ಕುವೆಂಪು ವಿವಿಯಲ್ಲಿ ಕುವೆಂಪು ಜನ್ಮದಿನಾಚರಣೆ
ರಾಷ್ಟ್ರಕವಿ ಕುವೆಂಪು ಅವರು ಪ್ರತಿಪಾದಿಸಿದ ಪಂಚಶೀಲ ತತ್ವ ವೈಯಕ್ತಿಕ ಮತ್ತು ಸಾಮುದಾಯಿಕ ಹಂತದಲ್ಲಿ ಸರ್ವರ ಏಳ್ಗೆಯನ್ನು ಬಯಸುವ ಶ್ರೇಷ್ಠ ಚಿಂತನೆಯಾಗಿದೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಕುವೆಂಪು ವಿಶ್ವವಿದ್ಯಾಲಯದಲ್ಲಿ ಬುಧವಾರ ಆಯೋಜಿಸಲಾಗಿದ್ದ ಕುವೆಂಪು ಅವರ 117ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನುಜಮತವೇ ಮುಖ್ಯ ಎಂಬ ಆದರ್ಶ ಕ್ಷೀಣಿಸಿ ಇಂದು ಜಾತಿ, ಧರ್ಮಗಳ ಸಂಕುಚಿತತೆ ಹೆಚ್ಚಿದೆ. ಮನುಷ್ಯ ಊರು, ರಾಜ್ಯ, ದೇಶಗಳಿಗೆ ಅಂಟಿಕೊಂಡು ವಿಶ್ವಪಥವನ್ನು ಮರೆತಿದ್ದಾನೆ ಎಂದು ವಿಷಾದಿಸಿದರು.
ಕುಲಸಚಿವೆ ಜಿ. ಅನುರಾಧ ಅವರು ಮಾತನಾಡಿ, ಕುವೆಂಪು ಅವರು ಸರ್ವ ಜನಾಂಗಗಳ ಭೌತಿಕ ಆಧ್ಯಾತ್ಮಿಕ, ಕೌಟುಂಬಿಕ ಹೀಗೆ ಸರ್ವಸ್ತರದ ಅಭಿವೃದ್ಧಿಯನ್ನು ಬಯಸಿದವರು. ಈ ದಿಶೆಯಲ್ಲಿ ತಾವು ನಡೆಯುತ್ತಿರುವ ಹಾದಿಯೆಡೆಗೆ ವಿಮರ್ಶಾತ್ಮಕ ದೃಷ್ಟಿಕೋನವನ್ನು ರೂಢಿಸಿಕೊಂಡು ಸಮನ್ವಯತೆಯ ಸೂತ್ರವನ್ನು ಜಗತ್ತಿಗೆ ನೀಡಿದವರು ಎಂದರು.
ಹಣಕಾಸು ಅಧಿಕಾರಿ ಎಸ್. ರಾಮಕೃಷ್ಣ, ಕಾರ್ಯನಿರ್ವಾಹಕ ಎಂಜಿನಿಯರ್ ರಘುಶಂಕರ್, ಡಾ. ಪಾಲಾಕ್ಷನಾಯಕ್, ಡಾ. ಶ್ರೀಶೈಲ, ಡಾ. ಎಂ. ಆರ್. ಸತ್ಯಪ್ರಕಾಶ್, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.