ಅಟಲ್ ಬಿಹಾರಿ ವಾಜಪೇಯಿ ಅವರು ಅಜಾತಶತ್ರುವಾಗಿದ್ದು, ಕಾರ್ಯಕರ್ತರ ಬಗ್ಗೆ ಅತ್ಯಂತ ಆತ್ಮೀಯತೆ ಮತ್ತು ಗೌರವ ವ್ಯಕ್ತಪಡಿಸುತ್ತಿದ್ದರು ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಹೇಳಿದ್ದಾರೆ.
ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಅಟಲ್ ಜೀ ಅವರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಸಾಮಾನ್ಯ ಕಾರ್ಯಕರ್ತನ ಬಗ್ಗೆ ಅಟಲ್ ಅವರ ನಡವಳಿಕೆ ಎಲ್ಲರಿಗೂ ಮಾರ್ಗದರ್ಶನವಾಗಿದ್ದು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವ ಪ್ರಯತ್ನ ಮಾಡೋಣ. ಕವಿ ಹೃದಯದ ವಾಜಪೇಯಿ ಅವರು ಪ್ರಕೃತಿಯ ಆರಾಧಕರೂ ಆಗಿದ್ದರು. ನಂಬಿದ ಸಿದ್ಧಾಂತಗಳ ಬಗ್ಗೆ ಅಚಲ ನಂಬಿಕೆ ಇಟ್ಟವರು. ಅದನ್ನು ಕಾರ್ಯಗತಗೊಳಿಸುವ ಅಚಲ ವಿಶ್ವಾಸ ಅವರಲ್ಲಿತ್ತು. ತಾನೊಬ್ಬ ಸಮರ್ಥ ನಾಯಕನಾಗಿದ್ದರೂ ಕೂಡ ಕಾರ್ಯಕರ್ತರಿಗೆ ಎಲ್ಲಾದರೂ ನೋವಾದರೆ ತಾವೇ ಕ್ಷಮೆ ಕೇಳಿಬಿಡುತ್ತಿದ್ದರು. ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರ ಅಟಲ್ ಜೀ ಅವರನ್ನು ಅನುಸರಿಸಿದರೆ ದೇಶದ ಚಿತ್ರಣವೇ ಬದಲಾಗಲಿದೆ ಎಂದು ಹೇಳಿದರು.
ರಾಷ್ಟ್ರೀಯ ಹೆದ್ದಾರಿಗಳು, ನಮ್ಮ ಸೈನಿಕರಿಗೆ ಶಕ್ತಿ ತುಂಬ ಕೆಲಸ, ಗ್ರಾಮೀಣಾಭಿವೃದ್ಧಿ ಸೇರಿದಂತೆ ತಾವು ಪ್ರತಿಪಾದಿಸುತ್ತಿದ್ದ ಸಿದ್ದಾಂತಗಳನ್ನು ಪ್ರಧಾನಿಯಾದ ತಕ್ಷಣ ಜಾರಿಗೆ ತರುವಲ್ಲಿ ಯಶಶ್ವಿಯಾದರು. ಕವಿ ಹೃದಯದವರಾಗಿದ್ದರೂ ಸಹ ದೇಶದ ಸುರಕ್ಷತೆ ಪ್ರಶ್ನೆ ಬಂದಾಗ ನಾವು ಯಾರಿಗೂ ಕಡಿಮೆ ಇಲ್ಲ ಎಂದು ಸಾಬೀತುಪಡಿಸಲು ಪ್ರೋಖ್ರಾನ್ ನಲ್ಲಿ ಅಣು ಬಾಂಬ್ ಪರೀಕ್ಷೆ ನಡೆಸಿ ವಿಶ್ವದ ಗಮನಸೆಳೆದರು ಎಂದರು.
ಶಿವಮೊಗ್ಗದ ಪ್ರಥಮ ಸಭೆಗೆ ಬಂದಾಗ ಸುಮಾರು ಎರಡು ಕಿ.ಮೀ. ದೂರದವರೆಗೂ ಕಾರಿಗೆ ಕಾಯದೇ ಸಭಾಂಗಣದವರೆಗೆ ನಡೆದುಕೊಂಡೇ ಹೋದರು. ಜೋಗದಲ್ಲಿ ಯಾವುದೇ ಮೂಲ ಸೌಲಭ್ಯವಿಲ್ಲದಿದ್ದಾಗ ಜಲಪಾತದ ಕೆಳಗಿನವರೆಗೆ ಹೋಗಿ ಅಲ್ಲೆಯೇ ಬಂಡೆಯ ಮೇಲೆ ಮಲಗಿ ಪರಿಸರದ ಭವ್ಯತೆಯನ್ನು ಮತ್ತು ಕೊಡುಗೆಯನ್ನು ಹಾಡಿ ಹೊಗಳಿದ ಸರಳ ಸ್ನೇಹಿಮಹಿ ವ್ಯಕ್ತಿತ್ವವನ್ನು ನನ್ನ ಜೀವನದಲ್ಲಿ ಮರೆಯಲು ಸಾಧ್ಯವೇ ಇಲ್ಲ ಎಂದರು.
ಬಿಜೆಪಿಯ ಪ್ರಾರಂಭದ ದಿನಗಳಲ್ಲಿ ಪ್ರತಿನಿತ್ಯ18 ರಿಂದ 20 ಭಾಷಣಗಳನ್ನು ಮಾಡುತ್ತಿದ್ದ ಅವರು ಪಕ್ಷವನ್ನು ದೇಶದಲ್ಲಿ ಅಧಿಕಾರಕ್ಕೆ ತರುವವರೆಗೆ ವಿಶ್ರಮಿಸದೇ ಕಾರ್ಯಕರ್ತರಲ್ಲಿ ಸ್ಪೂರ್ತಿ ತುಂಬುವ ಅವರ ಚೈತನ್ಯ ಅಸಾಧಾರಣವಾದುದು. ಮೋದಿ ಸರ್ಕಾರ ಬಂದ ಮೇಲೆ ಅವರಿಗೆ ಭಾರತರತ್ನ ನೀಡಲಾಯಿತು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವ ಪ್ರಯತ್ನ ಮಾಡೋಣ ಎಂದರು.
ಸಚಿವ ಕೆ.ಎಸ್. ಈಶ್ವರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಪ್ರಮುಖರಾದ ಗಿರೀಶ್ ಪಟೇಳ್, ಚನ್ನಬಸಪ್ಪ, ಜಗದೀಶ್, ಜ್ಞಾನೇಶ್ವರ್, ಬಳ್ಳೆಕೆರೆ ಸಂತೋಷ್, ಎನ್.ಡಿ. ಸತೀಶ್, ರಾಮು, ಕೆ.ಇ. ಕಾಂತೇಶ್ ಮೊದಲಾದವರಿದ್ದರು.