ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಕನಸು ಕಂಡ ಪಕ್ಷ ಕಾಂಗ್ರೆಸ್ ಮಾತ್ರ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ವತಿಯಿಂದ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಬ್ಲಾಕ್ ಅಧ್ಯಕ್ಷರುಗಳಿಗೆ ಪರಿಚಯ ಪತ್ರ ನೀಡಿ ಅವರು ಮಾತನಾಡಿದರು.
ಹಿಂದುಳಿದ ವರ್ಗಗಳು ಒಟ್ಟಾದಾಗ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ.ಕಾಂಗ್ರೆಸ್ ಹಿಂದುಳಿದ ವರ್ಗಗಳ ಬಗ್ಗೆ ನಿರಂತರವಾಗಿ ಹೋರಾಡುತ್ತಲೇ ಬಂದಿದೆ. ಇದೊಂದು ಶಖ್ತಿಯುತ ವಿಭಾಗವಾಗಿದೆ. ಬ್ಲಾಕ್ ಅಧ್ಯಕ್ಷರ ನೇಮಕವಾಗಿ ಎರಡು ತಿಂಗಳಾದರೂ ಅಧಿಕಾರ ಹಸ್ತಾಂತರ ಮಾಡಿರಲಿಲ್ಲ. ಈಗ ಹಸ್ತಾಂತರ ಮಾಡಲಾಗಿದೆ. ಎಲ್ಲರೂ ಒಟ್ಟಾಗಿ ಜಿಲ್ಲಾ ಸಮಿತಿಯನ್ನು ರಚಿಸಿ ಸರ್ಕಾರದಿಂದ ಹಿಂದುಳಿದ ವರ್ಗಗಳಿಗೆ ಸಿಗಬೇಕಾದ ಸೌಲತ್ತುಗಳನ್ನು ಒದಗಿಸಬೇಕು ಎಂದರು.
ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಇಕ್ಕೇರಿ ರಮೇಶ್ ಮಾತನಾಡಿ, ನಮ್ಮಲ್ಲಿ ಒಗ್ಗಟ್ಟು ಇಲ್ಲದಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಹೀಗಾದರೆ ಹಿಂದುಳಿದ ವರ್ಗಗಳ ಅಭಿವೃದ್ದಿ ಹೇಗೆ ಸಾಧ್ಯ? ಇದೊಂದು ಸಂಘಟನೆಯ ಸಭೆಯಾಗಬೇಕಿತ್ತು. ಆದರೆ, ಸಭೆಗೆ ಹಿಂದುಳಿದ ವರ್ಗದ ನಾಯಕರೇ ಬಂದಿಲ್ಲ ಎಂದು ವಿಷಾದಿಸಿದರು.
ಹಿಂದುಳಿದ ಜಾತಿಗಳಲ್ಲಿ ಸುಮಾರು ೧೯೭ ಕ್ಕೂ ಹೆಚ್ಚು ಜಾತಿ, ಉಪ ಜಾತಿಗಳಿವೆ. ಇದರಲ್ಲಿ ಅನೇಕ ಜಾತಿಗಳಲ್ಲಿ ಸಾಮ್ಯತೆ ಕಂಡು ಬರುತ್ತದೆ. ಇವುಗಳನ್ನೆಲ್ಲ ಒಟ್ಟಿಗೆ ಸೇರಿಸಿ ಜಾತಿಗಳ ಸಂಖ್ಯೆ ಕಡಿಮೆ ಮಾಡಿಕೊಳ್ಳಬೇಕು. ಈ ಪ್ರಯತ್ನ ಬಂಗಾರಪ್ಪ, ದೇವರಾಜ ಅರಸು ಮತ್ತು ಸಿದ್ಧರಾಮಯ್ಯ ಅವರ ಕಾಲದಲ್ಲಿಯೂ ನಡೆದಿತ್ತು ಎಂದರು.
ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಇಲ್ಲ. ಹಿಂದುಳಿದ ವರ್ಗಗಳ ನಿಗಮಗಳು ಯಾವುವು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಸರ್ಕಾರದಿಂದ ಸಹಾಯ ಕೂಡ ಸಿಗುತ್ತಿಲ್ಲ. ಸಾಮಾಜಿಕವಾಗಿ ಅತ್ಯಂತ ಬಡತನದಲ್ಲಿ ಹಿಂದುಳಿದ ವರ್ಗದವರಿದ್ದಾರೆ. ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳು ತಲುಪುತ್ತಿಲ್ಲ. ಇವಕ್ಕೆಲ್ಲಾ ಶಕ್ತಿ ತುಂಬಬೇಕಾಗಿದೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಎಲ್. ಸತ್ಯನಾರಾಯಣ್ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಹಿಂದುಳಿದ ವರ್ಗಗಳ ಕಲ್ಯಾಣವಾಗಿದೆ. ಬಿಜೆಪಿ ಸೇರಿದಂತೆ ಇತರ ಯಾವ ಪಕ್ಷಗಳು ಕೂಡ ಹಿಂದುಳಿದ ವರ್ಗಗಳ ಮೇಲೆತ್ತಲು ಸಹಾಯ ಮಾಡಲಿಲ್ಲ. ದೇವರಾಜ ಅರಸು ಅವರ ಕಾಲದಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿ ಉತ್ತುಂಗ ಶಿಖರಕ್ಕೆ ಏರಿತ್ತು. ಹಿಂದುಳಿದ ವರ್ಗಗಳ ಹರಿಕಾರ ಎಂದೇ ಅವರು ಹೆಸರು ಪಡೆದಿದ್ದರು. ಆ ಕಾಲ ಮತ್ತೆ ಮರಳಬೇಕಾಗಿದೆ ಎಂದರು.
ಹಿಂದುಳಿದ ವರ್ಗಗಳ ವಿಭಾಗದ ಬ್ಲಾಕ್ ಅಧ್ಯಕ್ಷರಾಗಿ ಮೋಹನ್ ಬಾಬು, ಎಸ್. ವೆಂಕಟೇಶ್, ಶಂಕರಘಟ್ಟ ಎಂ. ರಮೇಶ್, ರಾಮಚಂದ್ರ ಎಸ್.ಹೆಚ್., ಶ್ರೀನಿವಾಸ್ ಕೆ., ಚಿದಂಬರ, ಮಂಜುನಾಥ್, ಎಂ. ರಾಜಪ್ಪ ಇವರಿಗೆ ಪರಿಚಯ ಪತ್ರ ನೀಡಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ಚಂದ್ರಭೂಪಾಲ್, ಡಾ. ಶ್ರೀನಿವಾಸ್ ಕರಿಯಣ್ಣ, ವೈ.ಹೆಚ್. ನಾಗರಾಜ್, ಅಶೋಕ್ ಕುಮಾರ್, ಕಲಗೋಡು ರತ್ನಾಕರ್, ರಾಮೇಗೌಡ, ಉಮಾಪತಿ ಮೊದಲಾದವರಿದ್ದರು.