Malenadu Mitra
ರಾಜ್ಯ ಶಿವಮೊಗ್ಗ

ಅಕ್ರಮ ಮರಳುಗಾರಿಕೆ ಯಾರೇ ಮಾಡಿದರೂ ಕ್ರಮ, ಬರೀ ಹೆಸರಿಗೆ ಸಚಿವನಾಗಿರಲಾರೆ : ಆರಗ ಜ್ಞಾನೇಂದ್ರ

ಶಿವಮೊಗ್ಗ: ಅಕ್ರಮ ಮರಳು ಅಥವಾ ಕಲ್ಲುಗಣಿಗಾರಿಕೆ ತಪ್ಪು. ಯಾರೇ ಇದನ್ನು ನಡೆಸುತ್ತಿದ್ದರೂ ಅವರ ವಿರುದ್ಧ ಕ್ರಮವಾಗಬೇಕೆಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಪ್ರೆಸ್ ಟ್ರಸ್ಟ್‌ನಲ್ಲಿ ಶನಿವಾರ ಏರ್ಪಡಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಮರಳು ಮತ್ತು ಜಲ್ಲಿ ದರ ಗಗನಕ್ಕೇರಿದೆ. ಇದಕ್ಕಾಗಿ ಹಲವರು ಅಕ್ರಮವಾಗಿ ನಡೆಸುತ್ತಿದ್ದಾರೆ. ಸುಮಾರು ೩೨ ಲಕ್ಷ ರೂ. ನಷ್ಟು ಮರಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆದರೂ ಮರಳುಕಳ್ಳತನ ನಡೆಯುತ್ತಿದೆ. ಕೋರೆಗಳನ್ನೆಲ್ಲ ಕಾನೂನುಬದ್ಧಗೊಳಿಸುವ ಕೆಲಸ ನಡೆಯುತ್ತಿದೆ. ಜನರಿಗೆ ಅತಿ ಸುಲಭದಲ್ಲಿ ಮರಳು ಸಿಗುವಂತಾಗಬೇಕು ಎಂದರು.
ಇನ್ನೂ ಕೂಡ ಮರಳು ಕ್ವಾರಿಗಳು ಅಧಿಕೃತವಾಗಿ ಆರಂಭವಾಗಿಲ್ಲ. ಆರಂಭವಾದಾಕ್ಷಣ ಕಡಿಮೆ ದರದಲ್ಲಿ ಮರಳು ಪೂರೈಸಲಾಗುವುದು. ಅಲ್ಲಿಯವರೆಗೆ ಕ್ರಮವಾಗದಂತೆ ಪೊಲೀಸರು ಮತ್ತು ಇತರ ಇಲಾಖೆಯವರು ಗಮನಿಸುತ್ತಾರೆ ಎಂದರು.
ರಾಜ್ಯದಾದ್ಯಂತ ಗಾಂಜಾ ಸಮಸ್ಯೆ ವ್ಯಾಪಕವಾಗಿ ತಳವೂರಿದೆ. ಇದು ಇಲಾಖೆಯ ನಿದ್ದೆಗೆಡಿಸಿದೆ. ಇಲಾಖೆ ಸಹ ಚುರುಕಾಗಿ ಕೆಲಸ ಮಾಡುತ್ತಿದೆ. ಯುವ ಸಮೂಹ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಗಾಂಜಾಸೇವನೆಗೆ ತುತ್ತಾಗುತ್ತಿದೆ. ಇದನ್ನು ತಪ್ಪಿಸಲು ಎಲ್ಲಾ ಕ್ರಮ ಜರುಗಿಸಲಾಗುತ್ತಿದೆ. ಮಾದಕ ವಸ್ತ್ತು ಸೇವನೆಯ ಪಿಡುಗನ್ನು ನಿರ್ಮೂಲನೆ ಮಾಡುವ ದೊಡ್ಡ ಜವಾಬ್ದಾರಿ ಇಲಾಖೆಯ ಮೇಲಿದೆ ಎಂದರು.
ಶಿವಮೊಗ್ಗಕ್ಕೆ ಆಂದ್ರಪ್ರದೇಶದಿಂದ ಗಾಂಜಾ ಬರುವುದು ಬೆಳಕಿಗೆ ಬಂದಿದೆ. ಇಲ್ಲಿಯವರೆಗೆ ಸುಮಾರು ೨೦೦ ಕೆಜಿಯಷ್ಟು ಗಾಂಜಾ ವಶಕ್ಕೆ ಪಡೆಯಲಾಗಿದೆ. ಗಾಂಜಾ ಸೇವನೆ ಮಾಡುತ್ತಿರುವವರ ವಿರುದ್ದವೂ ಪ್ರಕರಣ ದಾಖಲಿಸಲಾಗುತ್ತಿದೆ. ಇಂತಹ ೧೬೦ ಕೇಸು ದಾಖಲಾಗಿದೆ. ಈಗ ಗಾಂಜಾಸೇವನೆ ಮಾಡಿದ್ದನ್ನು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ. ಸಾಷಕ್ಟು ಯುವಕರು ಇದರಲ್ಲಿ ಸಿಕ್ಕಿಬಿದ್ದಿದ್ದಾರೆ. ಆದರೆ ಪತ್ತೆ ಮಾಡಲಾರಂಭಿಸಿದ್ದರಿಂದ ಬಹಳಷ್ಟು ಜನ ಇದರ ಸಹವಾಸ ಬಿಟ್ಟಿದ್ದಾರೆಂದು ಹೇಳಿದರು.
