ಶಿವಮೊಗ್ಗ: 75ನೇ ಸ್ವಾತಂತ್ರೋತ್ಸವ ಅಮೃತ ಮಹೋತ್ಸವದ ಅಂಗವಾಗಿ ರಾಜ್ಯದ ಎಲ್ಲಾ ಪದವಿ ಪೂರ್ವ ಕಾಲೇಜುಗಳಲ್ಲಿ ಜನವರಿ ೧ ರಿಂದ ಫೆಬ್ರವರಿ ೭ ರವರೆಗೆ ಸೂರ್ಯ ನಮಸ್ಕಾರ ಕಾರ್ಯಕ್ರಮ ನಡೆಸಲು ಮುಂದಾಗಿರುವ ಸರ್ಕಾರದ ಕ್ರಮಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತೀವ್ರ ವಿರೋಧವಿದೆ ಎಂದು ಸಮಿತಿಯ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಹೇಳಿದ್ದಾರೆ.
ಸೂರ್ಯ ನಮಸ್ಕಾರ ಕಾರ್ಯಕ್ರಮ ಆಯೋಜಿಸುವಂತೆ ಕೇಂದ್ರ ಸಚಿವಾಲಯ ಎಲ್ಲಾ ರಾಜ್ಯಗಳ ಶಿಕ್ಷಣ ಇಲಾಖೆಗಳ ಮುಖ್ಯಸ್ತರಿಗೆ ಪತ್ರ ಬರೆದು ಸೂಚಿಸಿದೆ. ಆ ಪತ್ರದ ಹಿನ್ನೆಲೆಯಲ್ಲಿ ಪಿ ಯೂ ಮಕ್ಕಳಿಂದ ಸೂರ್ಯ ನಮಸ್ಕಾರ ಮಾಡಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಸಂಬಂಧ ರಾಜ್ಯದ ಎಲ್ಲಾ ಪದವಿ ಪೂರ್ವ ಕಾಲೇಜುಗಳಲ್ಲಿ ಜನವರಿ 1ರಿಂದ ಫೆಬ್ರವರಿ7 ರವರೆಗೆ ಸೂರ್ಯ ನಮಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಸೂಚಿಸಿದೆ.
75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವಕ್ಕೂ ಮತ್ತು ಸೂರ್ಯ ನಮಸ್ಕಾರಕ್ಕೊ ಏನು ಸಂಬಂಧವಿದೆ. ಸ್ವಾತಂತ್ರ್ಯ ಹೋರಾಟಗಾರರ ಜೀವನಗಾಥೆ ತಿಳಿಸುವ ಹಾಗೂ ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮ ಅರಳಿಸುವಂತ ಕಾರ್ಯಕ್ರಮಗಳ ಬದಲು ಸೂರ್ಯ ನಮಸ್ಕಾರದಂತಹ ಆಚರಣೆಗಳನ್ನು ಜಾರಿ ಮಾಡುವುದು ಅವಿವೇಕದ ಪರಮಾವಧಿಯಾಗಿದೆ. ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವಕ್ಕೂ ಧೈಹಿಕ ಚಟುವಟಿಕೆಗೂ ಯಾವ ರೀತಿಯ ಸಂಬಂಧ ಎನ್ನುವುದನ್ನು ಸರ್ಕಾರವೇ ಸ್ಪಷ್ಟ ಪಡಿಸಬೇಕು ಎಂದಿದ್ದಾರೆ.
ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ಶೈಕ್ಷಣಿಕ ಚಟುವಟಿಕೆಗಳು ಕೊರೋನ ರೂಪಾಂತರ ತಳಿ ಓಮಿಕ್ರಾನ್ ಆತಂಕ ಮೂಡಿಸಿದೆ. ಶಾಲಾ ಜಾಲೇಜುಗಳಲ್ಲಿ ಪಠ್ಯ ಕ್ರಮ ಪೂರೈಸುವುದಕ್ಕೆ ಹರ ಸಾಹಸ ಪಡುವ ಸ್ಥಿತಿ ಉಂಟಾಗಿದೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ನಿಗದಿತ ಪಠ್ಯವನ್ನು ಪೂರೈಸಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಸರ್ಕಾರದ ಹೊಣೆ ಎಂದಿದ್ದಾರೆ.
ಆದರೆ ರಾಷ್ಟ್ರೀಯ ಯೋಗಾಸನ ಫೌಂಡೇಷನ್‌ನ ಅಪೇಕ್ಷೆಗೆ ಅನುಗುಣವಾಗಿ ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ವಿದ್ಯಾರ್ಥಿಗಳ ಮೇಲೆ ಹೇರುತ್ತಿರುವುದು ಸರಿಯಾದ ಕ್ರಮವಲ್ಲ. ಇತ್ತೀಚಿನ ದಿನಗಳಲ್ಲಿ ಸರ್ಕಾರ ಸಂಸ್ಕೃತಿ ಮತ್ತು ಧರ್ಮದ ಹೆಸರಿನಲ್ಲಿ ಶಿಕ್ಷಣವನ್ನು ಕೇಸರೀಕರಣ ಗೊಳಿಸುತ್ತಿದೆ ಎನ್ನುವ ಸಾರ್ವಜನಿಕ ಆರೋಪಗಳಿಗೆ ಪುಷ್ಟಿ ನೀಡಿದಂತಾಗುತ್ತದೆ. ಆದ್ದರಿಂದ ಸರ್ಕಾರ ಈಗಾಗಲೇ ಅವೈಜ್ಞಾನಿಕವಾಗಿ ತೆಗೆದುಕೊಂಡಿರುವ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸರ್ಕಾರವನ್ನು ಒತ್ತಾಯಿಸುತ್ತದೆ.