ಕೋವಿಡ್ ರೂಪಾಂತರಿ ಸೋಂಕನ್ನು ನಿಯಂತ್ರಿಸಲು ಸರ್ಕಾರ ಇದೀಗ ೧೫ ರಿಂದ ೧೮ ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕಾ ಕಾರ್ಯಕ್ರಮ ಆರಂಭಿಸಿದ್ದು, ಮಕ್ಕಳು ಯಾವುದೇ ರೀತಿಯ ಗೊಂದಲ ಮತ್ತು ಭಯಕ್ಕೀಡಾಗದೇ ನಿರಾಂತಕವಾಗಿ ಲಸಿಕೆಯನ್ನು ಪಡೆಯಬೇಕೆಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಸರ್ಕಾರಿ ಪದವಿಪೂರ್ವ ಕಾಲೇಜು, ಸೈನ್ಸ್ ಮೈದಾನ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ನಗರದ ಸರ್ಕಾರಿ ಪದವಿಪೂರ್ವ ಕಾಲೇಜ್, ಸೈನ್ಸ್ ಮೈದಾನ ಇಲ್ಲಿ ಏರ್ಪಡಿಸಲಾಗಿದ್ದ ೧೫ ರಿಂದ ೧೮ ವರ್ಷದ ಮಕ್ಕಳಿಗೆ ಕೋವಿಡ್ -೧೯ ಲಸಿಕಾಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಕ್ಕಳು ಸಮಾಜದ ವಿಭಿನ್ನ ವಯೋಮಿತಿಯ ಗುಂಪುಗಳೊಂದಿಗೆ ನಿತ್ಯ ಒಡನಾಡುತ್ತಾ, ಸಂಪರ್ಕದಲ್ಲಿರುತ್ತಾರೆ. ಆದ ಕಾರಣ ಮಕ್ಕಳಿಗೂ ಹಂತ ಹಂತವಾಗಿ ಕೋವಿಡ್ ಲಸಿಕೆ ಹಾಕುವ ಮೂಲಕ ಕೋವಿಡ್‌ನಿಂತ ಮಕ್ಕಳನ್ನು ರಕ್ಷಿಸಲು ಸರ್ಕಾರ ಮೊದಲನೇ ಹಂತದಲ್ಲಿ ೧೫ ರಿಂದ ೧೮ ವಯೋಮಿತಿಯ ಮಕ್ಕಳಿಗೆ ೧೦ ದಿನಗಳ ಲಸಿಕಾ ಕಾರ್ಯಕ್ರಮ ಆಯೋಜಿಸಿದೆ.
ಲಸಿಕೆ ಬಗ್ಗೆ ಮಕ್ಕಳಲ್ಲಿ ಎರಡನೇ ಯೋಚನೆಯೇ ಬೇಡ. ಲಸಿಕೆ ಸುರಕ್ಷಿತವಾಗಿದ್ದು ಯಾವುದೇ ರೀತಿಯಲ್ಲಿ ಆತಂಕ ಪಡುವುದು ಬೇಡ. ನಾವೆಲ್ಲ ಎರಡು ಡೋಸ್ ಲಸಿಕೆ ಪಡೆದು ಆರೋಗ್ಯವಾಗಿದ್ದೇವೆ ಎಂದ ಅವರು ಮೊದಲೆರಡು ಅಲೆಯಲ್ಲಿ ಜಿಲ್ಲೆಯಲ್ಲಿ ಸುಮಾರು ೧೦ ಲಕ್ಷ ಲಕ್ಷಕ್ಕೂ ಅಧಿಕ ಡೋಸ್ ಲಸಿಕೆ ನೀಡಲಾಗಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಜ.03 ರಿಂದ 12 ರವರೆಗೆ ೧೫ ರಿಂದ 18 ವರ್ಷದ 83,831 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ 35 ಸಾವಿರ ಕೋವ್ಯಾಕ್ಸಿನ್ ಲಸಿಕೆ ಲಭ್ಯವಿದ್ದು ಜ.3 ರಂದು ಒಟ್ಟು 74 ಸೈಟ್‌ಗಳಲ್ಲಿ ಲಸಿಕಾಕರಣ ನಡೆಯಲಿದೆ. ಹಾಗೂ ಈಗಾಗಲೇ ಪ್ರಾಥಮಿಕ ಆರೋಗ್ಯ ಕೇಂದ್ರವಾರು ಕ್ರಿಯಾ ಯೋಜನೆಯನ್ನು ತಯಾರಿಸಿದ್ದು, ಈ ಯೋಜನೆಯಂತೆ ಜಿಲ್ಲೆಯ ಎಲ್ಲ ಪ್ರೌಢಶಾಲೆ ಮತ್ತು ಕಾಲೇಜುಗಳಲ್ಲಿ ಲಸಿಕೆ ನೀಡಲಾಗುವುದು.
