರ ಸಮಾಜವನ್ನು ಶಾಶ್ವತವಾಗಿ ಮೇಲೆತ್ತಬಹುದು ಎಂದು ಸೋಲೂರು ಆರ್ಯಈಡಿಗ ಮಹಾ ಸಂಸ್ಥಾನದ ನಿಯೋಜಿತ ಪೀಠಾಧಿಪತಿ ಶ್ರೀ ವಿಖ್ಯಾತನಂದ ಸ್ವಾಮೀಜಿ ಹೇಳಿದರು.
ಫೆ.2 ರಂದು ಸೋಲೂರಿನಲ್ಲಿ ನಡೆಯಲಿರುವ ಪಟ್ಟಾಭಿಷೇಕ ಕಾರ್ಯಕ್ರಮಕ್ಕೆ ಭಕ್ತರಿಗೆ ಆಹ್ವಾನ ನೀಡುವ ಸಂಬಂಧ ಶಿವಮೊಗ್ಗದ ಈಡಿಗ ಭವನದಲ್ಲಿ ಶನಿವಾರ ನಡೆದ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಈಡಿಗ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನೂ ತಲುಪುವ ಉದ್ದೇಶದಿಂದ ಧರ್ಮಪೀಠ ಸ್ಥಾಪನೆಯಾಗಿದೆ. ಎಲ್ಲಾ 26 ಉಪ ಪಂಗಡಗಳನ್ನು ಒಂದುಗೂಡಿಸಿ ಮಠದ ವ್ಯಾಪ್ತಿಗೆ ತರುವ ಕೆಲಸ ನಡೆಯುತ್ತಿದೆ. ಸಮಾಜ ಬಾಂಧವರಿಗೆ ಶಿಕ್ಷಣ, ಉದ್ಯೋಗ ಹಾಗೂ ಸೂರು ನೀಡುವುದು ನಮ್ಮ ಆದ್ಯತೆಯಾಗಿದೆ ಎಂದರು.
ಈಡಿಗ ಸಮಾಜದಲ್ಲಿ ಅತ್ಯಂತ ಪ್ರತಿಭಾಶಾಲಿ ಮಕ್ಕಳಿದ್ದಾರೆ. ಅವರನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಅಣಿಗೊಳಿಸುವ ಕೆಲಸವನ್ನು ಮಠ ಮಾಡಲಿದೆ. ಈ ದಿಸೆಯಲ್ಲಿ ಸಮಾಜದ ಎಲ್ಲರ ಸಹಕಾರ ಅಗತ್ಯವಿದೆ.ಜನರ ಸೇವೆ ಮಾಡುವ ಉದ್ದೇಶದಿಂದ ಸ್ವಾಮೀಜಿ ಆಗಿದ್ದೇನೆ ನನಗೆ ಜನ ಸೇರಿಸಿ ಸಮಾವೇಶ ಮಾಡುವುದು ಮುಖ್ಯವಲ್ಲ. ಕಷ್ಟದಲ್ಲಿರುವ ಸಮಾಜದ ಕೊನೇ ಮನುಷ್ಯನಿಗೆ ಸಾಂತ್ವನ ಹೇಳುವುದು ನನ್ನ ದ್ಯೇಯವಾಗಿದೆ ಎಂದು ಶ್ರೀಗಳು ಹೇಳಿದರು.
