ಶಿವಮೊಗ್ಗ ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಅಗತ್ಯವಿಲ್ಲ ಎಂಬ ಜಿಲ್ಲಾ ಉಸ್ತುವಾರಿ ಸಚಿವ ಕೆ ಎಸ್ ಈಶ್ವರಪ್ಪ ನವರ ಅಭಿಪ್ರಾಯ ಸೂಕ್ತವಾಗಿದ್ದು, ಯಾವುದೇ ಕಾರಣಕ್ಕೂ ಶಿವಮೊಗ್ಗದಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಮಾಡಬಾರದು ಎಂದು ಸರ್ಕಾರವನ್ನು ಕಾಂಗ್ರೆಸ್ ವಕ್ತಾರ ಕೆ.ಬಿ ಪ್ರಸನ್ನ ಕುಮಾರ್ ಒತ್ತಾಯಿಸಿದ್ದಾರೆ.
ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಕೆ.ಬಿ ಪ್ರಸನ್ನ ಕುಮಾರ್, ಶಿವಮೊಗ್ಗದ ನಾಗರಿಕರು ಕೋವಿಡ್ ಗೆ ಸಂಬಂಧಿಸಿದಂತೆ ಸರ್ಕಾರದ ನಿಯಮಾವಳಿಯನ್ನು ಅನುಸರಿಸುವಲ್ಲಿ ಬೇರೆ ಜಿಲ್ಲೆಗಳಿಗೆ ಹೋಲಿಸಿದಾಗ ಹೆಚ್ಚು ಎಚ್ಚರ ವಹಿಸುತ್ತಾರೆ. ಹೀಗಿರುವಾಗ ಸರ್ಕಾರ ಅನಗತ್ಯ ವೀಕೆಂಡ್ ಕರ್ಪ್ಯೂ ಜಾರಿ ಮಾಡಲು ಅವಸರ ಮಾಡುವುದು ಸರಿಯಲ್ಲ ಎಂದಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ ಹಿಂದಿನೆಲ್ಲಾ ಲಾಕ್ ಡೌನ್ ಗಳಿಂದ ಜನರು ಮತ್ತು ವ್ಯಾಪಾರಸ್ಥರು ಸಂಕಷ್ಟಕ್ಕೆ ಒಳಗಾಗಿದ್ದರು.ಈಗ ಸ್ವಲ್ಪ ಮಟ್ಟಿಗೆ ಉಸಿರಾಡುವ ಸ್ಥಿತಿ ತಲುಪಿರುವಾಗಲೇ ಮತ್ತೆ ವಿಕೇಂಡ್ ಕರ್ಪ್ಯೂ ಜಾರಿ ಮಾಡುವುದರಿಂದ ಜಿಲ್ಲೆಯ ವ್ಯಾಪಾರೋದ್ಯಮ ತೀವ್ರ ನಷ್ಟಕ್ಕೆ ಈಡಾಗಬೇಕಾಗುತ್ತದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಸಲಹೆ ಯೋಗ್ಯವಾಗಿದ್ದು, ಜಿಲ್ಲೆಯವರೆ ಆದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ವೀಕೆಂಡ್ ಕರ್ಫ್ಯೂ ಕೈಬಿಡುವ ಕುರಿತು ಆದೇಶ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಪಕ್ಷ ರಾಜಕಾರಣ ಕೈಬಿಡಿ
ಆಡಳಿತ ಪಕ್ಷವಾದ ಬಿಜೆಪಿ ವೀಕೆಂಡ್ ಕರ್ಫ್ಯೂ,ಲಾಕ್ ಡೌನ್ ಇತ್ಯಾದಿ ಜಾರಿಗೊಳಿಸುವ ಸಂದರ್ಭದಲ್ಲಿ ಪಕ್ಷ ರಾಜಕಾರಣ ಮಾಡುವುದನ್ನು ಕೈಬಿಡಬೇಕು. ರಾಜಕೀಯ ವಿರೋಧಿಗಳನ್ನು ಹಣಿಯಲು ಕೋವಿಡ್ ಮಾರ್ಗಸೂಚಿಯನ್ನು ಬಳಸಿಕೊಳ್ಳುವ ಪ್ರಯತ್ನ ಕೈಬಿಟ್ಟಲ್ಲಿ ಮಾತ್ರವೇ ಸರ್ಕಾರ ಸಾಮಾನ್ಯ ಜನರ ವಿಶ್ವಾಸ ಗಳಿಸಲಿದೆ ಎಂದು ತಿಳಿಸಿದ್ದಾರೆ.
previous post