ಈ ಲಸಿಕಾಕರಣ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಎಲ್ಲ ಸಿಬ್ಬಂದಿಗಳು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು, ಪ್ರಾಂಶುಪಾಲರು ಕಾರ್ಯ ನಿರ್ವಹಿಸಲಿದ್ದಾರೆ. ಲಸಿಕೆ ನೀಡಿದ ನಂತರ ಮಕ್ಕಳಲ್ಲಿ ಏನಾದರೂ ತೊಂದರೆ ಕಂಡುಬಂದರೆ ಸೂಕ್ತ ಚಿಕಿತ್ಸೆ ನೀಡಲು ೦೫ ಪ್ರಾಥಮಿಕ ಆರೋಗ್ಯಗಳು ಒಳಗೊಂಡಂತೆ ಒಂದು ಆಂಬುಲೆನ್ಸ್ ನಿಯೋಜಿಸಲಾಗಿದೆ. ಈ ಕಾರ್ಯಕ್ರಮದ ಮೇಲ್ವಿಚಾರಣೆ ನಡೆಸಲು ಪ್ರಾಥಮಿಕ ಆರೋಗ್ಯ ಕೇಂದ್ರವಾರು ನೋಡಲ್ ಅಧಿಕಾರಿಗಳು, ತಾಲ್ಲೂಕು ಮಟ್ಟದಲ್ಲಿ ನೋಡಲ್ ಅಧಿಕಾರಿಗಳು ಹಾಗೂ ಶಾಲೆಗಳಲ್ಲಿ ಮಕ್ಕಳ ಜನನ ದೃಢೀಕರಣ ನೋಡಿಕೊಳ್ಳಲು ಒಬ್ಬ ಶಾಲಾ ಶಿಕ್ಷಕರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ.
ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಬಿ.ವೈ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಾನಗರಪಾಲಿಕೆ ಮಹಾಪೌರರಾದ ಸುನೀತಾ ಅಣ್ಣಪ್ಪ ಮಾತನಾಡಿದರು.ವೇದಿಕೆಯಲ್ಲಿ ಆರ್‌ಸಿಹೆಚ್‌ಓ ಡಾ.ನಾಗರಾಜ್‌ನಾಯ್ಕ, ಡಿಡಿಪಿಯು ನಾಗರಾಜ್ ಕಾಗಲ್‌ಕರ್, ಡಿಡಿಪಿಐ ರಮೇಶ್, ಟಿಹೆಚ್‌ಓ ಡಾ.ಚಂದ್ರಶೇಖರ್ ಇದ್ದರು. ಆಂಗ್ಲಭಾಷೆ ಉಪನ್ಯಾಸಕ ಯೋಗೀಶ್.ಎಸ್ ಸ್ವಾಗತಿಸಿದರು. ಬಿಹೆಚ್‌ಇಓ ಪ್ರತಿಮಾ ನಿರೂಪಿಸಿದರು.
ಶಾಲೆಗಳು ನಡೆಯುತ್ತಿವೆ. ಶಾಲೆಗಳು ಮತ್ತು ಹಾಸ್ಟೆಲ್‌ಗಳಲ್ಲಿ ಸೋಂಕು ಹರಡುವ ಸಂಭವ ಹೆಚ್ಚಿದ್ದು, ಮಕ್ಕಳು ಸರತಿ ಪ್ರಕಾರ ಲಸಿಕೆಯನ್ನು ಪಡೆಯುವ ಮೂಲಕ ಲಸಿಕಾಕರಣದ ಯಶಸ್ಸಿಗೆ ಸಹಕರಿಸಬೇಕು .
ಎಂ.ಎಲ್.ವೈಶಾಲಿ, ಜಿ.ಪಂ ಸಿಇಓ