ಬಾಲ್ಯದಿಂದಲೇ ಸನ್ಯಾಸತ್ವ ಸ್ವೀಕರಿಸಿದ ತಾವು ಶಿವಗಿರಿಯಲ್ಲಿ ವೇದಾಧ್ಯಯನ ,ಸಂಸ್ಕೃತ ಅಧ್ಯಯನ ಮಾಡಿದ್ದು, ಎರಡು ವರ್ಷ ಹೃಷಿಕೇಷದಲ್ಲಿ ಆಧ್ಯಾತ್ಮ ಶಿಕ್ಷಣ ಪಡೆದಿದ್ದೇನೆ. ಉಡುಪಿಜಿಲ್ಲೆ ಕಾರ್ಕಳ ತಾಲೂಕು ಈದು ಗ್ರಾಮದಲ್ಲಿ ಆಶ್ರಮ ಮಾಡಿಕೊಂಡು ಬಡ ಮಕ್ಕಳಿಗೆ ಶಾಲೆ ನಡೆಸಲಾಗುತ್ತಿದೆ. ಈಗ ಇಡೀ ರಾಜ್ಯದಲ್ಲಿ ಸಮಾಜ ಸಂಘಟಿಸುವ ಹೊಣೆಯಲ್ಲಿ ಸಮುದಾಯದ ಮುಖಂಡರು ನೀಡಿದ್ದಾರೆ. ಸ್ವಾಮೀಜಿ ಒಬ್ಬರಿಂದ ಎಲ್ಲವೂ ಆಗುವುದಿಲ್ಲ. ಸಮಾಜದ ಜನರ ಸಹಕಾರದಿಂದ ಸಮಾಜ ಸಂಘಟಿಸುವ ಕೆಲಸ ಮಾಡೋಣ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಈಡಿಗ ಸಂಘದ ಜಿಲ್ಲಾಧ್ಯಕ್ಷ ಹುಲ್ತಿಕೊಪ್ಪ ಶ್ರೀಧರ್ ಮಾತನಾಡಿ, ಶಿವಮೊಗ್ಗ ಜಿಲ್ಲೆಯಲ್ಲಿ ಬಹುಸಂಖ್ಯಾತರಾದರೂ, ಸಂಘಟನಾ ದೃಷ್ಟಿಯಲ್ಲಿ ನಾವು ಹಿಂದೆ ಬಿದ್ದಿದ್ದೇವೆ. ಸ್ವಾಮೀಜಿಗಳ ಸಾರಥ್ಯದಲ್ಲಿ ಮುಂದಿನ ದಿನಗಳಲ್ಲಿ ಸಮಾಜದ ಏಳಿಗೆ ಆಗಲಿದೆ ಎಂದು ಹೇಳಿದರು.
ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಈಡಿಗರ ಸಾಮರ್ಥ್ಯ ಸಾಬೀತುಪಡಿಸಲು ಫೆ.2 ರಂದು ನಡೆಯುವ ಪೀಠಾರೋಹಣ ಕಾರ್ಯಕ್ರಮ ಒಂದು ಅವಕಾಶವಾಗಿದೆ. ಐದು ಲಕ್ಷ ಜನ ಸೇರಿ ನಮ್ಮ ಗುರುಪೀಠಕ್ಕೆ ಶಕ್ತಿತುಂಬಬೇಕು ಎಂದು ಹೇಳಿದರು. ಮಾಜಿ ಶಾಸಕ ಡಾ.ಜಿ.ನಾರಾಯಣಪ್ಪ, ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್,ಉದ್ಯಮಿ ಸುರೇಶ್ ಬಾಳೇಗುಂಡಿ, ಈಡಿಗ ಮಹಿಳಾ ಸಂಘದ ಅಧ್ಯಕ್ಷೆ ಗೀತಾಂಜಲಿ ದತ್ತಾತ್ರೇಯ, ಬಿಲ್ಲವ ಸಂಘದ ಜಿಲ್ಲಾಧ್ಯಕ್ಷ ಭುಜಂಗಯ್ಯ ಮಾತನಾಡಿ ಗುರುಪೀಠದ ಮಾರ್ಗದರ್ಶನದಲ್ಲಿ ಸಮಾಜದ ಉನ್ನತಿ ಆಗುತ್ತದೆ. ಈ ನೆಲೆಯಲ್ಲಿ ಎಲ್ಲರೂ ಸಹಕಾರ ನೀಡುವುದಾಗಿ ಹೇಳಿದರು.