ಹೆಲ್ಮೆಟ್ ಮತ್ತು ದಂಡ:
ಪೊಲೀಸರು ಅಡ್ಡಗಟ್ಟಿ ಹೆಲ್ಮೆಟ್ ಇಲ್ಲದವರಿಗೆ ದಂಡ ಹಾಕುತ್ತಿರುವ ಬಗ್ಗೆ ಪಶ್ನಿಸಿದಾಗ ಉತ್ತರಿಸಿದ ಅವರು, ಮೊದಲು ನಮ್ಮ ತಲೆಯನ್ನು ಗಟ್ಟಿಯಾಗಿ ಇಟ್ಟುಕೊಳ್ಳಬೇಕು. ಯಾರೇ ಆಗಲಿ ಕಾನೂನನ್ನು ದುರುಪಯೋಗ ಮಾಡಿಕೊಳ್ಳಬಾರದು. ಶಿವಮೊಗ್ಗ ನಗರದ ರಸ್ತೆಗಳು ಸರಿಯಾಗಬೇಕಿದೆ. ಅಲ್ಲಿಯವರೆಗೆ ಪೊಲೀಸರು ಸಹಕರಿಸುತ್ತಾರೆ. ಇದನ್ನೇ ಸದಾ ದುರುಪಯೋಗ ಮಾಡಿಕೊಳ್ಳಬಾರದು ಎಂದರಲ್ಲದೆ, ಬಿಜೆಪಿ ಕಾರ್‍ಯಕರ್ತನೊಬ್ಬ ಮನೆಯಿಂದ ಹತ್ತಿರದ ಮೆಡಿಕಲ್ ಶಾಪ್‌ಗೆ ಔಷಧಿ ತರಲು ಹೋಗುವಾಗ ಪೊಲೀಸರು ಹಿಡಿದು ದಂಡ ಹಾಕಿದ್ದರು. ಆತ ತನಗೆ ಕರೆ ಮಾಡಿ ವಿವರಿಸಿದ. ಅದಕ್ಕೆ ತಾನು ತಲೆಗಟ್ಟಿಯಾಗಿರಲು ಹೆಲ್ಮೆಟ್ ಹಾಕಿಕೊಳ್ಳಲೇಬೇಕು. ಇಲ್ಲಿ ದೂರ ಮುಖ್ಯವಲ್ಲ ಎಂದಿದ್ದಾಗಿ ವಿವರಿಸಿದರು.
ಶಿವಮೊಗ್ಗದಲ್ಲಿ ಪೊಲೀಸ್ ಕಮಿಷನರ್ ಕಚೇರಿ ಸ್ಥಾಪನೆ ಬಗ್ಗೆ ಮಾತನಾಡಿದ ಅವರು, ಶಿವಮೊಗ್ಗ- ಭದ್ರಾವತಿ ಸೇರಿಸಿದರೆ ಕಮಿಷನರ್ ಕಚೇರಿ ಮಾಡಬಹುದು. ಆದರೆ ಕಮಿಷನರ್ ವ್ಯಾಪ್ತಿ ಚಿಕ್ಕದಾಗುತ್ತದೆ. ಎಸ್‌ಪಿ ಇಡೀ ಜಿಲ್ಲೆಗೆ ಸಂಬಂಧಿಸಿದವರಾಗಿರುತ್ತಾರೆ. ಕಮಿಷನರ್ ಬಂದ ಮೇಲೆ ಹಿರಿಯ ಅಧಿಕಾರಿ ಅವರಾಗಿದ್ದರೂ, ಕಡಿಮೆ ವ್ಯಾಪ್ತಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಆದರೂ ಈ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದರು.
ನಾವು ಯಾವ ಸ್ಥಾನಕ್ಕೆ ಹೋಗುತ್ತೇವೆಯೊ ಆ ಸ್ಥಾನದ ಘನತೆ ಎತ್ತಿಹಿಡಿಯಬೇಕು. ಹೆಸರಿಗಷ್ಟೇ ಮಂತ್ರಿಯಾಗಿರಲು ತನಗೆ ಇಷ್ಟವಿಲ್ಲ. ಆದ್ದರಿಂದ ಪ್ರ್ರಾಮಾಣಿಕವಾಗಿ ಕರ್ತವ್ಯ ಮಾಡುತ್ತಿದ್ದೇನೆ. ಸಮಸ್ಯೆಯ ಬಗ್ಗೆ ಅರಿತುಕೊಂಡು ಅದನ್ನು ಬಗೆಹರಿಸಲು ಯತ್ನಿಸುತ್ತಿದ್ದೇನೆ. ಪೊಲೀಸರಿಂದ ಸಣ್ಣ ಪುಟ್ಟ ಲೋಪ ಆಗಿರಬಹುದು. ಆದರೆ ಪೊಲೀಸರೇ ಇರದಿದ್ದರೆ ನಮ್ಮ ರಕ್ಷಣೆ, ಆಸ್ತಿ, ಪಾಸ್ತಿ, ಮಾನದ ರಕ್ಷಣೆ ಸಾಧ್ಯವಾಗಿರುತ್ತಿತ್ತೇ ಎಂದು ಪ್ರಶ್ನಿಸಿದ ಅವರು, ತಜ್ಞರಿಂದ ಸಲಹೆ ಪಡೆದು ಕೆಲಸ ನಿರ್‍ವಹಿಸುತ್ತಿದ್ದೇನೆ ಎಂದು ಹೇಳಿದರು.