ಕಾರ್ಯದರ್ಶಿ ಎಸ್.ಸಿ.ರಾಮಚಂದ್ರ ಸ್ವಾಗತಿಸಿದರು. ಜಿ.ಡಿ.ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.ಈ ಸಂದರ್ಭದಲ್ಲಿ
ಈಡಿಗ ಸಂಘ, ಮಹಿಳಾ ಸಂಘ ಹಾಗೂ ಮಲೆನಾಡು ದೀವರ ಸಾಂಸ್ಕೃತಿಕ ಮತ್ತು ಕ್ಷೇಮಾಭಿವೃದ್ಧಿ ಸಮಿತಿಯಿಂದ ಗುರುಗಳನ್ನು ಗೌರವಿಸಲಾಯಿತು
ರಾಜ್ಯದ ಎಲ್ಲಾ ಕಡೆ ಶಾಲೆ ಆರಂಭಿಸಲಾಗುವುದು. ಈಗಾಗಲೇ ಹಲವು ಜಿಲ್ಲೆಗಳಲ್ಲಿ ಜಾಗ ಗೊತ್ತು ಮಾಡಲಾಗಿದೆ. ಆಯಾ ಜಿಲ್ಲಾ ಈಡಿಗ ಸಂಘದ ಉಸ್ತುವಾರಿಯಲ್ಲಿ ಶಿಕ್ಷಣ ಸಂಸ್ಥೆ ನಡೆಸುವ ಉದ್ದೇಶವಿದೆ. ಶಿವಮೊಗ್ಗದಲ್ಲಿಯೂ ಎರಡು ಎಕರೆ ಜಾಗವನ್ನು ಶಾಲೆ ಆರಂಭಿಸಲು ಗೊತ್ತು ಮಾಡಲಾಗಿದೆ
–ಶ್ರೀ ವಿಖ್ಯಾತಾನಂದ ಸ್ವಾಮೀಜಿ
14 ಎಕರೆ ಜಾಗದಲ್ಲಿ ಸೋಲೂರು ಮಠವಿದೆ. ಅಲ್ಲಿ ರೇಣುಕಾ ಎಲ್ಲಮ್ಮ ದೇವಿ ದೇವಸ್ಥಾನ, ಮಠ, ಶಾಲೆಗಳನ್ನು ನಿರ್ಮಾಣ ಮಾಡಲಾಗಿದೆ. ವಿಶಾಲವಾದ ಜಾಗದಲ್ಲಿರುವ ಸಮುದಾಯದ ಶ್ರೀ ಸಂಸ್ಥಾನವನ್ನು ಎಲ್ಲರೂ ನೋಡಬೇಕು. ಅಧ್ಯಯನದ ಮೂಲಕ ಅಪಾರ ವಿದ್ವತ್‌ಗಳಿಸಿರುವ ಸ್ವಾಮೀಜಿ ನಮ್ಮ ಸಮುದಾಯಕ್ಕೆ ಸಿಕ್ಕಿರುವುದು ನಮ್ಮ ಸೌಭಾಗ್ಯ
ಸುರೇಶ್ ಕೆ ಬಾಳೇಗುಂಡಿ, ಉದ್ಯಮಿ
ಮೊದಲಿಂದಲೂ ಮಠ ಪಂರಂಪರೆ ಇಲ್ಲದ ಸಮುದಾಯ ನಮ್ಮದು. ಈಗ ಸ್ವಾಮೀಜಿ ಮತ್ತು ಮಠದ ಅಗತ್ಯವಿದೆ. ಶ್ರೀಗಳು ಸಮುದಾಯದ ಹೆಚ್ಚು ಜನಸಂಖ್ಯೆ ಇರುವ ಜಿಲ್ಲೆಗಳ ನಿರಂತರ ಸಂಪರ್ಕ ಹೊಂದುವುದು ಉತ್ತಮ .ಈ ದಿಸೆಯಲ್ಲಿ ಶ್ರೀಗಳು ಚಿಂತನೆ ಮಾಡಬೇಕಾಗಿ ಮನವಿ ಮಾಡುವೆ
ಕಲಗೋಡು ರತ್ನಾಕರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