ಕಾಂಗ್ರೆಸ್ ಹಮ್ಮಿಕೊಂಡಿದ್ದ ಮೇಕೆದಾಟು ಪಾದಯಾತ್ರೆಯಲ್ಲಿ ಭಾಗವಹಿಸಿದವರಲ್ಲಿ ಶೇ. ೬೦ ಜನರಿಗೆ ಕೊರೊನಾ ತಗುಲಿದೆ. ಪೊಲೀಸರೂ ಸಹ ಇದರಿಂದ ಬಳಲುತ್ತಿದ್ದಾರೆ. ಹಾಸನ, ಮೈಸೂರು, ಮಂಡ್ಯ ಮತ್ತು ತುಮಕೂರು ಈ ನಾಲ್ಕು ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣ ದಿನೇ ದಿನೇ ಹೆಚ್ಚುತ್ತಿದೆ. ಇದಕ್ಕೆ ಪಾದಯಾತ್ರೆಯೂ ಒಂದು ಕಾರಣ. ಪಾದಯಾತ್ರೆ ನಿಲ್ಲಿಸಿ ಎಂದು ಮನವಿ ಮಾಡಿದರೂ ಅದನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡರು ಎಂದು ಹೇಳಿದರು.
ಸೈಬರ್ ಠಾಣೆಗಳಿಗೆ ಶಕ್ತಿ
ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಹೆಚ್ಚುತ್ತಿದ್ದು, ಈ ಕಾರಣದಿಂದ ಜಿಲ್ಲೆಗೊಂದು ಸೈಬರ್ ಠಾಣಿ ಉನ್ನತೀಕರಿಸಲಾಗಿದೆ. ಬೆಂಗಳೂರಿನಲ್ಲಿ ಇನ್ಫೋಸಿಸ್ ನವರು ಸುಮಾರು ೨೦ ಕೋಟಿ ಅಂದಾಜು ವೆಚ್ಚದಲ್ಲಿ ಅತ್ಯಾಧುನಿಕವಾಗಿ ಸೈಬರ್ ಕೇಂದ್ರ ನಿರ್ಮಾಣ ಮಾಡಿಕೊಟ್ಟಿದೆ. ಇದರಿಂದ ರಾಜ್ಯದಲ್ಲಿ ಆನ್‌ಲೈನ್ ಅಪರಾಧ ಸೇರಿದಂತೆ ಎಲ್ಲ ಬಗೆಯ ತನಿಖೆಗೆ ಅನುಕೂಲವಾಗಿದೆ. ರಾಜ್ಯದ ವಿವಿಧ ಸೈಬರ್ ಠಾಣೆಗಳಿಗೆ ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದು ಸಚಿವರು ಹೇಳಿದರು.
ಎರಡು ಹೊಸ ಫೋರೆನ್ಸಿಕ್ ಲ್ಯಾಬ್
ರಾಜ್ಯದ ಬೆಳಗಾಂ ಹಾಗೂ ಬಳ್ಳಾರಿಯಲ್ಲಿ ಫೋರೆನ್ಸಿಕ್ ಲ್ಯಾಬ್ ನಿರ್ಮಾಣ ಮಾಡಲಾಗುತ್ತದೆ. ಶಿವಮೊಗ್ಗದಲ್ಲಿ ಪೊಲೀಸ್ ವಸತಿಗೃಹ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಅದೇರೀತಿ ತೀರ್ಥಹಳ್ಳಿಯಲ್ಲಿಯೂ ವಸತಿಗೃಹ ಹಾಗೂ ಪೊಲೀಸ್ ಠಾಣೆ ನಿರ್ಮಾಣ ಕೈಗೆತ್ತಿಗೊಳ್ಳಲಾಗುವುದು ಎಂದು ಆರಗ ಜ್ಞಾನೇಂದ್ರ ಹೇಳಿದರು. ಸಂವಾದದಲ್ಲಿ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ, ಕಾರ್‍ಯದರ್ಶಿ ನಾಗರಾಜ ನೇರಿಗೆ, ಮಾಧ್ಯಮ ಅಕಾಡೆಮಿ ಸದಸ ಗೋಪಾಲ ಯಡಗೆರೆ ಹಾಜರಿದ್ದರು.


ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರಿಗೆ ನಂದಿತಾ ಪ್ರಕರಣದಿಂದ ಸೋಲಾಯಿತು ಎಂಬ ಪಾಪಪ್ರಜ್ಞೆ ಕಾಡುತ್ತಿದೆ. ಅದಕ್ಕಾಗಿ ಇದೇ ವಿಚಾರವನ್ನು ಮತ್ತೆ ಕೆದಕಿ ಗೆಲುವು ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ನಂದಿತಾ ಪ್ರಕರಣದ ಸಾಕ್ಷಿಗಳು ನಾಶವಾಗಿ ಮಣ್ಣು ಹಿಡಿದಿದೆ. ಈಗ ಸಿಬಿಐಗೆ ವಹಿಸುವಂತೆ ಅವರು ಕೇಳುತ್ತಿದ್ದಾರೆ. ಅದಕ್ಕಾಗಿ ಉಪವಾಸ ಸತ್ಯಾಗ್ರಹ ಮಾಡುವುದಾದರೆ ಮಾಡಲಿ

ಆರಗ ಜ್ಞಾನೇಂದ್ರ

Ad Widget

Related posts

ಮಾ.27ರಂದು ಮೆಗಾ ಲೋಕ ಅದಾಲತ್

Malenadu Mirror Desk

ಬರಿದಾದ ಶರಾವತಿ ಒಡಲು, ಸಿಗಂದೂರು ಲಾಂಚ್ ಸಂಚಾರಕ್ಕೆ ಕುತ್ತು?, ಮಳೆಬಂದು ಹಿನ್ನೀರು ಹಿಗ್ಗದಿದ್ದಲ್ಲಿ ಸಾರ್ವಜನಿಕ ಸಂಚಾರಕ್ಕೆ ತೊಂದರೆ

Malenadu Mirror Desk

ಕಾಂಗ್ರೆಸ್‍ನ ಪಂಚಕೌರವರಿಂದ ಕುರ್ಚಿ ಕನಸು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.